Monday, April 21, 2025

Latest Posts

Hubli News: ಹುಬ್ಬಳ್ಳಿ ವಿಮಾನ ನಿಲ್ದಾಣದ‌ ಮೇಲೆ ಖಾಸಗಿಯವರ ಕಣ್ಣು..

- Advertisement -

Hubli News: ಉತ್ತರ ಕರ್ನಾಟಕದಲ್ಲಿಯೇ ಅತ್ಯುತ್ತಮ ವಿಶ್ವ ದರ್ಜೆಯ ಗುಣಮಟ್ಟ ನೀಡುವ ನಿಟ್ಟಿನಲ್ಲಿ, ಬಹುದೊಡ್ಡ ನಿರೀಕ್ಷೆಯಲ್ಲಿ
ಅಭಿವೃದ್ಧಿಗೊಳ್ಳುತ್ತಿರುವ ಹುಬ್ಬಳ್ಳಿಯ ವಿಮಾನದ ನಿಲ್ದಾಣದ ಮೇಲೆ ಈಗ ಖಾಸಗಿಯವರ ಕಣ್ಣು ಬಿದ್ದಿದೆ. ಇಷ್ಟು ದಿನ ಇತ್ತ ತಿರುಗಿ ನೋಡದ ಖಾಸಗಿ ಕಂಪನಿಗಳು ಈಗ ನೂರಾರು ಕೋಟೆಯಲ್ಲಿ ಮರು ನಿರ್ಮಾಣಗೊಳ್ಳುತ್ತಿರುವ, ವಿಮಾನ ನಿಲ್ದಾಣದ ಮುಂದಿನ ಅಭಿವೃದ್ಧಿ ಮತ್ತು‌ ನಿರ್ವಹಣೆ ಗುತ್ತಿಗೆ ಪಡೆಯಲು ಮುಂದಾಗಿದ್ದು, ಒಟ್ಟು ದಶಕಗಳ ಅವಧಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗೀಕರಣವಾಗುತ್ತಿದೆ..

ವಾಣಿಜ್ಯ ನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗಿಯವರ ಕೈ ಸೇರಲು ಸಿದ್ಧವಾಗಿದೆ. ಒಟ್ಟು 30 ವರ್ಷಗಳ ಅವಧಿಗೆ ಖಾಸಗಿ ಸಂಸ್ಥೆಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ‌. ಹೆಚ್ಚು ಮೊತ್ತಕ್ಕೆ ಬಿಡ್ಡಿಂಗ್ ಸಲ್ಲಿಸುವ ಕಂಪನಿಗೆ ಟೆಂಡ‌ರ್ ನೀಡಲಾಗುತ್ತದೆ. ಸದ್ಯ ಹುಬ್ಬಳ್ಳಿ ನಿಲ್ದಾಣದಲ್ಲಿ ಎಎಐ ಪ್ರಾಧಿಕಾರದಡಿ 70 ಸಿಬ್ಬಂದಿ ಇದ್ದಾರೆ. 250ಕ್ಕೂ ಹೆಚ್ಚು ಸಿಬ್ಬಂದಿ ವಿವಿಧ ಖಾಸಗಿ ಏಜೆನ್ಸಿಗಳಿಂದ ನೇಮಕವಾಗಿದ್ದಾರೆ. ಈಗ ಟೆಂಡ‌ರ್ ಪಡೆದ ಕಂಪನಿ ತಮಗೆ ಬೇಕಾದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಪಡೆಯುತ್ತದೆ. ಇದರ ಜೊತೆಗೆ ನಿಲ್ದಾಣದ ನಿರ್ವಹಣೆ, ಅಭಿವೃದ್ಧಿ ಹೊಣೆ ಮಾತ್ರ ಖಾಸಗಿ ಸಂಸ್ಥೆ ವಹಿಸಿಕೊಳ್ಳಲಿದೆ. ಇನ್ನೂಳಿದಂತೆ ವಾಯು ಸಂಚಾರ ದಟ್ಟಣೆ ನಿಯಂತ್ರಣ (ಎಟಿಸಿ) ಮತ್ತು ಸಂವಹನ, ನ್ಯಾವಿಗೇಷನ್ ಮತ್ತು ಕಣ್ಣಾವಲು ವ್ಯವಸ್ಥೆ (ಸಿಎನ್‌ಎಸ್) ಎಲ್ಲವನ್ನೂ ಎಎಐ ನಿರ್ವಹಿಸಲಿದೆ.

