Hubballi News: ಹುಬ್ಬಳ್ಳಿ: ತಾಲೂಕಿನಲ್ಲಿ ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಗ್ರಾಮೀಣ ಭಾಗದ, ಚಿಲ್ಲರೆ, ಚಹಾದ ಅಂಗಡಿ, ಸೇರಿದಂತೆ ಹಲವು ಮನೆಗಳಲ್ಲೂ ಸಹ ಕದ್ದುಮುಚ್ಚಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ.
ತಾಲೂಕಿನಾದ್ಯಂತ ಕಳೆದ ಹಲವಾರು ವರ್ಷಗಳಿಂದ ಬರಗಾಲ ಮತ್ತು, ಸತತ ಮಳೆಯ ಹಾನಿಯಿಂದಾಗಿ ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯೂ ಇಲ್ಲದಾಗಿದೆ. ಜನರು ಆರ್ಥಿಕ ಸಂಕಷ್ಟದಲ್ಲಿದ್ದರೂ ಗ್ರಾಮೀಣ ಭಾಗದ ಕೆಲವರು ಗ್ರಾಮದಲ್ಲಿಯೇ ಸುಲಭವಾಗಿ ಸಿಗುವ ಮದ್ಯ ಸೇವನೆ ಇಂದ ಇದರ ಚಟಕ್ಕೆ ಬಿದ್ದಿದ್ದಾರೆ. ಇದರಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.
ಗ್ರಾಮೀಣ ಭಾಗದ ಕೆಲವು ಚಹಾ ಅಂಗಡಿ, ಸಣ್ಣಪುಟ್ಟ ಮಾಂಸಾಹಾರಿ ಹೋಟೆಲ್‌ಗಳು, ಡಾಬಾಗಳು, ಕೆಲವರು ಮನೆಗಳಲ್ಲಿ, ಅಂಗಡಿಗಳೂ ಸಹ ಮದ್ಯ ಮಾರಾಟ ಕೇಂದ್ರವಾಗಿ ಮಾರ್ಪಟ್ಟಿದೆ. ಕೆಲವರು ಇದನ್ನು ನಕಲಿ ಮದ್ಯ ಎನ್ನುತ್ತಿದ್ದರೂ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಹುಬ್ಬಳ್ಳಿ ನಗರ, ಪಟ್ಟಣದ ವೈನ್‌ಶಾಪ್‌ಗಳಿಂದ ಖರೀದಿಸಿ 40-50 ರೂ. ಹೆಚ್ಚುವರಿ ದರ ವಿಧಿಸಿ ಮಾರಾಟ ಸಹ ಮಾಡುತ್ತಾರೆ.
ಮದ್ಯ ಮಾರಾಟಕ್ಕೆ ಕೊನೆ ಇಲ್ಲ: ಕೆಲವರು ಮನೆಗಳಲ್ಲಿ , ಕೊಟ್ಟಿಗೆ, ನೆಲದೊಳಗೆ ಹೊಂಡ ಮಾಡಿ, ಮನೆಯ ಅಟ್ಟ, ಶೌಚಗೃಹಗಳಲ್ಲೂ ಮಾರಾಟ ಮಾಡಲು ಮದ್ಯ ಶೇಖರಿಸಿ ಇಡುತ್ತಾರೆ. ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಕಠಿಣ ಕ್ರಮ ವಹಿಸದ ಪೊಲೀಸ್ ಮತ್ತು ಅಬಕಾರಿ ಇಲಾಖೆ ಆಗಾಗ ದಾಳಿ ನಡೆಸಿ ಪ್ರಕರಣ ದಾಖಲಿಸಿದರೂ, ಅಕ್ರಮ ಮದ್ಯ ಮಾರಾಟಕ್ಕೆ ಕೊನೆ ಇಲ್ಲದಂತಾಗಿದೆ ಎಂಬುದು ಗ್ರಾಮೀಣ ಭಾಗದ ಮಹಿಳೆಯರ ಅಳಲು.
ಎಗ್ಗಿಲ್ಲದೇ ಸಾಗಿದೆ ದಂಧೆ: ಅಂಚಟಗೇರಿ, ಕುಂದಗೋಳ ಕ್ರಾಸ್, ಕುಸುಗಲ್, ಕೀರೆಸೂರ,ಶಿರಗುಪ್ಪಿ, ಬಂಡಿವಾಡ, ಇಂಗಳಹಳ್ಳಿ,ಮಂಟೂರ, ಹಳಿಯಾಳ, ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆಯಾ ಭಾಗದ ಸಾರ್ವಜನಿಕರು ದೂರುತ್ತಾರೆ.
ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಗ್ರಾಮಸ್ಥ ರ ಒತ್ತಾಯ: ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಈ ಕುರಿತು ಅಬಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತು ಒಂದೆರಡು ಪ್ರಕರಣವು ದಾಖಲಿಸಿ ಕೈ ಚೆಲ್ಲುತ್ತಿದ್ದಾರೆ. ಈ ಬಗ್ಗೆ ಸೂಕ್ತವಾದ ತನಿಖೆ ಕೈಗೊಂಡು ಇದು ಎಲ್ಲಿಂದ ಸರಬರಾಜು ಆಗುತ್ತಿದೆ, ಮದ್ಯದ ಪೌಚ್‌ಗಳಲ್ಲಿ ಇರುವ ನಂಬರ್ ರಿಂದ ಇದು ಎಲ್ಲಿಂದ ಸರಬರಾಜಾಗಿತ್ತು ಎಂಬುದನ್ನು ನಿಖರವಾಗಿ ತಿಳಿಯುವ ಸಾಧ್ಯತೆ ಇದ್ದರೂ ಈ ಕೆಲಸ ನಡೆಯುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಕುಡುಕರು ಹೆಚ್ಚಾಗಲು ಇಲಾಖೆಯವರೇ ಕಾರಣವಾಗಿದ್ದಾರೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಮೇಲಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಹಾಗೂ ಗ್ರಾಮಸ್ಥರ ಆಗ್ರಹವಾಗಿದೆ.
ಪೊಲೀಸ್ ಕಿರುಕುಳಕ್ಕೆ ಯುವಕ ಆತ್ಮಹತ್ಯೆ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು!