Political News: ಅಕ್ರಮ ಆರೋಪದಲ್ಲಿ ಕೆಲಸ ಕಳೆದುಕೊಂಡ 25 ಸಾವಿರ ಶಿಕ್ಷಕರಿಗೆ ಅನ್ಯಾಯವಾಗಿದೆ, ನನ್ನ ಕೊನೆಯ ಉಸಿರಿರುವರೆಗೂ ಅವರಿಗಾಗಿಯೇ ಹೋರಾಡುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಬ್ಬರಿಸಿದ್ದಾರೆ.
ಸುಪ್ರೀಂ ತೀರ್ಪಿಗೆ ನನ್ನ ಸಹಮತವಿಲ್ಲ..
ಇನ್ನೂ ಅಕ್ರಮದ ಆರೋಪದಲ್ಲಿರುವ ಶಿಕ್ಷಕರನ್ನು ಕಲ್ಕತ್ತಾದ ನೇತಾಜಿ ಕ್ರೀಡಾಂಗಣದಲ್ಲಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿಯನ್ನು ಸಂಪೂರ್ಣವಾಗಿ ಅಕ್ರಮ ಎಂದಿರುವ ಸುಪ್ರೀಂಕೋರ್ಟ್ ತೀರ್ಪನ್ನು ನಾನು ಒಪ್ಪುವುದಿಲ್ಲ. ಇನ್ನು ಮುಂದೆ ನಾವು ನೇಮಕಾತಿ ರದ್ಧತಿಯ ಆದೇಶ ಪಾಲನೆ ಮಾಡುವುದಿಲ್ಲ, ರಾಜ್ಯ ಸರ್ಕಾರದಿಂದ ಬದಲಿ ಕಾನೂನು ಮಾರ್ಗ ಹುಡುಕಿ ಅರ್ಹ ಶಿಕ್ಷಕರಿಗೆ ಅನ್ಯಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ನೀವು ಇನ್ನೂ ಸೇವೆಯಲ್ಲಿದ್ದೀರಿ..!
ಅಲ್ಲದೆ ತೀವ್ರ ಸಂಕಷ್ಟದಲ್ಲಿರುವ ಶಿಕ್ಷಕರಿಗೆ 2 ತಿಂಗಳೊಳಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇನೆ. ಈ ನೇಮಕಾತಿ ರದ್ಧತಿಯ ಕುರಿತು ಮತ್ತೆ ಸುಪ್ರೀಂಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇನೆ. ಈಗ ಎಲ್ಲರೂ ನಿಮ್ಮ ನಿಮ್ಮ ಶಾಲೆಗಳಿಗೆ ಹೋಗಿ ಬೋಧನಾ ಕಾರ್ಯ ಪುನಾರಂಭಿಸಿ. ಯಾಕೆಂದರೆ ನೀವು ಇನ್ನೂ ಸೇವೆಯಲ್ಲಿದ್ದೀರಿ, ನಿಮಗೆ ಇದುವರೆಗೂ ವಜಾ ಆದೇಶ ಪತ್ರ ನೀಡಿಲ್ಲ. ಯಾವುದೇ ಅರ್ಹ ಅಭ್ಯರ್ಥಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದು ನನ್ನ ಜವಾಬ್ದಾರಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವಂಚಕರಂತೆ ಬಿಂಬಿಸಲು ಯತ್ನ..
ಅಂದಹಾಗೆ ಈ ನೇಮಕಾತಿ ರದ್ಧತಿಯ ಹಿಂದೆ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಕುಸಿಯುವಂತೆ ಮಾಡುವ ಹುನ್ನಾರ ನಡೆಯುತ್ತಿದೆ. ಮುಖ್ಯವಾಗಿ ಉನ್ನತ ಶಿಕ್ಷಣದ ಮೆಟ್ಟಿಲುಗಳಂತಿರುವ 9,10,11 ಹಾಗೂ 12ನೇ ತರಗತಿಗಳಿಗೆ ಒಳ್ಳೆಯ ಶಿಕ್ಷಕರು ಬೇಕಾಗಿದ್ದಾರೆ. ಈ ವಜಾಗೊಂಡವರಲ್ಲಿ ಕೆಲವು ಉತ್ತಮ ಅಂಕಗಳೊಂದಿಗೆ ಆಯ್ಕೆಯಾಗಿದ್ದರು, ಅಲ್ಲದೆ ಚಿನ್ನದ ಪದಕಗಳಿಗೆ ಭಾಜನರಾಗಿದ್ದವರು ಇದ್ದಾರೆ. ಆದರೆ ಈಗ ನ್ಯಾಯಲಯ ಅವರನ್ಬು ವಂಚಕರು ಎನ್ನುವಂತೆ ಮಾಡಿದೆ ಎಂದು ದೀದಿ ಆರೋಪಿಸಿದ್ದಾರೆ.
ಏನಿದು ಶಿಕ್ಷಕರ ನೇಮಕಾತಿ ಹಗರಣ..?
2016ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಶಾಲಾ ಶಿಕ್ಷಣ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ 25 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿತ್ತು. ಆದರೆ ಅದರಲ್ಲಿ ಅಕ್ರಮದ ವಾಸನೆ ಬಂದು ಇಡೀ ನೇಮಕಾತಿಯನ್ನು ಕಲ್ಕತ್ತಾ ಹೈಕೋರ್ಟ್ ರದ್ದುಪಡಿಸಿತ್ತು. ಬಳಿಕ ಈ ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಏಪ್ರಿಲ್ 3ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.