ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಖರ್ಗೆ ಅವರೇ, ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಆದರಣೀಯ ನರೇಂದ್ರ ಮೋದಿಜೀ ರವರನ್ನು ಟೀಕಿಸುವ ಭರದಲ್ಲಿ ನೀವು ಇಂದು ದೇಶದ 140 ಕೋಟಿ ಜನರನ್ನು ಹಾಗೂ ನಮ್ಮ ಪ್ರಜಾಪ್ರಭುತ್ವದ ಘನತೆಯನ್ನು ಅಪಮಾನಿಸಿದ್ದೀರಿ. ಇದು ಸತತ ಮೂರನೇ ಬಾರಿಗೆ ಶ್ರೀ ಮೋದಿಜೀ ರವರನ್ನು ಭಾರತದ ಪ್ರಧಾನಮಂತ್ರಿಗಳ ಸ್ಥಾನದಲ್ಲಿ ಕೂರಿಸಿರುವ ದೇಶದ ಜನತೆಯ ತೀರ್ಪಿಗೆ ನೀವು ನೀಡುತ್ತಿರುವ ಗೌರವವೇ? ವಿಶ್ವದ 32ಕ್ಕೂ ಹೆಚ್ಚು ದೇಶಗಳ ಅತ್ಯುನ್ನತ ಗೌರವಗಳಿಗೆ ಪಾತ್ರರಾಗಿ, ಭಾರತದ ಕೀರ್ತಿಯನ್ನು ಜಗತ್ತಿನ ಶಿಖರಕ್ಕೇರಿಸಿದ ಕೋಟ್ಯಂತರ ಭಾರತೀಯರ ಹೆಮ್ಮೆಯ ನಾಯಕನ ಬಗ್ಗೆ ಇಂತಹ ನಂಜಿನ, ವಿಷಕಾರಿ ಮಾತುಗಳು, ನಿಮ್ಮ ವಿಕೃತ ಮನಸ್ಥಿತಿಯನ್ನು, ನಿಮ್ಮ ರಾಜಕೀಯ ದ್ವೇಷವನ್ನು, ನಿಮ್ಮ ಹತಾಶೆಯನ್ನು ಬಿಂಬಿಸುತ್ತವೆಯೇ ಹೊರತು ಮೋದಿಜೀ ರವರ ವ್ಯಕ್ತಿತ್ವಕ್ಕೆ ಭಂಗವುಂಟು ಮಾಡುವುದು ಸಾಧ್ಯವಿಲ್ಲ! ಎಂದಿದ್ದಾರೆ.

ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ಏರ್‌ಸ್ಟ್ರೈಕ್ ಮತ್ತು ಇತ್ತೀಚಿನ ‘ಆಪರೇಷನ್ ಸಿಂದೂರ್’ ಮೂಲಕ ಭಯೋತ್ಪಾದಕರ ಹೆಡೆಮುರಿ ಕಟ್ಟಿದ ಧೀಮಂತ ನಾಯಕನ ಬಗ್ಗೆ, ನಕ್ಸಲಿಸಂ ಅನ್ನು ನಿರ್ನಾಮ ಮಾಡಿದ ಅದ್ವಿತೀಯ ನೇತಾರನ ಬಗ್ಗೆ, ಶತ್ರು ರಾಷ್ಟ್ರದ ಒಳಗೆ ನುಗ್ಗಿ ಹೊಡೆಯುವ ದಿಟ್ಟತನದ ಪ್ರಧಾನಿಗಳ ಬಗ್ಗೆ, ತಾಯಂದಿರ ಸೌಭಾಗ್ಯವನ್ನು ಅಳಿಸಲು ಬಂದವರ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ, ಅವರ ಅಡಗುದಾಣಗಳನ್ನೇ ಧೂಳೀಪಟ ಮಾಡಿದ ನಮ್ಮ ಹೆಮ್ಮೆಯ ಶ್ರೀ ಮೋದಿ ಜೀರವರ ನಿಮ್ಮ ಅವಹೇಳನ, ನಿಮ್ಮ ನೈಜ ಮುಖವನ್ನು ಬಯಲು ಮಾಡಿದೆ ಎಂದು ಖರ್ಗೆ ವಿರುದ್ಧ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ರವರ ವಿರುದ್ಧದ ಕಾಂಗ್ರೆಸ್ ಕಾರುತ್ತಿರುವ ವೈಷಮ್ಯ, ದ್ವೇಷ, ಅಸೂಯೆಗಳು ಹೊಸದೇನಲ್ಲ. ಈ ಮನಸ್ಥಿತಿಯಿಂದಲೇ ದೇಶದ ಹಾಗೂ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸುವ ಮಟ್ಟಕ್ಕೆ ಕಾಂಗ್ರೆಸ್‌ ಕುಸಿದಿರುವುದನ್ನೂ ಕೂಡ ದೇಶದ ಜನ ಕಂಡಿದ್ದಾರೆ. ಮೋದಿಜೀ ರವರನ್ನು ವಿರೋಧಿಸುವ ಭರದಲ್ಲಿ ನೀವು ಭಾರತದ ಗೌರವವನ್ನು ಕುಗ್ಗಿಸುತ್ತಿದ್ದೀರಿ. ಈ ಹಿಂದೆ ‘ಮೌತ್ ಕಾ ಸೌದಾಗರ್’ ಎಂದವರನ್ನು, ‘ಚಾಯ್ ವಾಲಾ’ ಎಂದವರನ್ನು ಜನತೆ ಹೇಗೆ ಮೂಲೆಗುಂಪು ಮಾಡಿದ್ದಾರೆ ಎನ್ನುವುದು ನಿಮಗೆ ನೆನಪಿರಲಿ.

ಹಿರಿಯರಾಗಿ, ಹಲವಾರು ದಶಕಗಳ ಕಾಲ ರಾಜಕಾರಣದಲ್ಲಿದ್ದರೂ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರೂ, ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ನೀವು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ಜನರೂ ಕೂಡ ನಿರೀಕ್ಷಿಸಿರಲಿಲ್ಲ. ನಿಮ್ಮ ಈ ಅವಹೇಳನಕಾರಿ ರಾಜಕೀಯಕ್ಕೆ ಮುಂಬರುವ ದಿನಗಳಲ್ಲಿ ನಾಡಿನ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

About The Author