ಬೀದರ್ ಜಿಲ್ಲೆಯ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆಯಲ್ಲಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಹಿನ್ನಡೆಯಾಗಿದ್ದು ತೀವ್ರ ಮುಖಭಂಗವಾಗಿದೆ.
ಹತ್ತು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ, 13 ಸ್ಥಾನಗಳೂ ಜೆಡಿಎಸ್ ಬೆಂಬಲಿತರಿಗೆ ಸಿಕ್ಕಿದೆ. ನಾಗಮಾರಪಳ್ಳಿ ಕುಟುಂಬದ ಪಾರುಪತ್ಯ ಮತ್ತೊಮ್ಮೆ ಶುರುವಾಗಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಿನ್ನಡೆ ಸಾಧಿಸಿದ್ದಾರೆ.
ಜೆಡಿಎಸ್ ನಾಯಕರಾದ ಸೂರ್ಯಕಾಂತ್ ಮತ್ತು ಉಮಾಕಾಂತ್ ನಾಗಮಾರಪಳ್ಳಿ ನೇತೃತ್ವದ ಪ್ಯಾನಲ್‌ಗೆ ರೈತರ ಬೆಂಬಲ ಸಿಕ್ಕಿದ್ದು, ಚುನಾವಣೆಯ ನಂತರ ಬೆಂಬಲಿಗರ ವಿಜಯೋತ್ಸವ ಮಾಡಿದ್ರು. ಈ ಗೆಲುವು ಸಹಕಾರ ರಂಗದಲ್ಲಿ ನಾಗಮಾರಪಳ್ಳಿ ಕುಟುಂಬದ ಬಲವನ್ನು ಸಾಬೀತುಪಡಿಸಿದೆ.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆಯು, 9 ಸ್ಥಾನಗಳಿಗೆ ನಡೆಯಿತು. ಒಟ್ಟು 13 ಸ್ಥಾನಗಳಲ್ಲಿ 4 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದವು. ಅವುಗಳಲ್ಲಿ ಉಮಾಕಾಂತ್ ನಾಗಮಾರಪಳ್ಳಿ ಸೇರಿದ್ದಾರೆ.
ಒಟ್ಟು 4,438 ಮತದಾರರಿದ್ದು, 2,977 ರೈತ ಮತದಾರರು ಹಕ್ಕು ಚಲಾಯಿಸಿದ್ದಾರೆ. ಕಾರ್ಖಾನೆ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಿಗೆ ಭವ್ಯ ಗೆಲುವು ದೊರೆತಿದೆ. ಬಿಜೆಪಿ ಬೆಂಬಲಿತರಲ್ಲಿ ಒಬ್ಬರೇ ಗೆದ್ದಿದ್ದಾರೆ.
ಗೆಲುವಿನ ಬಗ್ಗೆ ಸೂರ್ಯಕಾಂತ್ ನಾಗಮಾರಪಳ್ಳಿ ಪ್ರತಿಕ್ರಿಯಿಸಿದ್ದು, ಇದು ನಮ್ಮ ಗೆಲುವಲ್ಲ, ಜಿಲ್ಲೆಯ ರೈತರ ಗೆಲುವು. ನಮ್ಮ ಕುಟುಂಬದ ಮೇಲೆ ರೈತರು ಇಟ್ಟಿರುವ ನಂಬಿಕೆಯನ್ನು ನಾವು ಉಳಿಸಿಕೊಳ್ಳುತ್ತೇವೆ ಅಂತಾ ಭರವಸೆ ನೀಡಿದ್ದಾರೆ.

