ಅಖಂಡ ಭಾರತದ ರಾಜನಾಗಿ ಮೆರೆದಿದ್ದ ಪ್ರಭು ಶ್ರೀರಾಮ, ಇಂದಿಗೂ ಹಿಂದೂಗಳ ಪಾಲಿಗೆ ರಾಜನೇ. ಶ್ರೀರಾಮ ಭೂಲೋಕದಲ್ಲಿ ಜನ್ಮ ತಾಳಲು ಕಾರಣವೇನು..? ಮಕ್ಕಳಿಲ್ಲದೇ, ಕೊರಗುತ್ತಿದ್ದ ದಶರಥ ರಾಜನಿಗೆ ಅಗ್ನಿ ದೇವ ಕೊಟ್ಟ ಪ್ರಸಾದವೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವಿಂದು ತಿಳಿಯೋಣ.
ಭೂಲೋಕದಲ್ಲಿ ರಾಕ್ಷಸ ರಾವಣನ ಉಪಟಳ ಹೆಚ್ಚಾಗಿತ್ತು. ದೇವತೆಗಳೆಲ್ಲ ಇದರಿಂದ ಭಯಭೀತರಾಗಿದ್ದರು. ಬ್ರಹ್ಮ ವಿಷ್ಣು ಮಹೇಶ್ವರನ ಬಳಿ ಹೋಗಿ, ತಮ್ಮನ್ನು ಕಾಪಾಡುವಂತೆ ಕೇಳಿಕೊಂಡರು. ಆಗ ಬ್ರಹ್ಮ, ಇದಕ್ಕೆ ನಾವೇನೂ ಮಾಡಲಾಗುವುದಿಲ್ಲ. ಭಕ್ತರ ಭಕ್ತಿಗೆ ಬೇಗ ಒಲಿಯುವ ಭೋಲೇನಾಥ, ರಾವಣನಿಗೆ ವರ ನೀಡಿದ್ದಾನೆ. ಯಾವುದೇ ದೇವತೆಗಳು, ಗಂಧರ್ವರು, ಕಿನ್ನರರು, ರಾಕ್ಷಸರು ಯಾರೂ ಕೂಡ ತನ್ನನ್ನು ಸಂಹರಿಸಲು ಸಾಧ್ಯವಾಗದಂತೆ ವರ ನೀಡೆಂದು ಬೇಡಿದ್ದ. ಹಾಗಾಗಿ ಶಿವ ಅವನಿಗೆ ಈ ವರ ನೀಡಿದ್ದಾನೆಂದು ಹೇಳಿದರು.
ಆಗ ಶಿವ, ರಾವಣ, ದೇವತೆಗಳು, ಗಂಧರ್ವರು, ಕಿನ್ನರರು, ರಾಕ್ಷಸರು ಯಾರಿಂದಲೂ ಮರಣ ಬರಬಾರದೆಂದು ವರ ಕೇಳಿದ್ದಾನೆ. ಆದರೆ ಮಾನವ ಮತ್ತು ವಾನರರಿಂದಲ್ಲ. ಮಾನವ ಮತ್ತು ವಾನರರೆಂದರೆ, ರಾವಣ ತುಚ್ಛರೆಂದು ಭಾವಿಸಿದ್ದಾನೆ. ಹೀಗಾಗಿ ಓರ್ವ ಅನನ್ಯ ಶಕ್ತಿಯುಳ್ಳ ಮಾನವ ಮತ್ತು ವಾನರನೇ ರಾವಣನ ಸಂಹಾರ ಮಾಡಬೇಕು ಎಂದು ಶಿವ ಹೇಳುತ್ತಾನೆ.ಆಗ ವಿಷ್ಣು ನನ್ನ ಅಂಶವೇ ಮಾನವನಾಗಿ ಹುಟ್ಟಿ ರಾವಣನ ಸಂಹಾರ ಮಾಡುವುದು ಎನ್ನುತ್ತಾನೆ.
ಇತ್ತ ಮಕ್ಕಳಿಲ್ಲದೇ ಕೊರಗುತ್ತಿದ್ದ ದಶರಥ ಮಹಾರಾಜ, ಮಕ್ಕಳಿಗಾಗಿ ಯಜ್ಞ ಮಾಡಲು ಮುಂದಾದ. ಶೃಂಗಿ ಮುನಿಗಳಿಂದ ಈ ಯಜ್ಞ ನಡೆಯಬೇಕೆಂದು, ದಶರಥ ರಾಜ ಬರೀಗಾಲಿನಲ್ಲಿ, ಶೃಂಗಿ ಮುನಿಗಳ ಬಳಿ ಹೋಗಿ, ಯಜ್ಞ ಮಾಡಬೇಕೆಂದು ಕೇಳಿಕೊಂಡ. ಶೃಂಗಿ ಮುನಿಗಳು ಯಜ್ಞ ಮಾಡಿದ ಬಳಿಕ, ಅಗ್ನಿ ಕುಂಡದಿಂದ ಎದ್ದು ಬಂದ ಅಗ್ನಿ ದೇವ, ದಶರಥ ರಾಜನಿಗೆ ಪಾಯಸವನ್ನು ಪ್ರಸಾದ ರೂಪವನ್ನಾಗಿ ಕೊಟ್ಟ.
ಅದನ್ನು ದಶರಥ ಮಹಾರಾಜನ ಪತ್ನಿಯರು ಸ್ವೀಕರಿಸಿದರು. ಕೆಲ ದಿನಗಳ ಬಳಿಕ, ಮೂವರು ಗರ್ಭ ಧರಿಸಿದರು. ಪುನರ್ವಸು ನಕ್ಷತ್ರದ ದಿನ ರಾಮ ಜನ್ಮ ತಾಳಿದ. ನಂತರ ಲಕ್ಷ್ಮಣ, ಭರತ, ಶತ್ರುಘ್ನರ ಜನ್ಮವಾಯಿತು.