Wednesday, March 26, 2025

Latest Posts

ಅಡಿಪಾಯದಲ್ಲೇ ಅಭದ್ರತೆ, ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಖಾಲಿ ಖಾಲಿ!

- Advertisement -

News: ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮುಖ್ಯವಾಗಿರುತ್ತದೆ. ಅದರಲ್ಲೂ ಪ್ರಾಥಮಿಕ ಶಿಕ್ಷಣವೆಂದರೆ ಅತ್ಯಂತ ಮಹತ್ವದ ಹಾಗೂ ಭವಿಷ್ಯಕ್ಕೆ ಭದ್ರ ಬುನಾದಿಯಿದ್ದಂತೆ. ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ತಳಪಾಯವೆಂದೇ ಪರಿಗಣಿಸಲಾಗುವ ಈ ಶಿಕ್ಷಣವನ್ನು ನೀಡಲು ಶಿಕ್ಷಕರೇ ಇಲ್ಲದಿರುವ ವಿಚಾರ ಬಯಲಾಗಿದೆ. ಅಲ್ಲದೆ ಇಂತಹ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಹೆಸರು ಮಾಡಲು ಮುಖ್ಯವಾಗಿ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಚುರುಕಾಗಿರಬೇಕಾಗುತ್ತದೆ.

ಆದರೆ ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳಲ್ಲಿ ಈ ಎರಡೂ ವಿಷಯಗಳಿಗೆ ಸಂಬಂಧಿಸಿದ ಶಿಕ್ಷಕರ ನೇಮಕಾತಿಯೇ ನಡೆಯದಿರುವುದು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಿರಾಸಕ್ತಿ ಎದ್ದು ಕಾಣುತ್ತಿದ್ದು, ಇದರಿಂದ ವಿಜ್ಞಾನ ಹಾಗೂ ಗಣಿತ ವಿಷಯಗಳ ಬೋಧನೆಗೆ ರಾಜ್ಯದಲ್ಲಿ ಬರೊಬ್ಬರಿ 19,072 ಶಿಕ್ಷಕರ ಕೊರತೆ ಇದೆ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ. ಇನ್ನೂ ರಾಜ್ಯದ ಶೈಕ್ಷಣಿಕ ಪ್ರಗತಿಯ ಕುರಿತು ಎಎಸ್‌ಇಆರ್‌ ವರದಿ ಬಿಡುಗಡೆಯಾಗಿದ್ದು, ಇದರ ಪ್ರಕಾರ ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಗಣಿತ ವಿಷಯದಲ್ಲಿ ಕೌಶಲ್ಯ ಹಾಗೂ ಜ್ಞಾನವನ್ನು ಮಕ್ಕಳ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ ಪ್ರಮುಖವಾಗಿ ಸೂಕ್ತವಾಗಿ ಅಧ್ಯಾಪಕರ ಮಾರ್ಗದರ್ಶನವೂ ವಿದ್ಯಾರ್ಥಿಗಳಿಗೆ ದೊರೆಯದೇ ಇರುವುದು ಈ ಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ.

ಈಗಾಗಲೇ ರಾಜ್ಯದಲ್ಲಿ ಖಾಲಿ ಇರುವ ವಿಜ್ಞಾನ ಹಾಗೂ ಗಣಿತ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಪೋಷಕರು ಹಾಗೂ ಶಿಕ್ಷಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಆದರೂ ಸಹ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿರುವುದೇ ಇದಕ್ಕೆ ಮುಖ್ಯ ತೊಡಕಾಗಿದೆ. ಅಲ್ಲದೆ ಮುಂಬರುವ ಶೈಕ್ಷಣಿಕ ವರ್ಷದಲ್ಲಾದರೂ ಕೂಡಲೇ ಶಿಕ್ಷಕರ ನೇಮಕಕ್ಕೆ ಸರ್ಕಾರ ಮುಂದಾಗಬೇಕಿದೆ.

ಒಟ್ಟು ಎಷ್ಟು ಶಿಕ್ಷಕರ ಕೊರತೆ..?

