Hubli: Karnataka TV Special Story: ಜನರ ದಾಹ ತಣಿಸುವ ಬದಲು, ಜೀವಕ್ಕೇ ಕುತ್ತು ತರುತ್ತಿದೆ ಈ ಕೆರೆ

Hubli News: ಶತಮಾನಗಳಿಂದ ಸಾವಿರಾರು ಜನರ ದಾಹ ತಣಿಸುತ್ತಿರುವ ಕೆರೆಯೊಂದು ಈಗ ಜೀವಜಲದ ಬದಲು ಜೀವಕ್ಕೆ ಕುತ್ತು ತರುವ ಸ್ಥಿತಿಗೆ ತಲುಪಿದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಜೀವ ಕೈಯಲ್ಲಿಡಿದು ಕುಡಿಯುವ ನೀರಿಗಾಗಿ ಕೆರೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯತಿಯ ನಿರ್ಲಕ್ಷ್ಯದಿಂದ ಗ್ರಾಮಸ್ಥರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದಲ್ಲಿರುವ ಈ ಐತಿಹಾಸಿಕ ಕೆರೆ ಶತಮಾನಗಳಿಂದ ಗ್ರಾಮಸ್ಥರ ನೀರಿನ ಅಗತ್ಯ ಪೂರೈಸುತ್ತಿದೆ. ಆದರೆ ಇದೀಗ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಉದಾಸೀನತೆಯಿಂದ ಈ ಕೆರೆ ಅಪಾಯದ ತಾಣವಾಗಿ ಮಾರ್ಪಟ್ಟಿದೆ. ಹಗಲಿನ ವೇಳೆಯಲ್ಲಿಯೇ ನೀರು ತರಲು ಗ್ರಾಮಸ್ಥರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

“ಹಲ್ಲು ಇದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲು ಇಲ್ಲ” ಎನ್ನುವ ಗಾದೆ ಧಾರವಾಡ ಜಿಲ್ಲೆಯ ಕೆಲವು ಗ್ರಾಮಗಳಿಗೆ ಅಕ್ಷರಶಃ ಅನ್ವಯವಾಗುತ್ತಿದೆ. ಕೆಲವೆಡೆ ಕುಡಿಯುವ ನೀರೇ ಇಲ್ಲ. ಇನ್ನೂ ಕೆಲವೆಡೆ ನೀರಿನ ಮೂಲಗಳಿದ್ದರೂ ಶುದ್ಧ ನೀರು ಸಿಗುತ್ತಿಲ್ಲ. ಮಂಟೂರು ಗ್ರಾಮದಲ್ಲಿ ಜನರಿಗೆ ಹನಿ ನೀರಿಗಾಗಿ ಇದೇ ಕೆರೆಯನ್ನೇ ಆಶ್ರಯಿಸಬೇಕಾಗಿದೆ.

ಆದರೆ ವರ್ಷಗಳಿಂದ ಕೆರೆಯ ಹೂಳೆತ್ತುವ ಕೆಲಸ ನಡೆದಿಲ್ಲ. ನಿರ್ವಹಣೆ ಕೊರತೆಯಿಂದ ಕೆರೆ ದಡದಲ್ಲಿ ಮುಳ್ಳಿನ ಗಿಡಗಳು, ಪೊದೆಗಳು ಬೆಳೆದಿವೆ. ಇದರಿಂದ ಹಾವು, ಚೇಳು ಸೇರಿದಂತೆ ವಿಷಕಾರಿ ಪ್ರಾಣಿಗಳು ಆಶ್ರಯ ಪಡೆದಿದ್ದು, ನೀರು ತರಲು ಬರುವ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಜೀವಕ್ಕೆ ಅಪಾಯ ಉಂಟಾಗಿದೆ.

ಹುಬ್ಬಳ್ಳಿ ನಗರಕ್ಕೆ ಸಮೀಪದಲ್ಲಿರುವ ಮಂಟೂರು ಗ್ರಾಮದಲ್ಲಿ ಇಂದಿಗೂ ಸಮರ್ಪಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶುದ್ಧ ನೀರು ಪಡೆಯಬೇಕಾದರೆ ಸುಮಾರು ಎರಡು ಕಿಲೋಮೀಟರ್ ದೂರ ತೆರಳಬೇಕಾಗುತ್ತದೆ. ಹೀಗಾಗಿ ಗ್ರಾಮಸ್ಥರು ಈ ಕೆರೆಯ ನೀರನ್ನೇ ಕುಡಿಯಲು ಹಾಗೂ ಅಡುಗೆಗೆ ಬಳಸುತ್ತಿದ್ದಾರೆ.

ಆದರೆ ಕೆರೆ ಸ್ವಚ್ಛತೆ ಮತ್ತು ಜೀರ್ಣೋದ್ಧಾರ ಕಾಮಗಾರಿ ನಡೆಯದ ಕಾರಣ ನೀರು ಮಲಿನಗೊಳ್ಳುತ್ತಿದ್ದು, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಮಲೀನ ನೀರು ಸೇವನೆಯಿಂದ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಕೂಡ ಎದುರಾಗಿದೆ.

ಇನ್ನೂ ಈ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕೆರೆ ಮಲಿನವಾಗಲು ಜನರೇ ಕಾರಣ ಎಂದು ಹೇಳುತ್ತಿರುವ ಆರೋಪ ಕೇಳಿಬಂದಿದೆ.

ಕೆರೆಯ ಸ್ವಚ್ಛತೆ ಹಾಗೂ ನಿರ್ವಹಣೆ ಕುರಿತು ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನ. ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿಬರುತ್ತಿದೆ.

ಒಟ್ಟಾರೆ, ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಈ ಕೆರೆಯೇ ಇಂದು ಮಂಟೂರು ಗ್ರಾಮಸ್ಥರಿಗೆ ಆತಂಕದ ಕೇಂದ್ರವಾಗಿದೆ.

ಹೂಳು ತುಂಬಿಕೊಂಡಿರುವ ಕೆರೆಯನ್ನು ತುರ್ತಾಗಿ ಸ್ವಚ್ಛಗೊಳಿಸುವುದು, ಮುಳ್ಳಿನ ಗಿಡಗಳನ್ನು ತೆರವುಗೊಳಿಸುವುದು ಹಾಗೂ ಶುದ್ಧ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ.

ಜೀವದ ಹಂಗು ತೊರೆದು ನೀರು ತರುವ ಈ ದುಸ್ಥಿತಿಗೆ ಯಾವಾಗ ಮುಕ್ತಿ ಸಿಗಲಿದೆ ಎಂಬ ಪ್ರಶ್ನೆ ಇದೀಗ ಗ್ರಾಮಸ್ಥರನ್ನು ಕಾಡುತ್ತಿದೆ.

ಕ್ಯಾಮೆರಾಮ್ಯಾನ್ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author