Saturday, April 20, 2024

Latest Posts

ಧೋನಿ-ಜಡೇಜಾ ಹೋರಾಟ ವ್ಯರ್ಥ, ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಭಾರತ

- Advertisement -

ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯ ಟೀಮ್ ಇಂಡಿಯಾ ಸೆಮಿಫೈನಲ್ ನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದೆ. ಈ ಮೂಲಕ ವಿಶ್ವಕಪ್ ಕಪ್ ಗೆಲ್ಲುವ ಕೊಹ್ಲಿ ಪಡೆಯ ಕನಸು, ನುಚ್ಚು ನೂರಾಯಿತು. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ್ಡ್ ನಲ್ಲಿ ನಡೆದ
ನ್ಯೂಜಿಲೆಂಡ್ ಎದುರಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ, ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಭಾರತ ಮುಗ್ಗರಿಸಿತು.

ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳ ವೈಫಲ್ಯ
ಟೂರ್ನಿಯುದ್ದಕ್ಕೂ ಬಿಂದಾಸ್ ಪರ್ಫಾರ್ಮೆನ್ಸ್ ನೀಡಿ, ತಂಡವನ್ನ ಸೆಮಿಫೈನಲ್ ಹಂತಕ್ಕೇರಿಸಿದ್ದ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳು ಬಹುಮುಖ್ಯ ಪಂದ್ಯದಲ್ಲಿ ಕೈ ಕೊಟ್ಟಿದ್ದು, ಭಾರತದ ಸೋಲಿಗೆ ಕಾರಣವಾಯಿತು. ಕಿವೀಸ್ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಕೊಹ್ಲಿ ಪಡೆಯ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ರು. ಬ್ಲಾಕ್ ಕ್ಯಾಪ್ಸ್ ಸಂಘಟಿಸಿದ ಬೌಲಿಂಗ್ ದಾಳಿಗೆ ತತ್ತರಿಸಿದ್ರು. ತಂಡದ ಮೊತ್ತ 5 ರನ್ ಗಳಾಗುವಷ್ಟರಲ್ಲೇ ರೋಹಿತ್-ರಾಹುಲ್ ಮತ್ತು ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ದು, ದೊಡ್ಡ ಆಘಾತಕ್ಕೆ ಕಾರಣವಾಯಿತು. ನಂತರ ತಂಡದ ಮೂತ್ತ 24 ಆಗಿದ್ದಾಗ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ವಿಕೆಟ್ ಒಪ್ಪಿಸಿದ್ರು. ಈ ಮೂಲಕ ತಂಡ ಹೀನಾಯ ಸೋಲನುಭವಿಸುವ ಅಪಾಯದಲ್ಲಿತ್ತು. ಆದ್ರೆ ಆರನೇ ವಿಕೆಟಿಗೆ ಜೊತೆಯಾದ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯರ ಜೊತೆಯಾಟ, ತಂಡಕ್ಕೆ ಕೊಂಚ ಆಸರೆಯಾಯಿತು. ಆದ್ರೆ ತಂಡದ ಮೊತ್ತ ಕ್ರಮವಾಗಿ 71 ಮತ್ತು 92 ಇದ್ದಾಗ ಪಂತ್ ಮತ್ತು ಪಾಂಡ್ಯ ವಿಕೆಟ್ ಕಳೆದುಕೊಂಡ ಭಾರತ ಮತ್ತೆ ಒತ್ತಡಕ್ಕೊಳಗಾಯಿತು.

ಗೆಲುವಿನ ಆಸೆ ಚಿಗುರಿಸಿದ ಜಡ್ಡು-ಮಾಹಿ
92 ರನ್ ಗಳಿಸುವಷ್ಟರಲ್ಲೇ ತಂಡದ 6 ವಿಕೆಟ್ ಪತನವಾಗಿತ್ತು. ಈ ಸಮಯದಲ್ಲಿ ಗೆಲುವಿನ ದಡ ಸೇರಿಸುವ ಜವಾಬ್ದಾರಿ ಬಿದ್ದಿದ್ದು, ಧೋನಿ ಮತ್ತು ಜಡೇಜಾ ಮೇಲೆ. ತಮ್ಮ ಅನುಭವವನ್ನೇಲ್ಲ ಕ್ರೀಸ್ ನಲ್ಲಿ ಧಾರೆ ಎರೆದ ಈ ಜೋಡಿ, ಭಾರತೀಯರ ಮೊಗದಲ್ಲಿ ಗೆಲುವಿನ ನಗೆ ಕಾಣುವ ನಿರೀಕ್ಷೆ ಮೂಡಿಸಿದ್ರು. ಆದ್ರೆ ಅದೃಷ್ಟ ಅನ್ನೋದು ಕಿವೀಸ್ ಪರವಾಗಿದ್ದ ಕಾರಣ, ಮಾಹಿ-ಜಡ್ಡು ಹೋರಾಟ ವ್ಯರ್ಥವಾಯಿತು. ನ್ಯೂಜಿಲೆಂಡ್ ಬೌಲರ್ ಗಳ ಎದುರು ಕೆಚ್ಚೆದೆಯ ಹೋರಾಟ ನಡೆಸಿದ ಇಬ್ಬರು ಅರ್ಧಶತಕ ದಾಖಲಿಸಿದ್ರು. ಅದರಲ್ಲೊ ಜಡೇಜಾ ಬ್ಯಾಟಿಂಗ್ ವೈಭವ, ಟಾಪ್ ಆರ್ಡರ್ ಬ್ಯಾಟ್ಸ್ ಮನ್ ನಗಳು ನಾಚುವಂತಿತ್ತು. 59 ಎಸೆತಗಳಲ್ಲಿ 77 ರನ್ ಚಚ್ಚಿದ ಜಡ್ಡು, ವೇಗಿ ಬೌಲ್ಟ್ ಎಸೆದ 47ನೇ ಓವರ್ ನ 5 ನೇ ಎಸೆತವನ್ನ ಸಿಕ್ಸರ್ ಗಟ್ಟುವ ಬರದಲ್ಲಿ ಕೇನ್ ವಿಲಿಯಮ್ಸನ್ ಗೆ ಕ್ಯಾಚಿತ್ತು ಹೊರ ನಡೆದ್ರು. ಈ ಮೂಲಕ ಧೋನಿ-ಜಡೇಜಾರ ಶತಕದ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ಈ ವೇಳೆ ತಂಡದ ಗೆಲುವಿಗೆ ಇನ್ನೂ, 32 ರನ್ ಗಳ ಅವಶ್ಯಕತೆ ಇತ್ತು. ಕ್ರೀಸ್ ನಲ್ಲಿ ಗ್ರೇಟ್ ಮ್ಯಾಚ್ ಫಿನಿಷರ್ ಧೋನಿ ಇದ್ದದ್ದು, ಭಾರತೀಯರ ಧೈರ್ಯ ಕ್ಕೆ ಕಾರಣವಾಗಿತ್ತು. ಆದ್ರೆ ತಂಡದ ಮೊತ್ತ 216 ರನ್ ಆಗಿದ್ದಾಗ, ಗುಪ್ಟಿಲ್ ಎಸೆದ ಅದ್ಭುತ ಥ್ರೋ ಗೆ ಧೋನಿ ರನ್ ಔಟ್ ಆದ್ರು. ಈ ಮೂಲಕ ಭಾರತದ ಫೈನಲ್ ಆಸೆಯೂ ಕಮರಿತು. ನಂತರ 49.3ಓವರ್ ಗಳಲ್ಲಿ 221 ರನ್ ಗಳಿಗೆ ಭಾರತ ಆಲ್ ಔಟ್ ಆಯಿತು. ಪರಿಣಾಮವಾಗಿ ಭಾರತ, 18 ರನ್ ಗಳ ಸೋಲನುಭವಿಸುವ ಮೂಲಕ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿತ್ತು.

ನಂದನ್ ಸ್ಪೋರ್ಟ್ಸ್ ಬ್ಯೂರೋ ಕರ್ನಾಟಕ ಟಿವಿ

https://www.youtube.com/watch?v=dDuu2NKFJ-M
- Advertisement -

Latest Posts

Don't Miss