Friday, December 27, 2024

Latest Posts

ಭಾರತದಲ್ಲಿರುವ 5 ಪ್ರಮುಖ, ಪ್ರಸಿದ್ಧ ಗಣಪತಿ ದೇವಾಲಯಗಳಿವು..

- Advertisement -

ನಾವು ಈಗಾಗಲೇ ನಿಮಗೆ ಭಾರತದಲ್ಲಿರುವ ಶಿವನ ದೇವಸ್ಥಾನ, ರಾಮನ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಭಾರತದಲ್ಲಿರುವ ಪ್ರಸಿದ್ಧ 5 ಗಣಪತಿ ದೇವಸ್ಥಾನಗಳ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.

  1. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ. ಇದು ಮಹಾರಾಷ್ಟ್ರದ ಮುಂಬೈ ನಗರದ ಪ್ರಭಾದೇವಿ ಎಂಬಲ್ಲಿದೆ. ಸೆಲೆಬ್ರಿಟಿಗಳು ತಮ್ಮ ಸಿನಿಮಾ ಬಿಡುಗಡೆಯಾಗುವ ಮುನ್ನ ಮತ್ತು ರಾಜಕಾರಣಿಗಳು ಚುನಾವಣೆಗೆ ನಿಲ್ಲುವ ಮುನ್ನ, ಇಲ್ಲಿ ಬಂದು ಸಿದ್ಧಿ ವಿನಾಯಕನ ದರ್ಶನ ಪಡೆದು ಹೋಗುತ್ತಾರೆ. ಮತ್ತು ಇಲ್ಲಿ ಬಂದು ಬೇಡಿದ ಹೆಚ್ಚಿನವರಿಗೆ, ಯಶಸ್ಸು ಸಿಕ್ಕಿದೆ. ವರ್ಷಕ್ಕೆ ಕೋಟ್ಯಾಂತರ ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಇದು ಭಾರತದ ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳಲ್ಲೊಂದು.
  2. ಶ್ರೀಮಂತ್ ದಗಡುಶೇಟ್ ಹಲ್ವಾಯಿ ಮಂದಿರ. ಇದು ಮಹಾರಾಷ್ಟ್ರದ ಪುಣೆಯಲ್ಲಿದೆ. ಇಲ್ಲಿ ಗಣೇಶೋತ್ಸವವನ್ನ ಅದ್ಧೂರಿಯಿಂದ ನೆರವೇರಿಸಲಾಗುತ್ತದೆ. ದಗಡುಶೇಟ್ ಹಲ್ವಾಯಿ ಮತ್ತು ಲಕ್ಷ್ಮೀಬಾಯಿ ಎನ್ನುವವರು, ತಮ್ಮ ಮಗನನ್ನು ಕಳೆದುಕೊಂಡ ಬಳಿಕ ಈ ದೇವಸ್ಥಾನವನ್ನ ಕಟ್ಟಿದರು. ಇವರ ಮಗ ಪ್ಲೇಗ್ ರೋಗಕ್ಕೆ ತುತ್ತಾಗಿದ್ದ.
  3. ಮಧೂರ ಮಹಾಗಣಪತಿ ದೇವಸ್ಥಾನ. ಕೇರಳದ ಕಾಸರಗೋಡಿನ, ಮಧೂರು ಎಂಬಲ್ಲಿ ಈ ಮಧೂರು ಮಹಾಗಣಪತಿ ಎಂಬ ದೇವಸ್ಥಾನವಿದೆ. ಇದು ಮೊದಲು ಶಿವನ ದೇವಸ್ಥಾನವಾಗಿತ್ತು. ಇಲ್ಲಿ ಮದನಂತೇಶ್ವರನನ್ನು ಪೂಜಿಸಲಾಗುತ್ತಿತ್ತು. ಒಮ್ಮೆ ಇಲ್ಲಿನ ಅರ್ಚಕರ ಮಗ, ಗೋಡೆಯ ಮೇಲೆ ಗಣಪತಿಯ ಚಿತ್ರ ಬಿಡಿಸಿದ. ಮತ್ತು