Hubli News: ಹುಬ್ಬಳ್ಳಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರ ಭರ್ಜರಿ ಪ್ರದರ್ಶನ ಹಿನ್ನೆಲೆ, ಶಿವರಾಜ್‌ಕುಮಾರ್ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಹುಬ್ಬಳ್ಳಿಯ ಅಪ್ಸರಾ ಚಿತ್ರ ಮಂದಿರಕ್ಕೆ ಶಿವರಾಜ್‌ಕುಮಾರ್ ಭೇಟಿ ನೀಡಿದ್ದು, ಪತ್ನಿ ಗೀತಾ ಸಾಥ್ ನೀಡಿದ್ದರು.
ಈ ವೇಳೆ ತೆರೆದ ವಾಹನದಲ್ಲಿ ನಿಂತು ಅಭಿಮಾನಿಗಳ ಬಳಿ ಕೈಬೀಸಿ, ಜನರಿಗೆ ಧನ್ಯವಾದ ಹೇಳಿದ್ದಾರೆ. ಭೈರತಿ ಸಿನಿಮಾ ಪ್ರಚಾರದ ವೇಳೆ, ಅಪ್ಪನ ಕಾಲದಲ್ಲಿ ಹುಬ್ಬಳ್ಳಿ ಬಂದಿದ್ದನ್ನು ಶಿವರಾಜ್‌ಕುಮಾರ್ ನೆನೆಸಿಕೊಂಡಿದ್ದಾರೆ. ಅಲ್ಲದೇ, ಅಭಿಮಾನಿಗಳ ಒತ್ತಾಯದ ಮೇರೆಗೆ ಜನುಮದಜೋಡಿ, ರಾಜಕುಮಾರ ಸೇರಿದಂತೆ ಹಲವು ಚಿತ್ರಗೀತೆಯನ್ನು ಶಿವರಾಜ್‌ಕುಮಾರ್ ಹಾಡಿದ್ದಾರೆ.
ಈ ವೇಳೆ ಮಾತನಾಡಿದ ಶಿವಣ್ಣ, ಬೈರತಿ ರಣಗಲ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಮಫ್ತಿಯಲ್ಲಿ ನನ್ನ ಪಾತ್ರವನ್ನಎಲ್ಲರೂ ಇಷ್ಟಪಟ್ಟಿದ್ದರು. ಬೈರತಿ ರಣಗಲ್ ಚಿತ್ರ ಎಲ್ಲರ ಹೃದಯಕ್ಕೆ ಮುಟ್ಟಿದೆ. ಮಫ್ತಿ ಸೀಕ್ವೆಲ್ ಶೀಘ್ರದಲ್ಲೇ ಸೆಟ್ಟೇರಲಿದೆ. 45 ಚಿತ್ರ ಎಲ್ಲವೂ ಮುಗಿದಿದೆ ರಿಲೀಸ್ ಗೆ ರೆಡಿಯಾಗಿದೆ. ಕೌಟುಂಬಿಕ ಕಥೆಗಳಿಗಾಗಿ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಕೌಟುಂಬಿಕ ಕಥಾಹಂದರ ಚಿತ್ರಗಳುಬರಲಿವೆ. ಮುಂದಿನ ವಾರ ವಿದೇಶಕ್ಕೆ ತೆರಳುತ್ತಿದ್ದೇನೆ. ಶಸ್ತ್ರಚಿಕಿತ್ಸೆ ಬಳಿಕ ಚಿತ್ರದ ಬಗ್ಗೆ ಮುಹೂರ್ತದ ಬಗ್ಗೆ ಚರ್ಚೆ ಮಾಡಲಿದ್ದೇನೆ. ನಮ್ಮದೇ ಬ್ಯಾನರ್ ಅಡಿ A ಫಾರ್ ಆನಂದ್ ಚಿತ್ರ ಮೂಡಿಬರಲಿದೆ. ಮುಂದಿನ ಚಿತ್ರಕ್ಕಾಗಿ ಎಲ್ಲ ತಯಾರಿ ನಡೆದಿದೆ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
ಮಹದಾಯಿ ಯೋಜನೆ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಶಿವಣ್ಣ, ಈ ಭಾಗದಲ್ಲೂ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಹೋರಾಟ ನಡೆಸಲಿದೆ. ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಲ್ಲ ಅಂತಾ ಭಾವಿಸೋದು ಬೇಡ. ಮಹದಾಯಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಆಗಮಿಸಲಿದ್ದೇವೆ. ಕನ್ನಡ ಚಿತ್ರರಂಗದ ಬಗ್ಗೆ ಈ ಭಾಗದಲ್ಲಿರುವ ಕೊರಗು ನೀಗಿಸುತ್ತೇವೆ. ಯಾವುದೇ ಸಮಸ್ಯೆ ಇದ್ದರೂ ನಾವೆಲ್ಲ ಒಗ್ಗಟ್ಟಾಗಿ ಈ ಭಾಗದಲ್ಲೂ ಹೋರಾಟದಲ್ಲಿ ಭಾಗಿಯಾಗಲಿದ್ದೇವೆ ಎಂದು ಶಿವಣ್ಣ ಹೇಳಿದ್ದಾರೆ.