ಬಿಹಾರ ವಿಧಾನಸಭಾ ಚುನಾವಣೆಗೆ ಮಹಾಘಟಬಂಧನ್‌ನ ಸಿಎಂ ಅಭ್ಯರ್ಥಿಯಾಗಿ, ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ಅವರನ್ನು ಘೋಷಿಸಲಾಗಿದೆ. ಈ ಬೆನ್ನಲ್ಲೇ ಬಿಜೆಪಿ, ಜನತಾದಳ ಯುನೈಟೆಡ್, ಲೋಕ ಜನಶಕ್ತಿ ಪಕ್ಷ, ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಮಂಚ್‌ಗಳನ್ನು ಒಳಗೊಂಡಿರುವ, ಎನ್‌ಡಿಎನಲ್ಲಿ, ಸಿಎಂ ಹುದ್ದೆಗೆ ಅಭ್ಯರ್ಥಿ ಯಾರು ಎಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.
ಚುನಾವಣೆಯ ನಂತರವೂ ನಿತೀಶ್ ಕುಮಾರ್ ಅವರನ್ನು ಉನ್ನತ ಹುದ್ದೆಯಲ್ಲಿ ಉಳಿಯುವುದನ್ನು ಕೇಸರಿ ಪಕ್ಷ ಬಯಸುವುದಿಲ್ಲ ಎಂದು ಟೀಕಿಸಿದ್ದಾರೆ. ಎನ್‌ಡಿಎ ಸಿಎಂ ಮುಖ ಯಾರು? ಇಲ್ಲಿಯವರೆಗೆ ಯಾವುದೇ ಜಂಟಿ ಪತ್ರಿಕಾಗೋಷ್ಠಿ ನಡೆದಿಲ್ಲ. ಯಾವುದೇ ಯೋಚನೆ, ಯೋಜನೆಗಳನ್ನು ಬಹಿರಂಗಪಡಿಸಲಾಗಿಲ್ಲ, ಯಾವುದೇ ಕಾರ್ಯಸೂಚಿ ಮತ್ತು ಯಾವುದೇ ಮುಖ್ಯಮಂತ್ರಿಯನ್ನು ಘೋಷಿಸಲಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಗುಡುಗಿದ್ದು, ಅವರ ಹೇಳಿಕೆಗಳನ್ನು ಗಮನಿಸಿದ್ರೆ, ಬಿಹಾರ ಚುನಾವಣೆಯ ನಂತರ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವುದಿಲ್ಲ ಎಂದು ತೋರಿಸುತ್ತದೆ. ಕೆಲ ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಮಿತ್ ಶಾ, ಚುನಾಯಿತ ಶಾಸಕರ ಆಯ್ಕೆಯ ಪ್ರಕಾರ, ಚುನಾವಣೆಯ ನಂತರ ಮುಂದಿನ ಸಿಎಂ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದರು.
ಈ ಹೇಳಿಕೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಅನ್ನೋದು ಸ್ಪಷ್ಟವಾಗಿ ತೋರಿಸುತ್ತಿದೆ. ಚುನಾವಣೆಯ ನಂತರ ಶಾಸಕಾಂಗ ಪಕ್ಷದ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆಂದು ಹೇಳಿದ್ದಾರೆ. ಆ ಮೂಲಕ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವುದನ್ನು ಬಿಜೆಪಿ ಬಯಸುವುದಿಲ್ಲ ಎಂದು ತೇಜಸ್ವಿ ಯಾದವ್ ಕುಹಕವಾಡಿದ್ದಾರೆ.
ಮಹಾಘಟಬಂಧನ್ ಪ್ರಣಾಳಿಕೆಯನ್ನು ಅಕ್ಟೋಬರ್ 28ರಂದು ತೇಜಸ್ವಿ ಯಾದವ್ ಮತ್ತು ವಿರೋಧ ಪಕ್ಷದ ಇತರೆ ನಾಯಕರ ಸಮ್ಮುಖದಲ್ಲಿ, ಬಿಡುಗಡೆ ಮಾಡಲಾಗುವುದು. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11ರಂದು ಚುನಾವಣೆ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.

