ಚಾಯ್ ವಾಲಾ ಅಂದತಕ್ಷಣ ಭಾರತೀಯರಿಗೆ ನೆನಪು ಬರೋದು ನಮ್ಮ ಪ್ರಧಾನಿ ಮೋದಿಜಿ. ಚಾ ಮಾರುತ್ತ, ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡು, ರಾಜಕಾರಣಕ್ಕೆ ಬಂದು, ಸದ್ಯ ಪ್ರಧಾನಿಯಾಗಿರುವ ಮೋದಿಜಿಯ ತವರೂರಾದ ಗುಜರಾತ್‌ನಲ್ಲೇ, ಇನ್ನೋರ್ವ ಫೇಮಸ್ ಚಾಯ್‌ವಾಲಾ ಇದ್ದಾನೆ. ಅವನೇ ಎಂಬಿಎ ಚಾಯ್‌ವಾಲಾ. ಯಾರು ಈ ಚಾಯ್ ವಾಲಾ, ಎಂಬಿಎ ಫುಲ್ ಫಾರ್ಮ್ ಏನು..? ಇವ್ನೇನಾದ್ರೂ ಎಂಬಿಎ ಮಾಡಿ, ಕೆಲಸ ಸಿಗದೇ, ಚಾ ಅಂಗಡಿ ಇಟ್ಟವನಾ..? ಹೀಗೆ ಇತ್ಯಾದಿ ಪ್ರಶ್ನೆಗಳು ನಿಮ್ಮ ತಲೆಯಲ್ಲಿದ್ರೆ, ಆ ಬಗ್ಗೆ ಇನ್ನೂ ಇಂಟ್ರೆಸ್ಟಿಂಗ್ ಕಹಾನಿಯನ್ನ ಈಗ ಹೇಳ್ತೀವಿ ಕೇಳಿ.
ಪ್ರಫೂಲ್ ಬಿಲ್ಲೋರೆ. ಈತ ಅಹಮದಾಬಾದ್‌ನ ನಿವಾಸಿ. ಈತ ಫಾರಿನ್‌ನಲ್ಲಿ ಎಂಬಿಎ ಮಾಡ್ಬೇಕು ಅಂತಾ, ಒಳ್ಳೆ ಅಂಕ ಗಳಿಸಿ ಪಾಸ್ ಆಗಿದ್ದ. ಆದ್ರೆ ಇವನಿಗೆ ಫಾರಿನ್ ಕಾಲೇಜಿನಲ್ಲಿ ಸೀಟ್ ಸಿಗಲಿಲ್ಲ. ಅಪ್ಪ ಅಮ್ಮ ಭಾರತದಲ್ಲೇ ಎಂಬಿಎ ಮಾಡೆಂದು ಸಲಹೆ ನೀಡಿದರು. ಆದ್ರೆ ಪ್ರಫುಲ್‌ಗೆ ಭಾರತದಲ್ಲಿ ಕಲಿಯೋದು ಒಂಚೂರು ಇಷ್ಟವಿರಲಿಲ್ಲ. ಎರಡು ವರ್ಷ ಕಷ್ಟಪಟ್ಟು ಓದಿ ನಾಲ್ಕಾರು ಪರೀಕ್ಷೆ ಬರೆದರೂ, ಸೀಟ್ ಸಿಗಲಿಲ್ಲ.
ಆಗ ಪ್ರಫುಲ್ ಕಡಿಮೆ ಖರ್ಚಿನಲ್ಲಿ ದೇಶ ಸುತ್ತೋದು ಹೇಗೆ ಅಂತಾ ಕಲಿತ. ಟ್ರಕ್, ಲಾರಿಗಳಲ್ಲಿ ದೇಶ ತಿರುಗಿದ. ಹೀಗೆ ಎಷ್ಟು ದಿನ ದೇಶ ಸುತ್ತೋದು ಅಂತಾ ಯೋಚಿಸಿದ ಪ್ರಫುಲ್, ಮೆಕ್ ಡೋನಾಲ್ಸ್‌ನಲ್ಲಿ ಕೆಲಸ ಮಾಡಬೇಕೆಂದು ಯೋಚಿಸಿದ. ನಾಲ್ಕು ಮೆಕ್‌ಡಿಗೆ ಹೋದ್ರೂ, ಪ್ರಫುಲ್‌ಗೆ ಕೆಲಸ ಸಿಗಲಿಲ್ಲ. ಯಾಕಂದ್ರೆ ಹೋದಲ್ಲೆಲ್ಲ ಪ್ರಫುಲ್ ತಾನು ಎಜುಕೇಟೆಡ್ ಎಂದು ಹೇಳುತ್ತಿದ್ದ. ಅಲ್ಲದೇ, ಮಾತುಗಾರಿಕೆ ಇದ್ದ ಕಾರಣ, ಹೊಟ್ಟೆಕಿಚ್ಚಿನಿಂದ ಜನ ಇವನಿಗೆ ಕೆಲಸ ಕೊಡುತ್ತಿರಲಿಲ್ಲ. ಆಗ ಯೋಚಿಸಿದ ಪ್ರಫುಲ್ 5ನೇ ಮೆಕ್‌ಡಿಗೆ ಹೋಗಿ, ನಾನು 10ನೇ ಕ್ಲಾಸ್ ಫೇಲ್ ಆಗಿದ್ದೇನೆ. ನನಗೆ ಇಲ್ಲಿ ಯಾವ ಕೆಲಸ ಕೊಟ್ರೂ ಮಾಡ್ತೇನೆ ಎಂದು ಕೆಲಸಕ್ಕೆ ಸೇರಿದ.
