Friday, March 21, 2025

Latest Posts

Hubli News: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲಿ: ಜಿಲ್ಲಾಧಿಕಾರಿ ದಿವ್ಯಪ್ರಭು

- Advertisement -

Hubli News: ಹುಬ್ಬಳ್ಳಿ: ಇಂದಿನಿಂದ ಎಸ್ಎಸ್ಎಲ್‌‌ಸಿ ಪರೀಕ್ಷೆಗಳು ಆರಂಭವಾಗಿವೆ. ಧಾರವಾಡ ಜಿಲ್ಲೆಯಲ್ಲಿ 28,666 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 106 ಪರೀಕ್ಷಾ ಕೇಂದ್ರಗಳನ್ನು ತೆರಯಲಾಗಿದೆ‌. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಏದುರಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ಇಂದು ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಲ್ಯಾಮಿಂಗ್ಟನ್ ಪ್ರೌಢಶಾಲೆಗೆ ಭೇಟಿ ನೀಡಿ, ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಸಿಸಿಟಿವಿ ಮಾನಿಟರಿಂಗ್ ನ್ನು ಪ್ರತ್ಯೇಕ ತಂಡದಿಂದ ನಿರ್ವಹಿಸಲಾಗುತ್ತಿದೆ. ಇಂದು 28,239 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 427 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ವಿವಿಧ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿದಾಗ ಪರೀಕ್ಷೆಗಳು ಸುಗಮವಾಗಿ ನಡೆಯುತ್ತಿರುವುದು ಕಂಡು ಬಂದಿದೆ. ಲ್ಯಾಮಿಂಗ್ಟನ್ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸುಮಾರು 400 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅದರಲ್ಲಿ 4 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಗೈರು ಹಾಜರಾಗುತ್ತಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮಾರ್ಗಸೂಚಿಗಳ ಅನುಸಾರ ಪರೀಕ್ಷೆಗಳು ನಡೆಯುತ್ತಿವೆ ಎಂದು ವಿವರಿಸಿದರು.

ಧಾರವಾಡದ ಕೆ.ಇ. ಬೋರ್ಡ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೂಗುಚ್ಚ, ಸಿಹಿ ಹಾಗೂ ಪೆನ್ನು ವಿತರಿಸಿ, ಪರೀಕ್ಷೆಗಳನ್ನು ಸಮರ್ಥವಾಗಿ ಏದುರಿಸುವಂತೆ ವಿದ್ಯಾರ್ಥಿಗಳಿಗೆ ಪ್ರೇರೆಪಿಸಲಾಯಿತು. ಮಕ್ಕಳಲ್ಲಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಿ, ಹಬ್ಬದ ವಾತಾವರಣ ಸೃಷ್ಟಿಸಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಪರೀಕ್ಷೆಗಳನ್ನು ಏದುರಿಸುವಂತೆ ಕ್ರಮ ವಹಿಸಲಾಯಿತು. ಈ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಲಿದೆ. ಜಿಲ್ಲೆಯಲ್ಲಿ ಎಸ್ಎಸ್ಎಲ್‌‌ಸಿ ಪರೀಕ್ಷೆ ಏದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಪತ್ರಗಳನ್ನು ಬರೆಯುವ ಮೂಲಕ ಶುಭಾಶಯಗಳನ್ನು ಕೋರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದ್ದಾರೆ. ಜಿಲ್ಲಾಡಳಿತ ವಿದ್ಯಾರ್ಥಿಗಳೊಂದಿಗೆ ಇದೆ. ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದಡಿಯಲ್ಲಿ ರೂಢಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಏದುರಿಸಿದ್ದಾರೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಖುಷಿಯಿಂದ ಪರೀಕ್ಷೆಗಳನ್ನು ಏದುರಿಸಿ, ಧಾರವಾಡ ಜಿಲ್ಲೆಗೆ ಉತ್ತಮ ಸ್ಥಾನ ದೊರೆಯುವ ಭರವಸೆಯನ್ನು ನಾನು ಹೊಂದಿದ್ದೇನೆ ಎಂದು ಅವರು ತಿಳಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ವೆಬ್ ಕಾಸ್ಟಿಂಗ್‌‌ಗೆ ಮಾಡಲಾಗುತ್ತಿದೆ. ವಿದ್ಯುತ್ ಹಾಗೂ ಇಂಟರ್ನೆಟ್ ಸಂಪರ್ಕದ ಸಮಸ್ಯೆಗಳಿಂದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ತೊಂದರೆಯಾಗುತ್ತಿದೆ‌. ಸಮಸ್ಯೆಯನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಪಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವೆಬ್ ಕಾಸ್ಟಿಂಗ್ ಗೆ ಯಾವುದೇ ರೀತಿಯ ಅಡೆತಡೆ ಆಗದಂತೆ ಕ್ರಮ ವಹಿಸಲಾಗಿದೆ. ಧಾರವಾಡ ಜಿಲ್ಲೆಗೆ ಉತ್ತಮ ರ‌್ಯಾಂಕ್ ಪಡೆಯುವ ನಿಟ್ಟಿನಲ್ಲಿ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದ ಮೂಲಕ ಹಲವಾರು ಪರೀಕ್ಷೆಗಳನ್ನು ನಡೆಸಲಾಗಿದೆ‌. ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲು ಅನುಮತಿ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಹಾಜರಾತಿ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ಸುಮಾರು 2 ಸಾವಿರ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗುತ್ತಿದ್ದರು. ಶಾಲೆಯ ಎಸ್‌‌ಡಿಎಂಸಿ ಸದಸ್ಯರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪಾಲಕರ ಮನವೊಲಿಸಿ ಮರಳಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವಂತೆ ಕ್ರಮಕೈಗೊಳ್ಳಲಾಗಿತ್ತು. ಇದರಿಂದ ಸುಮಾರು 450 ವಿದ್ಯಾರ್ಥಿಗಳು ಮರಳಿ ಶಾಲೆಗೆ ಕರೆತರಲಾಯಿತು. ಅನಾರೋಗ್ಯದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದಿದ್ದಲ್ಲಿ, ಅವರಿಗೆ ವೈದ್ಯಕೀಯ ಚಿಕಿತ್ಸೆ ಜೊತೆಗೆ ವಿದ್ಯಾಭ್ಯಾಸ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ಕ್ರಮ

ಬೇಸಿಗೆ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಅಲ್ಲದೇ ಕೆಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿರುವುದು ಕಂಡು ಬಂದಿವೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿಶೇಷ ಸಭೆಗಳನ್ನು ಸಹ ನಡೆಸಿದ್ದಾರೆ. 15 ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿ ಸಂಗ್ರಹಿಸಿ, ಏಪ್ರೀಲ್ ತಿಂಗಳೊಳಗಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಘಟಕಗಳನ್ನು ಸರಿಪಡಿಸುವ ಅಭಿಯಾನದ ರೂಪದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು, ಮುಂದಿನ ಎರಡು ತಿಂಗಳು ಕುಡಿಯುವ ನೀರಿನ ಅಭಾವವಾಗದಂತೆ ಕ್ರಮ ವಹಿಸಲಾಗುತ್ತದೆ ಎಂದರು.

- Advertisement -

Latest Posts

Don't Miss