ಅದನ್ನ ಬೊಡ್ಡಜ್ಜ ಎಂದು ಕರೆದ. ಬೊಡ್ಡ ಅಂದ್ರೆ ದಪ್ಪ ಎಂದರ್ಥ. ಹಾಗಾಗಿ ಜನ ಇಂದಿಗೂ ಮಧೂರು ಮಹಾಗಣಪತಿಯನ್ನ ಬೊಡ್ಡಜ್ಜ ಎಂದು ಕರೆಯುತ್ತಾರೆ. ಆ ಚಿತ್ರ ದಿನಗಳೆದಂತೆ, ಬೆಳೆದು ಮೂರ್ತಿಯಾಯಿತು. ಆ ಮೂರ್ತಿ ವರ್ಷಗಳೆದಂತೆ, ಉದ್ದವಾಗುತ್ತಾ ಹೋಗುತ್ತಿತ್ತು. ಇದನ್ನು ಕಂಡ ಓರ್ವ ಅರ್ಚಕರು, ನೀನು ಉದ್ದ ಬೆಳೆಯಬೇಡ, ಅಡ್ಡ ಬೆಳಿ ಎಂದು ಆ ಮೂರ್ತಿಯ ತಲೆಯ ಮೇಲೆ ಕೈಯನ್ನಿಟ್ಟರು. ಅಂದಿನಿಂದ ಇಂದಿನವರೆಗೂ, ಈ ಮೂರ್ತಿ ವರ್ಷಕ್ಕೆ ಕೊಂಚ ಕೊಂಚ ಅಡ್ಡ ಬೆಳೆಯುತ್ತಿದೆ.
  4. ದೊಡ್ಡ ಗಣಪತಿ ದೇವಸ್ಥಾನ, ಬೆಂಗಳೂರು. ಇದು ಬೆಂಗಳೂರಿನ ಬಸವನ ಗುಡಿಯಲ್ಲಿ ಇದೆ. ಇಲ್ಲಿ ಬಸವನ ದೇವಸ್ಥಾನವೂ ಇದ್ದ ಕಾರಣ, ಈ ಸ್ಥಳಕ್ಕೆ ಬಸವನಗುಡಿ ಅಂತಾ ಕರೆಯಲಾಗತ್ತೆ. ಇಲ್ಲಿ ಪ್ರತೀ ವರ್ಷ ನಡೆಯುವ ಕಳ್ಳೇಕಾಯಿ ಪರೀಶೆ ಸಖತ್ ಫೇಮಸ್. ಇನ್ನು ಮನೋಕಾಮನೆಗಳನ್ನ ಈಡೇರಿಸುವ ದೊಡ್ಡ ಗಣಪತಿಯ ದರ್ಶನಕ್ಕೆ ಪ್ರತಿದಿನ ಹಲವಾರು ಭಕ್ತರು ಬರುತ್ತಾರೆ. ಗಣೇಶ ಚತುರ್ಥಿಯಂದು, ಇಲ್ಲಿ ಗಣೇಶನಿಗೆ ಹಲವು ರೀತಿಯ ಅಲಂಕಾರವನ್ನು ಮಾಡಲಾಗುತ್ತದೆ.
  5. ಇಡಗುಂಜಿ ಮಹಾಗಣಪತಿ ದೇವಸ್ಥಾನ ಉತ್ತರ ಕನ್ನಡ. ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ತಾಲೂಕಿನಲ್ಲಿ ಮಹತೋಬಾರ ಇಡಗುಂಜಿ ಮಹಾಗಣಪತಿ ದೇವಸ್ಥಾನವಿದೆ. ಇಲ್ಲಿ ರಥ ಸಪ್ತಮಿಯಂದು ಅದ್ಧೂರಿ ಜಾತ್ರೆ ನೆರವೇರಿಸಲಾಗತ್ತೆ. ವಾಲಖಿಲ್ಯ ಮುನಿಗಳು, ಮಹಾಗಣಪತಿಯನ್ನ ಇಲ್ಲಿ ಕರೆಸಿ ಪೂಜಿಸಿದ್ದರು. ಅಂದಿನಿಂದ ಇಡಗುಂಜಿ ಮಹಾಗಣಪತಿ ಇಲ್ಲಿ ನೆಲೆ ನಿಂತಿದ್ದಾನೆಂಬ ನಂಬಿಕೆ ಇದೆ. ಇನ್ನು ಈ ಗಣೇಶ ಮೂರ್ತಿ ಎಲ್ಲ ಮೂರ್ತಿಗಳಂತೆ ಸಾಧಾರಣ ಮೂರ್ತಿಯಂತಲ್ಲ. ಇದು ನಿಂತ ಗಣೇಶ ಮೂರ್ತಿಯಾಗಿದ್ದು, ಕಪ್ಪು ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ.

- Advertisement -

Latest Posts

Don't Miss