ಹೀಗೆ ಕೆಲಸ ಮಾಡುತ್ತ, ನಾನು ಒಂದು ಹೊಟೇಲ್ ಯಾಕಿಡಬಾರದು ಅನ್ನೋ ಯೋಚನೆ ಪ್ರಫುಲ್‌ಗೆ ಬಂತು. ಆಗ ಪ್ರಫುಲ್ ತಲೆಗೆ ಬಂದಿದ್ದೇ ಚಾಯ್ ಅಂಗಡಿ. ಅಹಮದಾಬಾದ್‌ನಲ್ಲಿ ಒಂದು ಸಣ್ಣ ಜಾಗದಲ್ಲಿ ಟೇಬಲ್ ಇರಿಸಿದ. ಅದಕ್ಕೆ ಮಿಸ್ಟರ್ ಬಿಲ್ಲೋರೆ ಟೀ ಶಾಪ್ ಎಂದು ಹೆಸರಿಟ್ಟ. ಜನ ಆ ಹೆಸರನ್ನ ಬೇರೆ ಬೇರೆ ರೀತಿಯಲ್ಲಿ ಕರಿಯೋಕ್ಕೆ ಶುರು ಮಾಡಿದರು. ಆಗ ಬೇಸರಗೊಂಡ ಪ್ರಫುಲ್, ಟೀ ಅಂಗಡಿಗೆ ಮಿಸ್ಟರ್ ಬಿಲ್ಲೋರೆ ಅಹಮದಾಬಾದ್ ಎಂದು ಹೆಸರು ಬದಲಾಯಿಸಿ, ಅದನ್ನೇ ಶಾರ್ಟ್ ಫಾರ್ಮ್ ಆಗಿ, ಎಂಬಿಎ ಚಾಯ್ ವಾಲಾ ಅಂತಾ ಹೆಸರಿಟ್ಟ.
ಒಂದು ಟೇಬಲ್ ಇಟ್ಟು ಸಣ್ಣ ಅಂಗಡಿ ಶುರು ಮಾಡಿದ್ದ ಪ್ರಫುಲ್ ಈಗ ದೊಡ್ಡ ಟೀ ಅಂಗಡಿ ಮಾಲೀಕ. ಕೋಟ್ಯಾಧೀಶ್ವರ. ಈ ಜರ್ನಿ ಅಷ್ಟೇನು ಸುಲಭವಾಗಿರಲಿಲ್ಲ. ಅಪ್ಪ ಅಮ್ಮನಿಗೆ ಸುಳ್ಳು ಹೇಳಬೇಕಾಯಿತು. ಅವರಿಂದ ಬೈಯ್ಯಿಸಿಕೊಂಡಿದ್ದಾನೆ. ಅಲ್ಲದೇ, ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ದುಡಿದಿದ್ದಕ್ಕಾಗಿ ಹೀಗೆ ಶ್ರೀಮಂತನಾಗಿದ್ದಾನೆ. ಪ್ರಫುಲ್ ಹೇಳೋದೇನಂದ್ರೆ, ಇಂದಿನ ಯುವಕರು ಮೋಟಿವೇಶನ್ ವೀಡಿಯೋಗಳನ್ನು ನೋಡಿ, ಎರಡು ಮೂರು ದಿನ ಕೆಲಸ ಮಾಡಿ, ಮೂರನೇ ದಿನಕ್ಕೆ ತಮ್ಮ ಗುರಿಯನ್ನ ಮರೆತು ಬಿಡ್ತಾರೆ. ಹಾಗಾಗಿ ನಿಮ್ಮ ಗುರಿ ತಲುಪುವವರೆಗೂ ಕಷ್ಟಪಟ್ಟು ಕೆಲಸ ಮಾಡಿ, ಅಂತಾ ಪ್ರಫುಲ್ ಹೇಳ್ತಾರೆ.