International News: ಚೀನಾ ದೇಶವು ಆಧುನಿಕ ತಂತ್ರಜ್ಞಾನದಲ್ಲಿ ಮುಂದುವರೆದಿರುವ ರಾಷ್ಟ್ರವಾಗಿದೆ. ಅಲ್ಲದೆ ಇದು ಎಲ್ಲದರಲ್ಲೂ ಅಮೆರಿಕಕ್ಕೆ ಪ್ರತಿಸ್ಫರ್ಧಿಯಾಗಿಯೇ ನುಗ್ಗುತ್ತದೆ. ಆದರೆ ಇದೀಗ ಇದಕ್ಕೆ ಸೆಡ್ಡು ಹೊಡೆಯಲು ಅಮೆರಿಕ ಮುಂದಾಗಿದ್ದು, ಅಧ್ಯಕ್ಷ ಟ್ರಂಪ್ ಹೆಸರಿನ ಯುದ್ಧ ವಿಮಾನ ನಿರ್ಮಾಣಕ್ಕೆ ಸಿದ್ಧವಾಗಿದೆ..
ಇನ್ನೂ ಈ ಕುರಿತು ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ನೂತನ ವಿಮಾನದ ಹೆಸರಿನ ಪಕ್ಕ ಸೇರಿಸಲಾಗಿರುವ 47 ಒಂದು ಉತ್ತಮವಾದ ಹಾಗೂ ಅದ್ಭುತವಾದ ಸಂಖ್ಯೆಯಾಗಿದೆ. ಹಾರಾಟದ ವೇಗ, ಪೇಲೋಡ್ ಕ್ಷಮತೆ ಹಾಗೂ ಆಕರ್ಷಕ ಹೊರ ವಿನ್ಯಾಸದ ಜೊತೆಗೆ ಹಾರಾಟ ಕೌಶಲ್ಯದಲ್ಲಿ ಇದನ್ನು ಮೀರಿಸುವ ಅಥವಾ ಸರಿಸಮನಾಗುವ ಯಾವುದೇ ವಿಮಾನ ಜಗತ್ತಿನಲ್ಲೇ ಇಲ್ಲ. ಅಲ್ಲದೆ ಈ ವಿಮಾನವು ಇಲ್ಲಿಯವರೆಗೆ ವಾಯುಪಡೆಯ ಬೆನ್ನೆಲುಬಾಗಿದ್ದ 5ನೇ ಜನ್‌ರೇಷನ್ ಎಫ್-22 ಇದರ ಜಾಗವನ್ನು ತುಂಬಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
20 ಬಿಲಿಯನ್ ಡಾಲರ್ ಖರ್ಚು..
ಇನ್ನೂ ಅಮೆರಿಕದ 6ನೇ ತಲೆಮಾರಿನ ಫೈಟರ್ ಜೆಟ್ ಇದಾಗಿರಲಿದೆ, ಎಫ್-47 ಹೆಸರಿನಡಿ ಇದರ ನಿರ್ಮಾಣ ಕಾರ್ಯವನ್ನು ಬೋಯಿಂಗ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಅಲ್ಲದೆ ಇದಕ್ಕಾಗಿ 20 ಬಿಲಿಯನ್ ಡಾಲರ್ ಅಂದರೆ 1.7 ಲಕ್ಷ ಕೋಟಿ ರೂಪಾಯಿಗಳ ವೆಚ್ಚ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ಜನರೇಷನ್ ಏರ್ ಡಾಮಿನೆನ್ಸ್ ಎಂದು ಕರೆಯಲ್ಪಡುವ ಈ ಮಾನವಸಹಿತ ಜೆಟ್, ಚೀನಾ ಮತ್ತು ಇತರ ಯಾವುದೇ ಸಂಭಾವ್ಯ ವೈರಿ ರಾಷ್ಟ್ರಗಳ ಮೇಲೆ ಸುಲಭವಾಗಿ ದಾಳಿ ಮಾಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾದ ಭವಿಷ್ಯದ ಡ್ರೋನ್, ವಿಮಾನಗಳ ಸಮೂಹಕ್ಕೆ ನಿರಂತರವಾಗಿ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.
ನಮ್ಮಲ್ಲಿನ ಕೆಲವು ಉನ್ನತ ಏರೋಸ್ಪೇಸ್ ಕಂಪನಿಗಳ ನಡುವಿನ ವಿಪರೀತ ಹಾಗೂ ಕಠಿಣ ಸ್ಪರ್ಧೆಯ ಬಳಿಕ ವಾಯು ಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯಿಂದ ನಾವು ಬೋಯಿಂಗ್ ಜೊತೆಗೆ ಈ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸುಮಾರು ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ F-22 ಸ್ಟೆಲ್ತ್ ಯುದ್ಧ ವಿಮಾನಕ್ಕೆ ಬದಲಿಯಾಗಿ ಹೊಸ, ಹೆಚ್ಚು ಮುಂದುವರಿದ ವಿಮಾನದೊಂದಿಗೆ ಸಿಬ್ಬಂದಿ ಇಲ್ಲದ ಡ್ರೋನ್‌ಗಳ ಜೊತೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗುವ ಅಭಿವೃದ್ಧಿಯತ್ತ ಸಾಗುವ ಗುರಿಯನ್ನು ಈ ಒಪ್ಪಂದ ಹೊಂದಿದೆ.
ಬೋಯಿಂಗ್‌ಗೆ ವರದಾನ..
ಇನ್ನೂ ಕಳೆದ ವರ್ಷ ಸುದೀರ್ಘ ಕಾರ್ಮಿಕ ಮುಷ್ಕರ ಮತ್ತು ಸುರಕ್ಷತಾ ಸಮಸ್ಯೆಗಳಿಂದ ನಷ್ಟದಲ್ಲಿ ಬಳಲುತ್ತಿದ್ದ ಬೋಯಿಂಗ್ ಸಂಸ್ಥೆಗೆ ಈ ಒಪ್ಪಂದವು ಒಂದು ವರದಾನವಾಗಿದೆ. ಕಡಿಮೆ ವೆಚ್ಚದ ಬೇಡಿಕೆಯಿಂದಾಗಿ 2024 ರಲ್ಲಿ ವಿಮಾನಗಳ ಕಾರ್ಯವನ್ನು ಕೈಗೆತ್ತಿಕೊಂಡಿರಲಿಲ್ಲ. ಆದರೆ ಇದೀಗ ಇದು ಟ್ರಂಪ್ ಆಡಳಿತದ ಪ್ರಮುಖ ಗುರಿಯಾಗಿದೆ, ಇದು ಜಗತ್ತಿನ ಬಿಲಿಯನೇರ್ ಎಲಾನ್ ಮಸ್ಕ್ ಅವರ ನೇತೃತ್ವದ ಸರ್ಕಾರಿ ದಕ್ಷತೆಯ ಇಲಾಖೆಯ ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವ ಕೆಲಸ ಮಾಡಿದೆ. ಈ ಮೂಲಕ ಅಮೆರಿಕ ಸರ್ಕಾರವು ಬೋಯಿಂಗ್‌ಗೆ ಮತ್ತೊಂದು ಜವಾಬ್ದಾರಿಯನ್ನು ನೀಡಿದೆ.
ಇನ್ನೂ ಮುಖ್ಯವಾಗಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಫೈಟರ್ ಜೆಟ್‌ಗೆ 47 ಅಂತ ಪರೋಕ್ಷವಾಗಿ ಟ್ರಂಪ್ ಹೆಸರನ್ನು ಇಡಲು ಅಮೆರಿಕ ಮುಂದಾಗಿದೆ. ಟ್ರಂಪ್ ಪ್ಲಾನ್ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದರೆ 2030ರ ವೇಳೆಗೆ ನೂತನ ಯುದ್ಧವಿಮಾನವು ಅಮೆರಿಕದ ಸೇನೆಗೆ ಪ್ರವೇಶಿಸುವ ನಿರೀಕ್ಷೆಯಿದೆ.