Hubli News: CCB ಪೊಲೀಸರ ಭರ್ಜರಿ ದಾಳಿ: 3.2 ಕೆಜಿ ಗಾಂಜಾ ಸಹಿತ ಇಬ್ಬರು ಬಂಧನ

Hubli News: ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3 ಕೆಜಿ 213 ಗ್ರಾಂ ಗಾಂಜಾ ಸೇರಿದಂತೆ 1 ಲಕ್ಷ 60 ಸಾವಿರದ 650 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಕಾರವಾರ ರೋಡ್ ಬ್ರಿಡ್ಜ್‌ನಿಂದ ತಿಮ್ಮಸಾಗರಕ್ಕೆ ಹೋಗುವ ರಸ್ತೆಯ ಸಮೀಪ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ದಾಳಿ ನಡೆಸಿದೆ.

ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಅವರ ಬಳಿಯಿದ್ದ 3 ಕೆಜಿ 213 ಗ್ರಾಂ ಗಾಂಜಾ, ಎರಡು ಮೊಬೈಲ್ ಫೋನ್ ಹಾಗೂ 1,500 ರೂಪಾಯಿ ನಗದು ಸೇರಿದಂತೆ ಒಟ್ಟು 1 ಲಕ್ಷ 60 ಸಾವಿರದ 650 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು 26 ವರ್ಷದ ತೇಜಸ್ ರಾಮಗಿರಿ, ಕಲಘಟಗಿ ತಾಲೂಕಿನ ಬಾಣಗಿ-ಗುಡಿಹಾಳ ಕ್ರಾಸ್ ನಿವಾಸಿ ಹಾಗೂ 26 ವರ್ಷದ ಜೋಸೆಫ್ ದಾಸ್, ಹಳೇ ಹುಬ್ಬಳ್ಳಿಯ ಆನಂದನಗರ ನಿವಾಸಿ ಎಂದು ಗುರುತಿಸಲಾಗಿದೆ.

ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ಗಾಂಜಾ ಎಲ್ಲಿಂದ ಬಂದಿತ್ತು ಹಾಗೂ ಯಾರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬುದರ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author