ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಇಂದು ಸಮಾಜ ಕಲ್ಯಾಣ ಇಲಾಖೆ (Department of Social Welfare) ಆಯೋಜಿಸಿದ್ದ ಓಬವ್ವ ಆತ್ಮರಕ್ಷಣಾ ಕಲೆಯ ತರಬೇತಿ (Training in the art of self defense) ಕಾರ್ಯಕ್ರಮವನ್ನು ಉದ್ಘಾಟನೆ (inauguration) ಮಾಡಿದ್ದಾರೆ. ನಂತರ ಮಾತನಾಡಿದ ಅವರು 12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ ಮಾಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ. ಸಮಾಜದಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನವಿದೆ, ಆದರೆ ಕಿಡಿಗೇಡಿಗಳು ತಾಯಂದಿರನ್ನು, ಮಕ್ಕಳನ್ನು ನೋಡುವ ರೀತಿ ಅಮಾನುಶ ವಾಗಿದೆ. ಈ ರೀತಿಯ ಮನಸ್ಥಿತಿಗಳಿಗೆ ಅನೇಕ ಹೆಣ್ಣುಮಕ್ಕಳು ಬಲಿಯಾಗಿರುವುದನ್ನು ನಾವು ನೋಡಿದ್ದೇವೆ. ಮಹಿಳೆಯರಿಗೆ ಆತ್ಮರಕ್ಷಣೆಯ ಕಾರ್ಯಕ್ರಮ ಅಗತ್ಯವಿದೆ. ಆತ್ಮರಕ್ಷಣೆಯ ಕಲೆ ಇದ್ದರೆ ದುಷ್ಟಶಕ್ತಿಗಳಿಗೆ ಸರಿಯಾದ ಪಾಠವನ್ನು ಕಲಿಸಬಹುದೆಂದು ವಿಶ್ವಾಸವಿದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಶಿಕ್ಷಣ, ಇಲಾಖೆಗಳು, ಕಾನೂನು (Law), ಸಮಾಜ, ಸರ್ಕಾರ ಮಹಿಳೆಯರ ರಕ್ಷಣೆಗೆ ಒಗ್ಗಟ್ಟಾಗಿ ನಿಂತು ಅವರ ಆತ್ಮರಕ್ಷಣೆ ಮಾತ್ರವಲ್ಲದೆ, ಅವರ ಗೌರವ ರಕ್ಷಣೆಯನ್ನು ಮಾಡಬೇಕಿದೆ. ಮಹಿಳೆಯರ ರಕ್ಷಣೆಗೆ ಪ್ರಾಮುಖ್ಯತೆಯನ್ನು ನೀಡಿ ಕರ್ನಾಟಕ ವಸತಿ ಶಾಲೆಗಳ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.




