Hubli News: ಹುಬ್ಬಳ್ಳಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ ಹಾಗೂ ಡಿಕೆಶಿವಕುಮಾರ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಡಿಕೆಶಿವಕುಮಾರ್ ಪ್ರತಿಕೃತಿ ದಹನ ಮಾಡಿ ಕೂಡಲೇ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಡಿಕೆಶಿವಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಳಿಕ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಡಿಕೆಶಿವಕುಮಾರ್ ಕೇವಲ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುವ ಕಾರಣಕ್ಕೆ ಮೀಸಲಾತಿ ಕೊಡುವ ವಿಚಾರವನ್ನು ಮಾತನಾಡಿದ್ದಾರೆ. ಮೀಸಲಾತಿ ಕೊಡುವ ವಿಚಾರದಲ್ಲಿ ಏನಾದರೂ ಅಡ್ಡಿಯಾದರೆ ಸಂವಿಧಾನ ಬದಲಾವಣೆ ಮಾಡಿ ಮೀಸಲಾತಿ ಕೊಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಬಿಜೆಪಿ 312 ಮಂಡಲದಲ್ಲಿ ಇಂದು ಸಾಂಕೇತಿಕ ಹೋರಾಟ ಮಾಡಿದ್ದೇವೆ. ಉಪಮುಖ್ಯಮಂತ್ರಿ ಡಿಕೆಶಿ ತಮ್ಮ ಹೇಳಿಕೆಯನ್ನು ಹಿಂದೆ ಪಡೆಯಬೇಕು. ಸಿಎಂ ಸಿದ್ದರಾಮಯ್ಯ ಡಿಕೆಶಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಇನ್ನೂ ಒಂದೆಡೆ ಕಾಂಗ್ರೆಸ್ ಸಚಿವರಾದ ರಾಮಣ್ಣ ಸಿಡಿ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಹಿರಿಯ ಸಚಿವರಿಗೆ ಭಯವಿರುವ ಸಂದರ್ಭದಲ್ಲಿ ಅಷ್ಟೇ ಅಲ್ಲದೇ 48 ಶಾಸಕರ ಸಿಡಿ ಬಗ್ಗೆ ಮಾತನಾಡಿದ್ದಾರೆ. ಇದನ್ನು ಸಿಬಿಐಗೆ ವಹಿಸಿ ಸಂಪೂರ್ಣ ತನಿಖೆ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ.
ರಾಜ್ಯದ ಉಪಮುಖ್ಯಮಂತ್ರಿ ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ರಾಹುಲ್ ಗಾಂಧಿ ಲೋಕಸಭಾ ಅಧಿವೇಶನದಲ್ಲಿ ಸಂವಿಧಾನದ ಪ್ರತಿ ಹಿಡಿದು ಸಂವಿಧಾನದ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಇದೀಗ ಡಿಕೆಶಿ ಸಂವಿಧಾನ ವಿರೋಧಿ ಹೇಳಿಕೆ ಕೊಟ್ಟಿದ್ದಾರೆ. ಅವರ ವಿರುದ್ಧ ರಾಹುಲ್ ಗಾಂಧಿ ಕ್ರಮ ಕೈಗೊಳ್ಳಬೇಕಿದೆ. ಇದರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಸಿಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಆರ್.ಅಶೋಕ ನೇತೃತ್ವದಲ್ಲಿ ಪ್ರತಿಭಟನೆ ಮಾಡಲು ಹೋದಾಗ 18 ಜನ ಶಾಸಕರ ಸ್ವೀಕಾರ ಅವರು ಸಿಎಂ ಅವರ ಆದೇಶದ ಮೇಲೆ ಅಮಾನತು ಮಾಡಿದ್ದಾರೆ. ಸಿಎಂ ಅವರು ಸ್ಪೀಕರ್ ಮೂಲಕ ಈ ರೀತಿಯ ಅಮಾನತು ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ಅದೇ ರೀತಿಯಲ್ಲಿ ಪಿಡಬ್ಲೂಡಿ ಸಚಿವ ಸತೀಶ ಜಾರಕಿಹೊಳಿ ಕೂಡಾ ಇದೇ ತರಹ ಘಟನೆಗಳು ಬಹಳಷ್ಟು ನಡೆದಿವೆ ಅಂತಾ ಹೇಳಿದ್ದಾರೆ. ಹಾಗಾಗಿ ಸಿಡಿ ಡೈರೆಕ್ಟರ್ ಹಾಗೂ ನಿರ್ಮಾಣಪಕರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಹೀಗಾಗಿ ಇದು ಹೊರಗಡೆ ಬರಬೇಕು. ಇದನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ್, ರಾಜು ಕಾಳೆ, ಮಂಜುನಾಥ ಕಾಟ್ಕರ್, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ರಾಜಣ್ಣ ಕೊರವಿ, ಬೀರಪ್ಪ ಖಂಡೇಕರ, ಸತೀಶ ಶೇಜವಾಡಕರ್, ಅನುಪ ಬಿಜವಾಡ, ಲಕ್ಷ್ಮೀಕಾಂತ ಗೊಡಕೆ, ರವೀಂದ್ರ ಎಲಿಕಾನ್ ಸೇರಿದಂತೆ ಮುಂತಾದವರು ಇದ್ದರು.