International News: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ವಿಧಿಸಿರುವ ಪ್ರತೀಕಾರದ ತೆರಿಗೆಯ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಭಾರತವು ಈ ಹೊಡೆತಕ್ಕೆ ನಲುಗಿದೆ. ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ ಕೇವಲ ಏಪ್ರಿಲ್ 7ರ ಒಂದೇ ದಿನಕ್ಕೆ 2227 ಅಂಕ ಹಾಗೂ ನಿಫ್ಟಿ 742 ಅಂಕಗಳ ಪಾತಾಳವನ್ನು ಕಾಣುವಂತಾಗಿದೆ. ಇನ್ನೂ ಪ್ರಮುಖವಾಗಿ ಕಳೆದ ಲೋಕಸಭಾ ಚುನಾವಣೆಯ ಬಳಿಕ ಒಂದೇ ದಿನದಲ್ಲಿ ಆಗಿರುವ ಕನಿಷ್ಠ ಪತನ ಇದಾಗಿದೆ.
ಅಲ್ಲದೆ ಹೀಗೆ ಇಳಿಕೆಯಾಗಿರುವ ಸೆನ್ಸೆಕ್ ಶನಿವಾರದಿಂದ ನಿರಂತರವಾಗಿ ಮೂರನೇ ದಿನವೂ ಸಹ 3939.6 ಅಂಕ ಅಂದರೆ ಶೇಕಡಾ 5ರಷ್ಟು ಕುಸಿತ ಕಂಡು 71,425ಕ್ಕೆ ಕಡಿಮೆಯಾಗಿತ್ತು. ಬಳಿಕ ಸ್ವಲ್ಪ ಏರಿಕೆ ಕಂಡು ದಿನದ ಅಂತ್ಯಕ್ಕೆ 2,226.7 ಅಂಕಗಳಷ್ಟು ಇಳಿಕೆಯಾಗುವ ಮೂಲಕ 73,137.9 ಅಂಕದಲ್ಲಿ ಕೊನೆಯಾಗಿದೆ.
ಬರೊಬ್ಬರಿ 14 ಲಕ್ಷ ಕೋಟಿ ನಷ್ಟ..!
ಇನ್ನೂ ನಿಫ್ಟಿಯಲ್ಲಿಯೂ ಇಳಿಕೆ ಕಂಡಿದ್ದು 742.8 ಅಂಕ ಕುಸಿತದೊಂದಿಗೆ 22,161ಕ್ಕೆ ಮುಕ್ತಾಯಗೊಂಡಿತ್ತು. ಅಲ್ಲದೆ ಮಧ್ಯಂತರದಲ್ಲಿ ನಿಫ್ಟಿಯು 1,160.8 ಅಂದರೆ ಶೇಕಡಾ 5.06ರಷ್ಟು ಕುಸಿತ ಕಂಡಿತ್ತು. ಒಟ್ಟಾರೆಯಾಗಿ ಇಳಿಕೆ ಪ್ರಮಾಣವು ಶೇಕಡಾ 3ರಷ್ಟಾಗಿದ್ದು, ಈ ಮೂಲಕ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 14 ಲಕ್ಷ ಕೋಟಿ ರೂಪಾಯಿಗಳಷ್ಟು ಕರಗಿದೆ. ಪ್ರಮುಖವಾಗಿ ಹಿಂದೂಸ್ತಾನ್ ಯುನಿಲಿವರ್ ಹೊರತುಪಡಿಸಿ ಉಳಿದ ಕಂಪನಿಗಳ ಷೇರು ಭಾರಿ ಇಳಿಕೆ ಕಂಡಿವೆ. ಅಮೆರಿಕಕ್ಕೆ ಹೆಚ್ಚು ಉಕ್ಕು ರಫ್ತು ಮಾಡುವ ಟಾಟಾ ಸ್ಟೀಲ್ ಷೇರು ಶೇಕಡಾ 7.33ರಷ್ಟು ಕುಸಿದಿದೆ.
ಲೋಕಸಭಾ ಫಲಿತಾಂಶದ ಬಳಿಕ ಕುಸಿತ ಕಂಡಿತ್ತು..
ಕಳೆದ 2024ರ ಜೂನ್ ತಿಂಗಳ 4ರಂದು ಅಂದರೆ ಲೋಕಸಭಾ ಫಲಿತಾಂಶ ಪ್ರಕಟವಾದ ಬಳಿಕ ಷೇರುಪೇಟೆಯಲ್ಲಿ ಇಷ್ಟೊಂದು ಮಹಾ ಪತನ ಕಂಡು ಬಂದಿತ್ತು. ಬಿಜೆಪಿ ಸ್ವತಂತ್ರ ಸರ್ಕಾರ ಬರುತ್ತದೆ ಎನ್ನಲಾಗುತ್ತಿದ್ದ ವೇಳೆಯಲ್ಲಿ ಎನ್‌ಡಿಎ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾರಣ 4,389.73 ಅಂಕ ಕುಸಿತ ಕಂಡು ಷೇರು ಪೇಟೆ ನಷ್ಟ ಅನುಭವಿಸಿತ್ತು. ಇದಾದ ಬಳಿಕ ಈ ಟ್ರಂಪ್ ತೆರಿಗೆ ಎಫೆಕ್ಟ್‌ನಿಂದ 14 ಲಕ್ಷ ಕೋಟಿಯ ಮಹಾ ಪತನ ಸಂಭವಿಸಿದೆ.
ಏಪ್ರಿಲ್ 2ರಂದು ಘೋಷಿಸಿದ್ದ ಟ್ರಂಪ್..!
ಆಮದ ಸರಕುಗಳ ಮೇಲೆ ಅಮೆರಿಕವು ಪ್ರತೀಕಾರದ ತೆರಿಗೆಯನ್ನು ಹೇರುವ ನಿರ್ಧಾರ ಮಾಡಿದೆ. ಕಳೆದ ಏಪ್ರಿಲ್ 2ರಂದು ಖುದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಘೋಷಣೆಯನ್ನು ಮಾಡಿದ್ದರು. ಆದರೆ ಇದು ಅಧಿಕೃತವಾಗಿ ಏಪ್ರಿಲ್ 9 ರಂದು ಜಾರಿಗೆ ಬರಲಿದೆ. ಇದರಿಂದ ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳು ಪರಿಣಾಮಗಳನ್ನು ಅನುಭವಿಸುವಂತಾಗಿದೆ.