ನಮ್ಮ ದೇಶದಲ್ಲಿ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ಜೈಲು ಶಿಕ್ಷೆ, ಮರಣ ದಂಡನೆ ಬಿಟ್ರೆ ಬೇರೆನೂ ಶಿಕ್ಷೆ ಕೊಡುವುದಿಲ್ಲ. ಆದ್ರೆ ಇನ್ನೂ ಕೆಲವು ದೇಶಗಳಲ್ಲಿ ಎಂಥೆಂಥ ಕ್ರೂರ ಶಿಕ್ಷೆ ಕೊಡ್ತಾರೆ ಅಂದ್ರೆ, ಬೇರೆಯವರು ಆ ಶಿಕ್ಷೆ ನೋಡಿ, ತಪ್ಪು ಮಾಡೋಕ್ಕೆ ನೂರು ಬಾರಿ ಯೋಚನೆ ಮಾಡ್ತಾರೆ. ಅಷ್ಟು ಭಯಂಕರವಾಗಿರುತ್ತದೆ ಆ ಶಿಕ್ಷೆ. ಹಾಗಾದ್ರೆ ಯಾವ ದೇಶದಲ್ಲಿ, ಯಾವ ತಪ್ಪಿಗೆ, ಯಾವ ಶಿಕ್ಷೆ ನೀಡುತ್ತಾರೆಂದು ತಿಳಿಯೋಣ ಬನ್ನಿ..
ದುಬೈ: ಪ್ರಪಂಚದಲ್ಲಿರುವ ಸುರಕ್ಷಿತ ದೇಶಗಳಲ್ಲಿ ದುಬೈ ಕೂಡ ಒಂದು. ಯಾಕಂದ್ರೆ ಇಲ್ಲಿ ಅಂಥ ಕಾನೂನಿಗೆ, ತಪ್ಪಿಗೆ ಅಂಥ ಶಿಕ್ಷೆಯೂ ಇದೆ. ಸಿಕ್ಕ ಸಿಕ್ಕಲ್ಲಿ, ಮದ್ಯಪಾನ ಮಾಡುವುದು, ಜೋರಾಗಿ ಮ್ಯೂಸಿಕ್ ಹಾಕಿ ಕುಣಿಯುವುದು, ಸಲಿಂಗ ಕಾಮ ಇತ್ಯಾದಿಯನ್ನ ಇಲ್ಲಿ ಬ್ಯಾನ್ ಮಾಡಲಾಗಿದೆ. ಅಲ್ಲದೇ ಮದುವೆಯಾಗದ ಗಂಡು ಹೆಣ್ಣು ಪಬ್ಲಿಕ್ ನಲ್ಲಿ ಕೈ ಕೈ ಹಿಡಿದು ತಿರುಗುವ ಹಾಗಿಲ್ಲ. ಹೆಣ್ಣು ಮಕ್ಕಳನ್ನ ಚುಡಾಯಿಸಿದರೆ, ಶುಕ್ರವಾರದ ದಿನ ಕಠಿಣ ಶಿಕ್ಷೆ ನೀಡಲಾಗತ್ತೆ. ಇನ್ನು ದುಬೈನಲ್ಲಿ ಸಿಕ್ಕಸಿಕ್ಕಲ್ಲಿ ಕಸ ಹಾಕಿದ್ರೆ, ನಿಮ್ಮನ್ನ ಜೈಲಿಗೆ ಹಾಕಲಾಗತ್ತೆ.
ಚೀನಾ: ಈ ದೇಶದಲ್ಲಿ ಅತ್ಯಂತ ಕಠಿಣ ಶಿಕ್ಷೆಯನ್ನ ನೀಡಲಾಗತ್ತೆ. ಇಲ್ಲಿನ ಪತ್ರಕರ್ತ ಸರ್ಕಾರದ ವಿರುದ್ಧ ಲೇಖನ ಬರೆದರೆ, ಆತ ಬದುಕುವುದೇ ಡೌಟ್ ಎನ್ನಲಾಗಿದೆ. ಇದೇ ರೀತಿ ಸರ್ಕಾರದ ವಿರುದ್ಧ ಮಾತನಾಡಿದವರನ್ನ, ಬರೆದ ಸಾವಿರಾರು ಜನರನ್ನು ಕೆಲ ದಿನಗಳಲ್ಲೇ ಮಾಯವಾಗಿದ್ದು, ಮತ್ಯಾವತ್ತೂ ನೋಡೋಕ್ಕೆ ಸಿಗಲಿಲ್ಲ ಅನ್ನೋದು ಇಲ್ಲಿನವರ ಮಾತು. ಇನ್ನು ಚೀನಾದಲ್ಲಿ ರೆಡಿಯಾದ ಆ್ಯಪ್ ಅಷ್ಟೇ ಬಳಸಬೇಕು. ಬೇರೆ ದೇಶದ ಆ್ಯಪ್ ಬಳಸುವ ಅವಕಾಶ ಇವರಿಗಿಲ್ಲ.
ಸಿಂಗಪುರ: ಈ ದೇಶ ಬೆಂಗಳೂರಿಗಿಂತ ಚಿಕ್ಕದಾಗಿದೆ. ಆದ್ರೆ ಇಲ್ಲಿ ಸ್ವಚ್ಛತೆಗೆ ಹೆಚ್ಚು ಬೆಲೆ ಕೊಡಲಾಗಿದೆ. ಚ್ಯೂಂಗಮ್ ಬ್ಯಾನ್ ಮಾಡಲಾಗಿದೆ. ಕಂಡ ಕಂಡಲ್ಲಿ ಕಸ ಬಿಸಾಕುವುದು, ತಂಬಾಕು ತಿನ್ನುವುದು, ಧೂಮಪಾನ ಮಾಡುವುದನ್ನ ಬ್ಯಾನ್ ಮಾಡಲಾಗಿದೆ. ಈ ದೇಶದಲ್ಲಿ ನೀವು ಯಾವುದಾದರೂ ಸಾರ್ವಜನಿಕ ಸ್ಥಳಕ್ಕೆ ಹೋದ್ರೆ, ಅಲ್ಲಿ ಟಾಯ್ಲೆಟ್ ಫ್ಲಶ್ ಮಾಡದೇ ಮರೆತು ಬಂದ್ರೆ, ನಿಮ್ಮನ್ನು ಜೈಲಿಗೆ ಹಾಕಲಾಗತ್ತೆ.
ಸೌದಿ ಅರಬ್: ಕಠಿಣದಲ್ಲೇ ಅತ್ಯಂತ ಕಠಿಣ ಕಾನೂನಿರುವ ದೇಶ ಅಂದ್ರೆ ಸೌದಿ ಅರೇಬಿಯಾ. ಇಲ್ಲಿ ಜನ ಪ್ರವಾಸಕ್ಕೆ ಹೋಗೋಕ್ಕೆ ಹೆದರುತ್ತಾರೆ. ಯಾಕಂದ್ರೆ ಅಷ್ಟು ಕಠಿಣ ಶಿಕ್ಷೆ ನೀಡಲಾಗತ್ತೆ ಇಲ್ಲಿ. ಇನ್ನು ಇಲ್ಲಿನ ಜನ ಎಷ್ಟು ಸೇಫ್ ಆಗಿದ್ದಾರೆ ಅಂದ್ರೆ, ಇಲ್ಲಿ ಯಾವುದೇ ಅಂಗಡಿಗೂ ಬೀಗ ಹಾಕುವುದಿಲ್ಲ. ಯಾಕಂದ್ರೆ ಇಲ್ಲಿ ಯಾರಾದ್ರೂ ಕಳ್ಳತನ ಮಾಡಿ ಸಿಕ್ಕಿಬಿದ್ರೆ, ಅವನ ಕೈ ಕತ್ತರಿಸಲಾಗತ್ತೆ. ಪ್ರೇಮಿಗಳು ಸಿಕ್ಕಿಬಿದ್ರೆ, ಅವರನ್ನ ರೋಡಿನಲ್ಲಿ ನಿಲ್ಲಿಸಿ, ಕಲ್ಲಿನಿಂದ ಹೊಡೆಯಲಾಗತ್ತೆ. ಇಲ್ಲಿ ಹೆಣ್ಣು ಮಕ್ಕಳು ತಮಗೆ ಮನಸ್ಸಿಗೆ ಬಂದ ಹಾಗೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ.