ಬೆಂಗಳೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗಿರುವ ಪ್ರಕರಣ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಐಟಿ ಇಲಾಖೆಯ ಹಿಂದಿನ ಡಿಜಿ ತಮಗೆ ಕಿರುಕುಳ ನೀಡಿದ್ದಾರೆಂದು ನಾಪತ್ತೆಯಾಗುವ ಮುನ್ನ ಬರೆದಿರುವ ಪತ್ರದಲ್ಲಿ ಸಿದ್ಧಾರ್ಥ್ ಉಲ್ಲೇಖಿಸಿದ್ದಾರೆ. ಅಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದ ವಿಚಾರವನ್ನೂ ಸಿದ್ಧಾರ್ಥ ಪತ್ರದಲ್ಲಿ ಬಹಿರಂಗ ಪಡಿಸಿದ್ದಾರೆ.
ನಿನ್ನೆ ಸಂಜೆಯಿಂದ ನಾಪತ್ತೆಯಾಗಿರುವ ಉದ್ಯಮಿ ಸಿದ್ದಾರ್ಥ್ ತಾವು ನಾಪತ್ತೆಯಾಗುವುದಕ್ಕೂ ಮುನ್ನವೇ ಪತ್ರ ಬರೆದಿದ್ದು, ಅದರಲ್ಲಿ ತಾವು ಅನುಭವಿಸುತ್ತಿರುವ ತೊಂದರೆ ಮತ್ತಿತರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 37 ವರ್ಷಗಳ ಉದ್ಯಮದಿಂದ ನಾನು ಇದೀಗ ಕೈಚೆಲ್ಲುತ್ತಿದ್ದೇನೆ, ಕೆಲವೊಂದು ವಿಚಾರಗಳ ವಿರುದ್ಧ ಹೋರಾಡಲು ನನಗೆ ಶಕ್ತಿಯಿಲ್ಲ ಅಂತ ತಮ್ಮ ಸಂಸ್ಥೆ ಕೆಫೆ ಕಾಫಿ ಡೇ ಫ್ಯಾಮಿಲಿ ಮತ್ತು ಬೋರ್ಡ್ ಆಫ್ ಡೈರೆಕ್ಟರ್ಸ್ ಗೆ ಪತ್ರ ಬರೆದಿರೋ ಸಿದ್ದಾರ್ಥ್ ನನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳಲಾಗ್ತಿಲ್ಲ. ನನ್ನ ಸಂಸ್ಥೆಯಿಂದ 30 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇನೆ. ಆದರೂ ನಾನು ಯಶಸ್ವಿ ಉದ್ಯಮಿಯಾಗಲು ಸಾಧ್ಯವಾಗಲಿಲ್ಲ. ನನ್ನ ಎರಡೂ ಕಂಪನಿಗಳಾದ ಕಾಫಿ ಮತ್ತು ಮೈಂಡ್ ಟ್ರೀ ಶೇರ್ ಗಳನ್ನು ಅಟ್ಯಾಚ್ ಮಾಡಲಾಗಿತ್ತು. ಇದೀಗ ಈ ಎಲ್ಲಾ ಶೇರ್ ಗಳನ್ನು ಹಿಂಪಡೆಯಲು ನನಗೆ ತೀವ್ರ ಒತ್ತಡ ಹೇರಾಗಿದೆ. ಈ ಹಿಂದೆ ಇದ್ದ ಐಟಿ ಡಿಜಿಯಿಂದ ತೀವ್ರ ಕಿರುಕುಳ. ಯಾರಿಗೂ ಮೋಸ ಮಾಡೋದಾಗಲಿ, ದಾರಿ ತಪ್ಪಿಸೋದಾಗಲಿ ನನ್ನ ಉದ್ದೇಶವಾಗಿರಲಿಲ್ಲ. ನಾನು 37 ವರ್ಷಗಳಿಂದ ನಾನು ಯಶಸ್ವಿ ಉದ್ಯಮಿ ಯಾಗಿದ್ದೆ, ಆದರೆ ಕೊನೆ ಕ್ಷಣದಲ್ಲಿ ಅಸಹಾಯಕನಾಗಿದ್ದೇನೆ. ಸಾಲಗಾರರಿಗೆ ನೀಡಲು ಹಣವನ್ನು ಹೇಗೆ ಹೊಂದಿಸಬೇಕೆಂದು ತಿಳಿಯುತ್ತಿಲ್ಲ. ನನ್ನ ನಿರ್ಧಾರಗಳಿಗೆಲ್ಲಾ ನಾನೇ ಕಾರಣ ಅಂತ ಪತ್ರದಲ್ಲಿ ಸಿದ್ಧಾರ್ಥ್ ಬರೆದಿದ್ದಾರೆ.
ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹೂಡಿಕೆ ಮಾಡಿದ್ದ ಸಿದ್ಧಾರ್ಥ್, ಕೆಲ ಹಣಕಾಸು ವ್ಯವಹಾರವನ್ನು ಸಂಸ್ಥೆಯ ಆಡಿಟರ್ ಗೆ ತಿಳಿಯದಂತೆ ನಡೆಸಿದ್ದು, ಸಂಸ್ಥೆಗೆ ಹೊಸ ಮ್ಯಾನೇಜ್ ಮೆಂಟ್ ಬರಬೇಕು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು. ನನ್ನ ಇಡೀ ಸಂಪಾದನೆ, ಆಸ್ತಿಗಳ ವಿವರಗಳನ್ನು ಈ ಪತ್ರದ ಜೊತೆ ಅಟ್ಯಾಚ್ ಮಾಡಿದ್ದು, ಇದೀಗ ನಷ್ಟದಲ್ಲಿರುವ ಸಂಸ್ಥೆಯನ್ನು ನಡೆಸಿಕೊಂಡು ಹೋಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು 3 ವರ್ಷದಿಂದ ಸಿದ್ದಾರ್ಥ್ ಇನ್ನೋವಾ ಕಾರಿನ ಚಾಲಕನಾಗಿದ್ದ ಬಸವರಾಜ್ ಗೆ ನಿನ್ನೆ ಬೆಳಗ್ಗೆ ಸಕಲೇಶಪುರಕ್ಕೆ ಹೋಗೋಣವೆಂದು ತಿಳಿಸಿದ್ದ ಸಿದ್ದಾರ್ಥ್, ಪಂಪ್ ವೆಲ್ ಸರ್ಕಲ್ ತಲುಪುತ್ತಿದ್ದಂತೆ ಮಂಗಳೂರಿನ ಕಡೆ ಕಾರು ತಿರುಗಿಸಲು ಹೇಳಿದ್ದರಂತೆ. ಅಂದಹಾಗೆ ಸಿದ್ದಾರ್ಥ್ ಮಂಗಳೂರಿನಲ್ಲಿ ರೆಸಾರ್ಟ್ ನಿರ್ಮಾಣ ಮಾಡಲು ಮುಂದಾಗಿದ್ದು ಅಲ್ಲಿ ಸೈಟ್ ಕೂಡ ಖರೀದಿಸಿದ್ರು. ಪಂಪ್ ವೆಲ್ ಸರ್ಕಲ್ ಬಳಿ ತಿರುವು ಪಡೆದ ಬಳಿಕ ಉಳ್ಳಾಲದ ನೇತ್ರಾವತಿ ಬ್ರಿಡ್ಜ್ ಬಳಿ ಕಾರಿನಿಂದ ಫೋನಿನಲ್ಲಿ ಮಾತಮಾಡಿಕೊಂಡು ಕೆಳಕ್ಕಿಳಿದ ಸಿದ್ದಾರ್ಥ್ ನಾನು ವಾಕಿಂಗ್ ಮಾಡಿಕೊಂಡು ಬರುತ್ತೇನೆಂದಿದ್ದರು. ಆದರೆ ಹೆಚ್ಚು ಹೊತ್ತು ಕಳೆದರೂ ಸಿದ್ದಾರ್ಥ್ ಮರಳಿ ಕಾರಿನ ಬಳಿ ಬಾರದೆ ಇದ್ದಿದ್ದರಿಂದ ಗಾಬರಿಗೊಂಡ ಚಾಲಕ ಬಸವರಾಜ್ ಕುಟುಂಬಸ್ಥರಿಗೆ ಮಾಹಿತಿ ನೀಡಿ ಪೊಲೀಸರಿಗೆ ದೂರು ನೀಡಿದ್ದಾನೆ. ಇನ್ನು ಇನ್ನೋವಾ ಕಾರನ್ನು ಸಿದ್ದಾರ್ಥ್ ತಾವೊಬ್ಬರೇ ಪ್ರಯಾಣ ಮಾಡಲು ಬಳಕೆ ಮಾಡುತ್ತಿದ್ದರು ಅಂತ ಚಾಲಕ ಮಾಹಿತಿ ನೀಡಿದ್ದಾನೆ. ಇದೀಗ ಚಾಲಕನ ಹೇಳಿಕೆ ದಾಖಲು ಮಾಡಿಕೊಂಡಿರುವ ಪೊಲೀಸರು, ಸಕಲೇಶಪುರ ಎಸ್ಟೇಟ್ ಗೆ ಹೋಗೋಣ ಎಂದು ಚಾಲಕನಿಗೆ ಹೇಳಿದ್ರು.
25 ದೋಣಿಗಳನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಈಗಾಗಲೇ ಮುಳುಗು ತಜ್ಞರು ನೀರಿಗಿಳಿದು ಹುಟುಕಾಟ ನಡೆಸಿದ್ದಾರೆ. ಇನ್ನೂ ಈವರೆಗೂ ಸಿದ್ದಾರ್ಥ್ ಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ ಪೊಲೀಸರಿಗೆ ಸಿಗದ ಹಿನ್ನೆಲೆಯಲ್ಲಿ ಇದೀಗ ಅವರ ಶೋಧ ಕಾರ್ಯಕ್ಕಾಗಿ ನೌಕಾ ಪಡೆಯ ನೆರವು ಪಡೆಯಲಿದ್ದಾರೆ. ಶೋಧ ಕಾರ್ಯಾಚರಣೆಗಾಗಿ ಒಂದು ಹಡಗು, ಒಂದು ಹೆಲಿಕಾಫ್ಟರ್, ಹೋವರ್ ಕ್ರಾಫ್ಟ್ ಬಳಸಿಕೊಂಡು ಕಾರ್ಯಾಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಕರಾವಳಿ ಕಾವಲು ಪಡೆ ಕೂಡ ಸಾಥ್ ನೀಡಿವೆ. ಇನ್ನು ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಸಂಸದರು ಕೂಡ ಸಿದ್ದಾರ್ಥ್ ಪತ್ತೆಗಾಗಿ ಕೇಂದ್ರದ ನೆರವು ಕೋರಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಸಿದ್ದಾರ್ಥ್ ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರೋ ಪೊಲೀಸರು ಫೋನ್ ಸಂಭಾಷಣೆಯನ್ನು ಆಧರಿಸಿ ತನಿಖೆ ಮುಂದುವರಿಸಲಿದ್ದಾರೆ.