ಮನಸ್ಸಿನಲ್ಲಿರುವ ಭಯವನ್ನು ತೆಗೆದುಹಾಕಿ, ಧೈರ್ಯ ತುಂಬುವ ಕಾಲಭೈರವ ಶಿವನ ಅಂಶವಾಗಿದ್ದಾನೆ. ಇಂಥ ಕಾಲಭೈರವನಿಗೆ ಕೆಲವೆಡೆ ಮದ್ಯವನ್ನ ನೈವೇದ್ಯವನ್ನಾಗಿ ಇಡುತ್ತಾರಂತೆ. ಹಾಗಾದ್ರೆ ಯಾವ ದೇವಸ್ಥಾನದಲ್ಲಿ ಭೈರವನಿಗೆ ಮದ್ಯವನ್ನ ನೈವೇದ್ಯವನ್ನಾಗಿ ಇಡ್ತಾರೆ..? ಯಾಕೆ ಇಡ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಉಜ್ಜಯಿನಿಯ ಭೈರವಘಡದ ಕಾಲಭೈರವ ಮತ್ತು ಬಟುಕ್ ಭೈರವ ನಾಥ್ ದೇವಾಲಯದಲ್ಲಿ ದೇವರಿಗೆ ಮದ್ಯವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಮೊದಲನೇಯದಾಗಿ ಉಜ್ಜಯಿನಿ ಭೈರವನ ಬಗ್ಗೆ ತಿಳಿಯೋಣ. ಇಲ್ಲಿನ ಮಹಾಕಾಳ ನಗರದಲ್ಲಿ ಭೈರವ ಬಾಬಾನ ದೇವಸ್ಥಾನವಿದೆ. ಇಲ್ಲಿ ಮದ್ಯವೇ ನೈವೇದ್ಯ ಮತ್ತು ಪ್ರಸಾದ. ಇದು 6000 ವರ್ಷಗಳ ಇತಿಹಾಸವನ್ನು ಹೊಂದಿದೆ.
ಇನ್ನು ಈ ದೇವರ ಮುಂದೆ ನೈವೇದ್ಯವಾಗಿ ಮದ್ಯವನ್ನ ಇಟ್ಟರೆ, ಅರ್ಧದಷ್ಟು ಮದ್ಯ ತನ್ನಿಂದತಾನೇ ಇಂಗಿ ಹೋಗುತ್ತದೆಯಂತೆ. ಇದನ್ನ ಪರೀಕ್ಷಿಸಲು ಬ್ರೀಟಿಷರು ಪ್ರಯತ್ನ ಪಟ್ಟಿದ್ದರು ಅಂತಾ ಹೇಳಲಾಗುತ್ತದೆ. ಆದ್ರೆ ಅವರಿಗೆ ಮದ್ಯ ಎಲ್ಲಿ ಹೋಗುತ್ತದೆ ಅಂತಾ ಗೊತ್ತಾಗಲಿಲ್ಲವೆಂದು ಹೇಳಲಾಗುತ್ತದೆ. ಇಲ್ಲಿನ ಭಕ್ತರ ಪ್ರಕಾರ, ತಾವು ತಂದು ಅರ್ಪಿಸಿದ ನೈವೇದ್ಯವನ್ನು ಭೈರವ ಬಾಬಾ ಕುಡಿಯುತ್ತಾರೆಂದು ಹೇಳಲಾಗುತ್ತದೆ.
ಇನ್ನು ದೆಹಲಿಯಲ್ಲಿ ಕೂಡ ಭೈರವನ ದೇವಸ್ಥಾನವಿದೆ. ಈ ಬಟುಕ್ ಭೈರವ್ ಬಾಬಾ ದೇವಸ್ಥಾನವನ್ನು ಮಹಾಭಾರತದ ಭೀಮ ಕಟ್ಟಿದನೆಂದು ಹೇಳಲಾಗುತ್ತದೆ. ಒಮ್ಮೆ ನಾರದರು ಪಾಂಡವರ ಕೋಟೆಯನ್ನು ಕಾಯಲು ಕೋತ್ವಾಲರನ್ನು ಕರೆದರಂತೆ. ಈ ವೇಳೆ ಭೀಮಸೇನ ಕಾಶಿಯ ಭೈರವನನ್ನು ಕೋಟೆ ಕಾಯಲು ಒಪ್ಪಿಸಿ, ಕರೆ ತರುತ್ತಿದ್ದನಂತೆ. ಆದರೆ ಭೈರವ ಒಂದು ಷರತ್ತನ್ನು ವಿಧಿಸಿದ್ದನು. ನೀನು ನನ್ನನ್ನು ಎಲ್ಲಾದರೂ ನಿಲ್ಲಿಸಿದರೆ ನಾನು ಅಲ್ಲೇ ನಿಂತು ಬಿಡುತ್ತೇನೆಂದು ಹೇಳಿದನಂತೆ. ಅದಕ್ಕೆ ಒಪ್ಪಿದ ಭೀಮಸೇನ ಭೈರವನನ್ನು ಕರೆದುಕೊಂಡು ಪಾಂಡವರ ಕೋಟೆ ಕಡೆಗೆ ಹೊರಟನು.
ಇನ್ನೇನು ಕೋಟೆಯ ಬಳಿ ಬರುವ ಹೊತ್ತಿಗೆ, ಭೀಮಸೇನನಿಗೆ ಬಾಯಾರಿಕೆಯಾಗುತ್ತದೆ. ಆಗ ಭೀಮ ಭೈರವನನ್ನು ಅಲ್ಲೇ ಇದ್ದ ಬಾವಿ ಕಟ್ಟೆ ಬಳಿ ನಿಲ್ಲಿಸಿ, ನೀರು ಕುಡಿದು ಬರುವುದಾಗಿ ಹೋಗುತ್ತಾನೆ. ಬಂದು ಭೈರವನನ್ನು ಕರೆದಾಗ, ನಾನು ವಿಧಿಸಿದ ಷರತ್ತಿನಂತೆ, ನೀನು ನನ್ನನ್ನು ಎಲ್ಲಿ ನಿಲ್ಲಿಸಿದ್ದಿಯೋ, ನಾನು ಅಲ್ಲೇ ನಿಂತಿದ್ದೇನೆ. ಇನ್ನು ಶಾಶ್ವತವಾಗಿ ನಾನು ಇಲ್ಲೇ ನೆಲೆ ನಿಲ್ಲುತ್ತೇನೆಂದು ಹೇಳುತ್ತಾನೆ.
ಆಗ ಭೀಮ, ಮತ್ತೆ ಕೋಟೆಯ ಗತಿಯೇನು ಎಂದು ಕೇಳಿದಾಗ, ತನ್ನ ಕೇಶರಾಶಿಯನ್ನು ಕೋಟೆಯ ಸುತ್ತಮುತ್ತ ಪಸರಿಸಿದ ಭೈರವ, ಇನ್ನು ಈ ಕೋಟೆಗೆ ಯಾರೂ ಹಾನಿ ಮಾಡಲಾರರು ಎಂದು ಹೇಳುತ್ತಾನೆ. ಅಂದಿನಿಂದ ಇಂದಿನವರೆಗೂ ಭೈರವ ಆ ಕೋಟೆಯಲ್ಲೇ ಪೂಜಿಸಲ್ಪಡುತ್ತಿದ್ದಾನೆ. ಮಮತ್ತು ಬಟುಕ್ ಬಾಬಾರಿಗೆ ಮದ್ಯವನ್ನೇ ನೈವೇದ್ಯವನ್ನಾಗಿ ನೀಡಲಾಗುತ್ತಿದೆ.