Hubli News: ಮಾಂಜಾ ದಾರ ಮನುಷ್ಯರ ಜೀವಕ್ಕೆ ಮಾತ್ರವಲ್ಲ, ಮೂಕ ಪಕ್ಷಿಗಳಿಗೂ ಕಂಟಕವಾಗಿದೆ..! ಗಾಳಿಪಟಕ್ಕೆ ಬಳಸುವ ಮಾಂಜಾ ದಾರಕ್ಕೆ ಸಿಲುಕಿ ಮರದಲ್ಲಿ ನೇತಾಡುತ್ತಿದ್ದ ಗೂಬೆಯೊಂದನ್ನು ಯುವಕನೊಬ್ಬ ರಕ್ಷಿಸಿರುವ ಘಟನೆ ಹುಬ್ಬಳ್ಳಿಯ ವಿಜಯನಗರದ ಗೋಲ್ಡನ್ ಪಾರ್ಕ್‌ನಲ್ಲಿ ನಡೆದಿದೆ. ಗೂಬೆಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ಎನೋಸ್ ಎಂಬ ಯುವಕ, ಮಾಂಜಾ ದಾರದಿಂದ ಬಿಡಿಸಿ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. ಯುವಕನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಮರದಲ್ಲಿ ನೇತಾಡುತ್ತಾ ಚೀರಾಡುತ್ತಿದ್ದ ಗೂಬೆ..! ಮಾಂಜಾ ದಾರದಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದ ಮೂಕ ಪಕ್ಷಿ..!
ಹುಬ್ಬಳ್ಳಿಯ ವಿಜಯನಗರದ ಗೋಲ್ಡನ್ ಪಾರ್ಕ್‌ನಲ್ಲಿ ಕಂಡುಬಂದ ದೃಶ್ಯವಿದು. ಗಾಳಿಪಟಕ್ಕೆ ಬಳಸಿದ್ದ ಮಾಂಜಾ ದಾರಕ್ಕೆ ಸಿಲುಕಿದ ಗೂಬೆ ಮರದಲ್ಲಿ ನೇತಾಡುತ್ತಿತ್ತು. ಗೂಬೆಯ ಚೀರಾಟ ಕೇಳಿದ ಗೋಲ್ಡನ್ ಪಾರ್ಕ್‌ನ ಎನೋಸ್ ಎಂಬ ಯುವಕ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.
ಮರದಲ್ಲಿ ಸಿಲುಕಿದ್ದ ಗೂಬೆಯನ್ನು ಎಚ್ಚರಿಕೆಯಿಂದ ಕೆಳಗಿಳಿಸಿ, ಅದರ ದೇಹಕ್ಕೆ ಸುತ್ತಿಕೊಂಡಿದ್ದ ಮಾಂಜಾ ದಾರದಿಂದ ಬಿಡಿಸಿದ್ದಾರೆ. ಬಳಿಕ ಗೂಬೆಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ. ಗೂಬೆ ಚೇತರಿಸಿಕೊಂಡ ನಂತರ ಅದನ್ನು ಸ್ವತಂತ್ರವಾಗಿ ಹಾರಲು ಬಿಟ್ಟಿದ್ದಾರೆ.
ಮನುಷ್ಯರ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ಮಾಂಜಾ ದಾರ ಈಗ ಮೂಕ ಪಕ್ಷಿಗಳಿಗೂ ಮಾರಕವಾಗುತ್ತಿದೆ. ಪಕ್ಷಿಯ ಜೀವ ಉಳಿಸಿದ ಎನೋಸ್ ಅವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗಾಳಿಪಟ ಹಾರಿಸುವ ಸಂಭ್ರಮದ ನಡುವೆ ಮಾಂಜಾ ದಾರದಿಂದ ಮತ್ತೊಂದು ಜೀವಕ್ಕೆ ಅಪಾಯ ಎದುರಾಗಿದೆ. ಮನುಷ್ಯರಷ್ಟೇ ಅಲ್ಲ, ಪಕ್ಷಿಗಳಿಗೂ ಕುತ್ತಾಗುತ್ತಿರುವ ಈ ಅಪಾಯಕಾರಿ ದಾರವನ್ನು ಯಾರೂ ಬಳಸಬಾರದು ಎಂದು ಎನೋಸ್ ಮನವಿ ಮಾಡಿದ್ದಾರೆ. ಮಾಂಜಾ ದಾರದ ಮಾರಾಟ ಮತ್ತು ಬಳಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೂಡ ಆಗ್ರಹಿಸಿದ್ದಾರೆ.
ಒಂದು ಗೂಬೆಯ ಜೀವ ಉಳಿಸಿದ ಯುವಕನ ಕಾರ್ಯ ಎಲ್ಲರಿಗೂ ಮಾದರಿ. ಗಾಳಿಪಟ ಹಾರಿಸುವಾಗ ಪಕ್ಷಿಗಳ ಜೀವಕ್ಕೂ ಕಾಳಜಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ.