ಈ ನಿಲ್ದಾಣದ ಮೂಲಕ ಪ್ರತಿ ವಾರ ಇಂಡಿಗೊ ಸಂಸ್ಥೆಯ 78 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌ ಮತ್ತು ಪುಣೆಗೆ ವಿಮಾನಯಾನ ಸೌಲಭ್ಯ ಇದೆ. ಸದ್ಯ ವಿಮಾನ ನಿಲ್ದಾಣದಲ್ಲಿ 320 ಕೋಟಿ ವೆಚ್ಚದಲ್ಲಿ ನೂತನ ಟರ್ಮಿನಲ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಆದ್ರೆ ಕೇಂದ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆದಾಯವನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣ‌ ನೀಡುತ್ತಿಲ್ಲ. ಹೀಗಾಗಿ ಈಗಾಗಲೇ ಭುವನೇಶ್ವರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆ ಹುಬ್ಬಳ್ಳಿ ನಿಲ್ದಾಣವನ್ನು ವಿಲೀನ ಮಾಡಲಾಗಿದೆ. ಆದಾಯ ಹಂಚಿಕೆ ಆಧಾರದ ಮೇಲೆ ದೇಶದ ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಮಾಹಿತಿ ಪ್ರಕಾರ ವಾರ್ಷಿಕ ಆದಾಯದಲ್ಲಿ ಶೇಕಡ ಅರ್ಧದಷ್ಟು ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (ಎಎಐ) ಹೋಗುತ್ತದೆ. ಇನ್ನೂಳಿದ ಆದಾಯ ಗುತ್ತಿಗೆ ಪಡೆದ ಕಂಪನಿಗೆ ಸೇರುತ್ತದೆ. ಕೆಲವು ಕಡೆ ಪ್ರಯಾಣಿಕರ ಸಂಖ್ಯೆ ಆಧಾರದ ಮೇಲೆ ಆದಾಯ ಹಂಚಿಕೆ ಆಗಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಯಾವ ಸ್ವರೂಪದಲ್ಲಿ ಖಾಸಗಿ ಕಂಪನಿಗೆ ಕೈ ಸೇರಲಿದೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ.

ಒಟ್ಟಿನಲ್ಲಿ ಇಷ್ಟು ದಿನ ಯಾರಿಗೂ ಬೇಡವಾಗಿದ್ದ ಹುಬ್ಬಳ್ಳಿ ವಿಮಾನ ನಿಲ್ದಾಣ, ಈಗ ನೂರಾರು ಕೋಟಿಯಲ್ಲಿ ಅಭಿವೃದ್ಧಿ ಆಗುತ್ತಲೇ ಖಾಸಗಿ ಕಂಪನಿಗಳ ಕಣ್ಣು ಕುಕ್ಕುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗಿಯವರ ಕೈ ಸಿಕ್ಕು, ವಿಶ್ವಮಾನ್ಯತೆ ಪಡೆದುಕೊಳ್ಳುತ್ತಾ?. ಅಥವಾ ಸ್ಥಳೀಯ ಮಾನ್ಯತೆ ಕಳೆದುಕೊಂಡು, ಉತ್ತರ ಕರ್ನಾಟಕ ವಿಮಾನ ಪ್ರಯಾಣಿಕರಿಗೆ, ಉದ್ಯಮಿಗಳಿಗೆ ಕಾಸ್ಟಲಿ ಜರ್ನಿಯ ಹೊರೆಯಾಗುತ್ತಾ?. ಎನ್ನುವುದನ್ನು ಕಾದುನೋಡಬೇಕಿದೆ..

-ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss