ಶಿವನ 19 ಅವತಾರಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದೂ ಕೂಡ ಒಂದು ಅವತಾರದ ಬಗ್ಗೆ ವಿವರಣೆ ನೀಡಲಿದ್ದೇವೆ. ಆ ಅವತಾರವೇ ಬಟುಕ ಅವತಾರ. ಹಾಗಾದ್ರೆ ಶಿವ ಬಟುಕ ಅವತಾರ ತಾಳಿದ್ದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬಟುಕ ಅವತಾರ ಅಂದ್ರೆ ಪುಟ್ಟ ಮಗುವಿನ ಅವತಾರ. ಕಾಳಿ ಮಾತೆಯನ್ನು ಶಾಂತಗೊಳಿಸುವುದಕ್ಕಾಗಿ ಶಿವ ಬಟುಕ ಅವತಾರವನ್ನು ತಾಳಿದ. ಪಾರ್ವತಿ ದೇವಿ ಕ್ರೋಧದಿಂದ ಕಾಳಿಯ ರೂಪ ಧಾರಣೆ ಮಾಡುತ್ತಾಳೆ. ಇದಕ್ಕೆ ಕಾರಣವೇನೆಂದರೆ ಪಾರ್ವತಿಯ ಮಗಳು ಅಶೋಕ ಸುಂದರಿ, ಹೋನ್ ಎಂಬ ರಾಕ್ಷಸನಿಗೆ, ಭವಿಷ್ಯದಲ್ಲಿ ನೀನು ನನ್ನ ಪತಿಯಿಂದಲೇ ಮೃತನಾಗು ಎಂದು ಶಾಪ ನೀಡುತ್ತಾಳೆ. ಹಾಗಾಗಿ ಹೋನ ರಾಕ್ಷಸ ಅಶೋಕ ಸುಂದರಿ ಮತ್ತು ಆಕೆಯ ಪತಿಯಾಗಲಿದ್ದ ನಹೋಶನನ್ನು ಬಾಲ್ಯದಲ್ಲಿಯೇ ಕೊಲ್ಲಬೇಕೆಂದು ನಿರ್ಧರಿಸಿದ.
ಹೀಗಾಗಿ ತಾಯಿ ಪಾರ್ವತಿಗೆ ಕೋಪ ಬಂದು ಆಕೆ ಕಾಳಿಯ ರೂಪ ಧಾರಣೆ ಮಾಡಿದಳು. ದೇವತೆಗಳೆಲ್ಲರೂ ಸೇರಿ ಕಾಳಿ ದೇವಿಯನ್ನ ಸಮಾಧಾನ ಮಾಡಲು ಯತ್ನಿಸಿದರು. ಆದರೆ ಆಕೆ ಸಮಾಧಾನವಾಗಲಿಲ್ಲ. ಆಕೆಯನ್ನು ಸಮಾಧಾನ ಮಾಡಲು ಬಂದ ಹಲವರು ಆಕೆಯ ಕೋಪಕ್ಕೆ ಬಲಿಯಾಗಿದ್ದರು. ಹಾಗಾಗಿ ನಾರದರು ವಿಷ್ಣುವಿನ ಬಳಿ ಹೋಗಿ ಇದಕ್ಕೆ ಪರಿಹಾರ ಕೇಳಿದರು. ಆಗ ವಿಷ್ಣು, ಈಕೆಯ ಕ್ರೋಧವನ್ನು ಶಿವನೇ ತಣ್ಣಗಾಗಿಸಬೇಕು. ಅದಕ್ಕಾಗಿ ಶಿವ ಬಟುಕ ರೂಪ ತಾಳಬೇಕೆಂದು ಹೇಳುತ್ತಾನೆ.
ನಾರರದರು ಶಿವನಿಗೆ ಈ ವಿಷಯ ತಿಳಿಸುತ್ತಾರೆ. ಆಗ ಶಿವ ಪುಟ್ಟ ಮಗುವಿನ ರೂಪ ಧಾರಣೆ ಮಾಡಿ, ಕಾಳಿಯ ಎದುರು ಅಳುತ್ತ ಬರುತ್ತಾನೆ. ಆ ಮಗುವಿನ ಅಳು ಕಂಡ ಕಾಳಿಗೆ ಮರುಕ ಉಂಟಾಗುತ್ತದೆ. ಆ ಕ್ಷಣ ಆಕೆ ಕ್ರೋಧವನ್ನು ಬಿಟ್ಟು, ಮಗುವನ್ನು ಎತ್ತಿ ಸಮಾಧಾನ ಪಡಿಸಲು ಪ್ರಯತ್ನಿಸುತ್ತಾಳೆ. ಆದರೂ ಮಗು ಸುಮ್ಮನಾಗುವುದಿಲ್ಲ. ನಂತರ ಕಾಳಿ, ಪಾರ್ವತಿಯ ರೂಪಕ್ಕೆ ಬರುತ್ತಾಳೆ. ಆಗ ಮಗು ನಗುತ್ತದೆ. ನಂತರ ಶಿವ ತನ್ನ ನಿಜ ರೂಪಕ್ಕೆ ಬರುತ್ತಾನೆ.