ಓರ್ವ ವಿವಾಹಿತ ಮಹಿಳೆ ಧರಿಸುವ ಐದು ಆಭರಣಗಳಲ್ಲಿ ತಾಳಿ ಕೂಡ ಒಂದು. ತಾಳಿ, ಹಣೆ ಬೊಟ್ಟು, ಕಾಲುಂಗುರ, ಮುಗೂತಿ, ಬಳೆ. ಇವಿಷ್ಟು ಓರ್ವ ವಿವಾಹಿತ ಮಹಿಳೆ ಹಾಕಬೇಕಾದ ಆಭರಣ. ಹಾಗಾಗಿಯೇ ಆಕೆಯನ್ನು ಮುತ್ತೈದೆ ಎಂದು ಕರೆಯಲಾಗತ್ತೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಮಹತ್ವವಿದೆ. ಅದರಲ್ಲಿ ಇಂದು ನಾವು ತಾಳಿ ಧರಿಸುವುದರಿಂದ ಏನು ಉಪಯೋಗ..? ಮುತ್ತೈದೆ ಯಾಕೆ ತಾಳಿ ಧರಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಗುರು ಶಂಕರಾಚಾರ್ಯರ ಪುಸ್ತಕವಾದ ಸೌಂದರ್ಯ ಲಹರಿಯಲ್ಲಿ ತಾಳಿಯ ಮಹತ್ವದ ಬಗ್ಗೆ ಹೇಳಲಾಗಿದೆ. ತಾಳಿಯಲ್ಲಿ ಬರು ಚಿನ್ನ ಮತ್ತು ಕಪ್ಪುಮಣಿಯನ್ನು ಶಿವ ಪಾರ್ವತಿಗೆ ಹೋಲಿಸಲಾಗಿದೆ. ಕರಿಮಣಿ ಎಂದರೆ ಶಿವ. ಅಂತೆಯೇ ಚಿನ್ನ ಅಥವಾ ಅರಿಷಿನ ಎಂದರೆ ಪಾರ್ವತಿ ಎಂದು ಹೇಳಲಾಗಿದೆ. ಹಿಂದೂ ಧರ್ಮದ ಕಥೆಗಳ ಪ್ರಕಾರ, ಕೃಷ್ಣ ರಾಧೆ, ರಾಮ ಸೀತೆ ಸಫಲ ವೈವಾಹಿಕ ಜೀವನವನ್ನು ನಡೆಸಿಲ್ಲ. ಆದ್ರೆ ಶಿವ ಪಾರ್ವತಿ ಮಾತ್ರ ಸಫಲ ವೈವಾಹಿಕ ಜೀವನವನ್ನು ನಡೆಸಿದ್ದಾರೆ. ಹಾಗಾಗಿ, ಇವರಿಬ್ಬರ ಆಶೀರ್ವಾದವಾಗಿ, ತಾಳಿಯನ್ನ ಧರಿಸಲಾಗತ್ತೆ.
ಪತ್ನಿ ತಾಳಿ ಧರಿಸುವುದರಿಂದ, ಪತಿಯ ಆಯುಷ್ಯ ಗಟ್ಟಿಯಾಗಿರುತ್ತದೆ. ಆತನಿಗೆ ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಅನ್ನುವ ನಂಬಿಕೆ ಇದೆ. ವಿವಾಹದ ಸಮಯದಲ್ಲಿ ಮಂತ್ರ ಹೇಳಿ, ಮಂಗಲಸೂತ್ರ ಕಟ್ಟುವುದರಿಂದ ಅದರಲ್ಲಿ ದೈವಿಕ ಶಕ್ತಿ ಇರುತ್ತದೆ ಅನ್ನೋ ನಂಬಿಕೆ, ಹಿಂದೂ ಧರ್ಮದಲ್ಲಿದೆ. ಅಲ್ಲದೇ ತಾಳಿಯಲ್ಲಿ ಪಂಚ ತತ್ವಗಳಿದ್ದು, ಪತಿ ಪತ್ನಿ ಸಂಬಂಧ ಗಟ್ಟಿಗೊಳಿಸುವುದರಲ್ಲಿ ಸಹಕಾರಿಯಾಗಿದೆ ಅನ್ನೋ ನಂಬಿಕೆಯೂ ಇದೆ.
ಇಷ್ಟೇ ಅಲ್ಲದೇ, ತಾಳಿ ಅನ್ನೋದು ವಿವಾಹಿತ ಮಹಿಳೆಯ ರಕ್ಷಾ ಕವಚವಾಗಿದೆ. ಇದು ಆಕೆಯ ಕುತ್ತಿಗೆಯಲ್ಲಿ ಇರುವ ತನಕ ದುಷ್ಟ ಶಕ್ತಿಗಳು, ದುಷ್ಟರ ಕಣ್ಣು ಆಕೆಯ ಮೇಲೆ ಬೀಳುವುದಿಲ್ಲ. ಇದರಿಂದ ಆಕೆ ಸುರಕ್ಷಿತವಾಗಿರುತ್ತಾಳೆ. ಹಾಗಾಗಿ ವಿವಾಹಿತ ಹೆಣ್ಣು ತಾಳಿ ಧರಿಸಲೇಬೇಕು ಅನ್ನುತ್ತೆ ನಮ್ಮ ಹಿಂದೂ ಧರ್ಮ. ಆದರೆ ಇಂದು ಹಲವು ಹೆಣ್ಣು ಮಕ್ಕಳು ಫ್ಯಾಷನ್ ಹೆಸರಿನಲ್ಲಿ ಮಂಗಲಸೂತ್ರ, ಬೊಟ್ಟು, ಕಾಲುಂಗುರವನ್ನೆಲ್ಲ ಧರಿಸುವುದನ್ನು ಬಿಟ್ಟಿದ್ದಾರೆ ಅನ್ನೋದೇ, ವಿಪರ್ಯಾಸದ ವಿಷಯ.