ಇಂಗ್ಲೆಂಡ್: ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ವಿಜಯದ ಓಟ ಮುಂದುವರೆದಿದೆ. ನಿನ್ನೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಫಾರ್ಡ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಭಾರತ, ಸೆಮಿಫೈನಲ್ ನತ್ತ ಮತ್ತೊಂದು ಹೆಜ್ಜೆ ಇಟ್ಟಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ನಿಧಾನಗತಿಯಲ್ಲಿ ಪುಟಿದೆದ್ದು ಬರುತ್ತಿದ್ದ ಚೆಂಡನ್ನು ದಂಡಿಸುವುದು ಸವಾಲಿನ ಸಂಗತಿಯಾಗಿತ್ತು. ತಂಡದ ಮೊತ್ತ 29 ಆಗುವಷ್ಟರಲ್ಲೇ ಹಿಟ್ ಮ್ಯಾನ್ ರೋಹಿತ್ ಪೆವಿಲಿಯನ್ ದಾರಿ ಹಿಡಿದಿದ್ದು, ಆರಂಭದಲ್ಲೇ ತಂಡದ ಆಘಾತಕ್ಕೆ ಕಾರಣವಾಯಿತು. ನಂತರ ಆರಂಭಿಕ ಬ್ಯಾಟ್ಸ್ಮನ್ ರಾಹುಲ್ ಜೊತೆ ಸೇರಿದ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ್ರು. ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ ಈ ಜೋಡಿ, ಎರಡನೇ ವಿಕೆಟ್ ಜೊತೆಯಾಟದಲ್ಲಿ 69 ರನ್ ಗಳಿಸಿತು. ಈ ನಡುವೆ 48 ರನ್ ಗಳಿಸಿದ್ದ ಕನ್ನಡಿಗ ರಾಹುಲ್, ಅರ್ಧ ಶತಕದಂಚಿನಲ್ಲಿ ಎಡವಿದ್ರು. ನಂತರ ವಿಜಯ್ ಶಂಕರ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ್ರು. ನಂತರ ಕೇದಾರ್ ಜಾದವ್ ಕೂಡ ನಿರಾಸೆ ಮೂಡಿಸಿದ್ರು.
ತದನಂತರ ವಿರಾಟ್ ರನ್ನು ಕೂಡಿಕೊಂಡ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇನಿಂಗ್ಸ್ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಈ ನಡುವೆ 37 ರನ್ ಗಳಿಸುತ್ತಿದ್ದಂತೆ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 20 ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದ್ರು. ಈ ವೇಳೆ ಅತ್ಮವಿಶ್ವಾಸದಿಂದಲೇ ಬ್ಯಾಟ್ ಬೀಸುತ್ತಿದ್ದ ಕೊಹ್ಲಿ, ಸತತ ನಾಲ್ಕನೇ ಅರ್ಧ ಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು. ಆದ್ರೆ ವಿರಾಟ್ ಶತಕದ ಆಸೆ ಕೈಗೂಡಲಿಲ್ಲ 72 ರನ್ ಗಳಿಸಿದ್ದ ಕೊಹ್ಲಿ, ಜೇಸನ್ ಹೋಲ್ಡರ್ ಗೆ ವಿಕೆಟ್ ಒಪ್ಪಿಸಿದರು. ನಂತರ ಧೋನಿಯನ್ನು ಕೂಡಿಕೊಂಡ ಹಾರ್ದಿಕ್ ಪಾಂಡ್ಯ, ಎಂದಿನಂತೆ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಈ ನಡುವೆ ಧೋನಿ ಅರ್ಧ ಶತಕ ಪೂರೈಸಿದರು. ಪರಿಣಾಮವಾಗಿ ಟೀಮ್ ಇಂಡಿಯಾ, ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 268 ರನ್ನುಗಳ ಸವಾಲಿನ ಮೊತ್ತ ಕಲೆ ಹಾಕಿತು.
ದೈತ್ಯರಿಗೆ ಆಘಾತ ನೀಡಿದ ಶಮಿ
ಟೀಮ್ ಇಂಡಿಯಾ ನೀಡಿದ್ದ 269 ರನ್ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ ಪಡೆಗೆ, ವೇಗಿ ಮೊಹಮ್ಮದ್ ಶಮಿ ಆರಂಭದಲ್ಲೇ ಆಘಾತ ನೀಡಿದ್ರು. ತಂಡದ ಮೊತ್ತ ಕೇವಲ 10 ರನ್ ಗಳಾಗಿದ್ದಾಗ, ಅಪಾಯಕಾರಿ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ರನ್ನು ಪೆವಿಲಿಯನ್ ಗಟ್ಟಿದ ಶಮಿ, 16 ರನ್ ಗಳಾಗಿದ್ದಾಗ ಮತ್ತೊಂದು ಆಘಾತ ನೀಡಿದ್ರು. ವಿಂಡೀಸ್ ನ ಮತ್ತೊಬ್ಬ ಅಪಾಯಕಾರಿ ಬ್ಯಾಟ್ಸ್ಮನ್ ಶಾಯ್ ಹೋಪ್ ರನ್ನ ಕ್ಲೀನ್ ಬೌಲ್ಡ್ ಮಾಡಿದ್ರು. ಪರಿಣಾಮವಾಗಿ ಒತ್ತಡಕ್ಕೆ ಸಿಲುಕಿದ ಕೆರೆಬಿಯನ್ ಪಡೆ, ಚೇತರಿಸಿಕೊಳ್ಳಲೇ ಇಲ್ಲ. ಇದರ ಸಂಪೂರ್ಣ ಲಾಭ ಪಡೆದ ಭಾರತೀಯ ಬೌಲರ್ ಗಳು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದ್ರು. ಪರಿಣಾಮವಾಗಿ ವಿಂಡೀಸ್ ಪಡೆ, 34.2 ಓವರ್ ಗಳಲ್ಲೇ ತನ್ನೇಲ್ಲ ವಿಕೆಟ್ ಕಳೆದುಕೊಂಡು 143 ರನ್ ಗಳನ್ನಷ್ಟೇ ಗಳಿಸಿತು. ಪರಿಣಾಮವಾಗಿ ಕೊಹ್ಲಿ ಪಡೆ, 125 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು. ಭಾರತದ ಪರ ವೇಗಿ ಮೊಹಮ್ಮದ್ ಶಮಿ 4 ವಿಕೆಟ್ ಪಡೆದು ಮಿಂಚಿದ್ರೆ, ಮತ್ತೊಬ್ಬ ವೇಗಿ ಜೆಸ್ಪ್ರಿತ್ ಬೂಮ್ರಾ 2, ಸ್ಪಿನ್ನರ್ ಗಳಾದ ಚಾಹಲ್ ಮತ್ತು ಕುಲ್ ದೀಪ್ ಕ್ರಮವಾಗಿ 2 ಮತ್ತು 1 ಹಾಗು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದು ಮಿಂಚಿದ್ರು.
ಧೋನಿ ಆಟಕ್ಕೆ ಸಚಿನ್ ಬೇಸರ..! ಮಿಸ್ ಮಾಡದೇ ಈ ವಿಡಿಯೋ ನೋಡಿ