“ನೋಡುವವರಿಗಾಗಿ ನೀವು ಸಿನಿಮಾ ಮಾಡಿ, ನೋಡದೆ ಇದ್ದವರು ನೋಡೋದು ಬೇಡ”
– ಇದು ನಟ ಕಿಚ್ಚ ಸುದೀಪ್ ಅವರ ಮಾತು. ಇತ್ತೀಚೆಗೆ ಅವರ ಈ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ವೈರಲ್ ಕೂಡ ಆಗಿತ್ತು. ಅಷ್ಟೇ ಯಾಕೆ, ಇಂಡಸ್ಟ್ರಿಯಲ್ಲಿ ಒಂದಷ್ಟು ಚರ್ಚೆಗೂ ಗ್ರಾಸವಾಗಿತ್ತು. ಸುದೀಪ್ ಹೀಗೆ ಹೇಳಿದ್ದು, ದರ್ಶನ್ ಅವರ ಅಭಿಮಾನಿಗಳಿಗೆ ಅಂದುಕೊಳ್ಳಲಾಗಿತ್ತು. ಹಾಗಾಗಿ ಅದು ಇಲ್ಲ ಸಲ್ಲದ ಸುದ್ದಿಯಾಗಿತ್ತು. ಈ ಕುರಿತಂತೆ ಸುದೀಪ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಮಾತನ್ನು ನಾನು ಯಾರನ್ನೋ ಗುರಿಯಾಗಿಸಿಕೊಂಡು ಹೇಳಿದ್ದಲ್ಲ. ಏನಾದರೂ ಹೇಳುವುದಿದ್ದರೆ, ನೇರವಾಗಿಯೇ ಹೇಳ್ತೀನಿ ಎಂದಿದ್ದಾರೆ ಸುದೀಪ್.
ಇಷ್ಟಕ್ಕೂ ಏನದು ವಿವಾದ?
ನಟ ಸುದೀಪ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ಆ ಬಗ್ಗೆ ಹೇಳುವುದಾದರೆ, ‘ದರ್ಶನ್ ಹೊರಗೆ ಬರುವ ತನಕ ನಾವು ಕನ್ನಡದ ಯಾವ ಸಿನಿಮಾ ನೋಡುವುದಿಲ್ಲ’ ಎಂದು ದರ್ಶನ್ ಅಭಿಮಾನಿಗಳು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಳಿಕ ಕನ್ನಡ ಸಿನಿಮಾರಂಗದಲ್ಲಿ ಒಂದಷ್ಟು ಸಿನಿಮಾಗಳು ಸೋಲು ಕಾಣುತ್ತಿವೆ ಎನ್ನಲಾಗಿತ್ತು. ಹಾಗಾಗಿ ಸಿನಿಮಾದ ಹಲವು ಕಲಾವಿದರು, ನಿರ್ಮಾಪಕ, ನಿರ್ದೇಶಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದ್ದರು.
ಸುದೀಪ್ ಅವರು ಒಂದು ಕಾರ್ಯಕ್ರಮಕ್ಕೆ ಬಂದಿದ್ದಾಗ, ‘ನೋಡದೇ ಇದ್ದವರನ್ನು ಬಿಡಿ, ನೋಡುವವರಿಗಾಗಿ ಸಿನಿಮಾ ಮಾಡಿ’ ಎಂದಿದ್ದರು. ಆದರೆ, ಸುದೀಪ್ ಅವರ ಈ ಮಾತು, ವೈರಲ್ ಆಗಿದ್ದು, ಅದು ದರ್ಶನ್ ಅವರ ಅಭಿಮಾನಿಗಳಿಗೆ ಹೇಳಿದ ಮಾತು ಎಂದು ಸುದ್ದಿಯಾಯ್ತು. ಈ ಬಗ್ಗೆ ಸುದೀಪ್ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾನು ಆ ಕಲಾವಿದರ ಫ್ಯಾನ್ಸ್‌ಗೆ ಹೇಳಿದ್ದೇನೆ ಅಂತ ಅಂದುಕೊಳ್ಳುವುದು ಬೇಡ. ಕನ್ನಡ ಚಿತ್ರರಂಗದವರಾಗಿ, ಕನ್ನಡಿಗರಿಗೆ ಕನ್ನಡ ಸಿನಿಮಾ ನೋಡಿ ಎಂದು ಭಿಕ್ಷೆ ಬೇಡುವುದು ತಪ್ಪು. ಇದರಿಂದ ನಾವು ಬೇರೆಯವರಿಗೆ ಹೇಗೆ ಕಾಣುತ್ತೇವ ಯೋಚಿಸಿ. ಕರ್ನಾಟಕದಲ್ಲಿ ಸುಮಾರು 30 ಲಕ್ಷ ಜನರು ಸಿನಿಮಾ ನೋಡುತ್ತಿದ್ದಾರೆ. ಅದೊಂದು ರೀತಿ ದೊಡ್ಡ ಲೆಕ್ಕವಲ್ಲವೇ? ಹಾಗಾಗಿ ನಾವು ಆ ಗತ್ತು ಬಿಟ್ಟುಕೊಡಬಾರದು ಎಂದಿದ್ದಾರೆ ಸುದೀಪ್.
ಇನ್ನೊಂದು ಮಾತನ್ನಿಲ್ಲಿ ಸ್ಪಷ್ಟಪಡಿಸ್ತೀನಿ. ‘ನಾನು ಯಾರಿಗೂ ಟಾಂಟ್ ಕೊಡುವವನಲ್ಲ. ಹೇಳಿದರೆ ನೇರವಾಗಿ ಹೇಳುತ್ತೇನೆ. ಎಲ್ಲಾ ಫ್ಯಾನ್ಸ್ಗೂ ನೋವು ಇರುತ್ತೆ. ಹಾಗಾಗಿ ಅದೇ ನೋವಲ್ಲಿರುವ ಅವರು ಒಂದಷ್ಟು ಮಾತಾಡುತ್ತಾರೆ. ಕ್ಷಮಿಸಿಬಿಡಿ. ನಮ್ಮ ಅಭಿಮಾನಿಗಳು ಏನಾದರೂ ತಪ್ಪು ಮಾಡಿದರೆ ಕರೆದು ಬುದ್ಧಿ ಹೇಳಬಹುದು. ಬೇರೆಯವರ ಬಗ್ಗೆ ಗೊತ್ತಿಲ್ಲ. ಆ ಅಧಿಕಾರವೂ ಬೇಡ. ನಾನು ಕರೆಕ್ಷನ್ ಮಾಡೋಕೆ ಹುಟ್ಟಿಲ್ಲ. ಸರಿ ಹೋಗಲು ಟೈಮ್ ಕೊಡಿ. ಏನಾದರೂ ಇದ್ದರೆ ನೇರವಾಗಿ ಹೇಳ್ತೀನಿ. ಎಲ್ಲವನ್ನೂ ವಿನಾಕಾರಣ ಲಿಂಕ್ ಮಾಡಬೇಡಿ’ ಎಂದಿದ್ದಾರೆ ಸುದೀಪ್.