ಇನ್ನೂ ಶಿಕ್ಷಕರ ಕೊರತೆ ಹಾಗೂ ಗುಣಮಟ್ಟದ ಕುರಿತು ಬಿಡುಗಡೆಯಾಗಿರುವ ವರದಿಯಲ್ಲಿ ಮುಖ್ಯವಾಗಿ 1 ರಿಂದ 5ನೇ ತರಗತಿಗಳಿಗೆ ಗಣಿತ ಬೋಧಿಸಲು 8,452 ಶಿಕ್ಷಕರ ಕೊರತೆಯಾಗಿದೆ. ಅಲ್ಲದೆ 6 ರಿಂದ 8ನೇ ತರಗತಿಗಳಿಗೆ 7,807 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆಯಿದೆ. ಇನ್ನೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ್ದಂತೆ 1,098 ಟೀಚರ್ಸ್‌ ಪೋಸ್ಟ್‌ ಖಾಲಿ ಇವೆ. ಅಂತೆಯೇ ಪ್ರೌಢಶಾಲಾ ವಿಭಾಗದಲ್ಲೂ ವಿಜ್ಞಾನಕ್ಕೆ 1,223 ಹಾಗೂ ಗಣಿತಕ್ಕೆ 492 ಶಿಕ್ಷಕರ ಹುದ್ದೆಗಳ ಕೊರತೆ ಇವೆ. ಹೀಗಾಗಿ ರಾಜ್ಯಾದ್ಯಂತ ಒಟ್ಟು 19,072 ಗಣಿತ ಹಾಗೂ ವಿಜ್ಞಾನ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿದ್ದು, ಇವುಗಳ ಭರ್ತಿಗೆ ರಾಜ್ಯ ಸರ್ಕಾರ ಮನಸ್ಸು ಮಾಡಬೇಕಿದೆ.

ಅಲ್ಲದೆ ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳಲ್ಲಿ 1,45,398 ಶಿಕ್ಷಕರ ಹುದ್ದೆಗಳಷ್ಟೇ ಭರ್ತಿಯಾಗಿವೆ. ಅಂದಹಾಗೆ ಬರೊಬ್ಬರಿ 50,067 ಪೋಸ್ಟ್‌ಗಳು ಬಾಕಿ ಉಳಿದಿವೆ. ಇನ್ನೂ ರಾಜ್ಯದ ಪ್ರೌಢ ಶಾಲಾ ವಿಭಾಗದಲ್ಲಿ32,610 ಹುದ್ದೆಗಳಿಗೆ ನೇಮಕವಾಗಿದೆ. 11, 796 ಹುದ್ದೆಗಳು ಖಾಲಿ ಇವೆ. ಇದರಿಂದ ರಾಜ್ಯದಲ್ಲಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಮಕ್ಕಳ ಪಾಲಿಗೆ ಆಧಾರವಾಗಿದ್ದಾರೆ!..

ಯಾವ ಜಿಲ್ಲೆಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಿದೆ..?

ಇನ್ನೂ ಪ್ರಾಥಮಿಕ ಶಾಲೆಗಳಿಗೆ ಈ ಹಿಂದೆ 2021-22ನೇ ಸಾಲಿನಲ್ಲಿ ಖಾಲಿ ಇದ್ದ ಪದವೀಧರ ಶಿಕ್ಷಕರ ಹುದ್ದೆಗೆ 15 ಸಾವಿರ ಜನರ ನೇಮಕದ ಕಾರ್ಯವನ್ನು ಸರ್ಕಾರ ನಡೆಸಿತ್ತು. ಅಂದಹಾಗೆ ರಾಜ್ಯದ ಯಾವ್ಯಾವ ಭಾಗದಲ್ಲಿ ಈ ಗಣಿತ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ ಎನ್ನುವುದನ್ನು ನಾವು ನೋಡುವುದಾದರೆ. ರಾಯಚೂರು ಜಿಲ್ಲೆಯಲ್ಲಿ 450, ಬೆಳಗಾವಿ-ಚಿಕ್ಕೋಡಿ 434 ಹಾಗೂ ಮೈಸೂರು ಜಿಲ್ಲೆಯಲ್ಲಿ 394 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿವೆ. ಇನ್ನೂ ಇದೇ ಪ್ರದೇಶಗಳಲ್ಲಿ ರಾಯಚೂರು 129, ಕಲಬುರಗಿ 98 ಹಾಗೂ ಯಾದಗಿರಿ 92 ಶಿಕ್ಷಕರು ಇದ್ದಾರೆ. ಅಂದಹಾಗೆ ಎರಡೂ ವಿಷಯಗಳಿಗೆ ಸಂಬಂಧಿಸಿದ್ದಂತೆ ರಾಯಚೂರಲ್ಲಿ 1341, ಯಾದಗಿರಿ 949 ಹಾಗೂ ಬೆಳಗಾವಿ-ಚಿಕ್ಕೋಡಿ ಜಿಲ್ಲೆಗಳಲ್ಲಿ 703 ಶಿಕ್ಷಕರು ಅಧಿಕವಾಗಿದ್ದಾರೆ. ಅಂದಹಾಗೆ ಈ ಅಂಕಿ ಅಂಶಗಳ ಹೊರತಾಗಿಯೂ ಇನ್ನುಳಿದ ಜಿಲ್ಲೆಗಳಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಶಿಕ್ಷಕರ ನೇಮಕಕ್ಕೆ ಸರ್ಕಾರ ಗಮನ ಹರಿಸಬೇಕಿದೆ.

ಒಟ್ನಲ್ಲಿ.. ತಮ್ಮ ಮಕ್ಕಳ ಬಗ್ಗೆ ಪೋಷಕರು ಡಾಕ್ಟರ್ರು, ಎಂಜಿನಿಯರ್‌ ಮಾಡುವ ಕನಸು ಕಂಡಿರುತ್ತಾರೆ. ಅದರಲ್ಲೂ ಶ್ರೀಮಂತರ ಹೊರತಾಗಿಯೂ ಬಡ ತಂದೆ ತಾಯಿಯರೂ ಸಹ ಈ ರೀತಿಯ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಮುಖ್ಯ ಕಾರಣವೆಂದರೆ ಈ ಸರ್ಕಾರಿ ಶಾಲೆಗಳು ಅನ್ನೋದನ್ನ ನಾವು ಮರೆಯುವಂತಿಲ್ಲ. ಅಲ್ಲದೆ ಪ್ರತಿಯೊಬ್ಬರ ಬದುಕಿನಲ್ಲೂ ಸಹ ಈ ಹಂತದ ಶಿಕ್ಷಣವೇ ಮೇನ್‌ ರೋಲ್‌ ಪ್ಲೇ ಮಾಡುತ್ತದೆ. ಅದರಲ್ಲೂ ವೃತ್ತಿಯಾಧಾರಿತ ಬದುಕಿಗ ಆರಂಭದಲ್ಲಿ ಪಡೆದ ಗಣಿತ ಹಾಗೂ ವಿಜ್ಞಾನದ ವಿಷಯಗಳೇ ಮಾರ್ಗ ತೋರುತ್ತವೆ. ಆದರೆ ಈಗ ರಾಜ್ಯದಲ್ಲಿ ಈ ವಿಷಯಗಳಿಗೆ ಇರುವ ಶಿಕ್ಷಕರ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರ ಗಟ್ಟಿ ಮನಸ್ಸು ಮಾಡಬೇಕಿದೆ. ಇಲ್ಲವಾದರೆ ಇತರ ವಿಷಯಗಳಲ್ಲಿ ಜ್ಞಾನ ಪಡೆಯುವ ವಿದ್ಯಾರ್ಥಿಗಳು ಈ ವಿಷಯಗಳಲ್ಲಿ ಹಿನ್ನಡೆ ಅನುಭವಿಸುವ ಆತಂಕ ರಾಜ್ಯದ ಪೋಷಕರಲ್ಲಿ ಮೂಡಿದೆ ಅನ್ನೋದು ಸುಳ್ಳಲ್ಲ..

- Advertisement -

Latest Posts

Don't Miss