Political News: ಕಾಂಗ್ರೆಸ್ ವಿರುದ್ಧ ವಾಾಗ್ದಾಳಿ ಮಾಡುವ ಭರದಲ್ಲಿ ಬಿಜೆಪಿ ಹಿರಿಯ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಕಾರ್ಯಕರ್ತರು ತುಂಡು ತುಂಡಾಗಿ ಕತ್ತರಿಸಿ, ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆಂದು ವಾಗ್ದಾಳಿ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಈ ಬಗ್ಗೆ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಬಿ.ಕೆ.ಹರಿಪ್ರಸಾದ್ ಹರಿಹಾಯ್ದಿದ್ದು, ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲಿಗೆ ತನ್ನ ನೀಚತನವನ್ನ ಮಾತ್ರ ಹೇಳುವುದಿಲ್ಲ ನಾಲಿಗೆ ನಾಗರೀಕತೆಯನ್ನು ಹೇಳುತ್ತೆ. ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬೀ ಸಮುದ್ರಕ್ಕೆ ಎಸೆಯುತ್ತೇವೆ ಎನ್ನುವ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಬಿಜೆಪಿಯ ರಾಜಕೀಯ ಸಂಸ್ಕೃತಿ ಎಷ್ಟು ಅಧಃಪತನಕ್ಕೆ ಇಳಿದಿದೆ ಎಂಬುದಕ್ಕೆ ಸಾಕ್ಷಿ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರನ್ನು ಸಮುದ್ರಕ್ಕೆ ಎಸೆದರೆ ಉಪ್ಪಾಗಿ ಜನರ ಮೆದುಳು ಸೇರುತ್ತೇವೆ, ಅಲ್ಲಿಯೂ ಸ್ವಸ್ಥ ಸಮಾಜ ನಿರ್ಮಿಸುತ್ತೇವೆ. ಆದರೆ ದ್ವೇಷವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ.
ಮೊನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ‘ಕಾಂಗ್ರೆಸ್ ನನ್ ಮಕ್ಳು’ ಎಂದು ನಾಲಿಗೆ ಹರಿಬಿಟ್ಟಿದ್ದರು. ಈಗ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಾಯಕರನ್ನು ತುಂಡರಿಸುವ ಮಾತಾಡುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ. ನಮ್ಮದು ಸ್ವತಂತ್ರ ವೀರರ ರಕ್ತವೇ ಹೊರತು ಬ್ರಿಟಿಷರ ಬೂಟು ನೆಕ್ಕಿದ ಹೇಡಿ ವೀರರ ರಕ್ತವಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಾಯಿಗೆ ಬಂದಂತೆ ನಿಂದಿಸಿದರೆ, ವಿರೋಧ ಪಕ್ಷದ ನಾಯಕನಾಗಿ ಕೊಲೆ ಬೆದರಿಕೆಯ ಭಾಷೆಯಲ್ಲಿ ಮಾತನಾಡುತ್ತಾರೆ. ಇದು ರಾಜಕೀಯ ಪಕ್ಷದ ನಾಯಕರ ನಡವಳಿಕೆಯೋ ಅಥವಾ ಬೀದಿ ರೌಡಿಗಳ ವರ್ತನೆಯೋ? ಗೌರಿ ಲಂಕೇಶ್, ಎಂ ಎಂ ಕಲ್ಬುರ್ಗಿ, ಪನ್ಸಾರೆ ಅಂತ ವಿಚಾರವಂತರ ಕೊಲೆಗಡುಕ ರಕ್ಷಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಬಿಜೆಪಿ ಪಕ್ಷದಲ್ಲಿ ರೌಡಿ ಮೋರ್ಚಾದಲ್ಲಿ ಕೊಲೆ ಗಡುಕರನ್ನೇ ಸೇರಿಸಿಕೊಂಡರೆ ಇನ್ಯಾವ ಸಾರ್ವಜನಿಕ ಭಾಷೆ ನಿರೀಕ್ಷಿಸಲು ಸಾಧ್ಯ.? ಎಂದು ಹರಿಪ್ರಸಾದ್ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಇನ್ನೂ ದೊಡ್ಡ ವಿಪರ್ಯಾಸವೆಂದರೆ ಛಲವಾದಿ ನಾರಾಯಣಸ್ವಾಮಿ ಈ ಮಾತುಗಳನ್ನು ಆಡಿರುವುದು ಕೋಲಾರದಲ್ಲಿ ಬಿಜೆಪಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಪಾದಯಾತ್ರೆಯಲ್ಲಿ! ಬಾಯಲ್ಲಿ ಪ್ರಜಾಪ್ರಭುತ್ವದ ಮಂತ್ರ, ನಾಲಿಗೆಯ ತುದಿಯಲ್ಲಿ ಹಿಂಸೆಯ ತಂತ್ರ! ರಾಜಕೀಯ ವಿರೋಧಿಗಳನ್ನು ತುಂಡರಿಸುವ ಮಾತಾಡುವವರೇ ಪ್ರಜಾಪ್ರಭುತ್ವ ಉಳಿಸುತ್ತೇವೆ ಎಂದು ಹೇಳುವುದು ಈ ಶತಮಾನದ ಬಹುದೊಡ್ಡ ರಾಜಕೀಯ ವ್ಯಂಗ್ಯ.
‘ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ’ ಎಂಬ ಗಾದೆಯಂತೆ, ಬಿಜೆಪಿ ನಾಯಕರ ಬೆದರಿಕೆಗಳಿಗೆ ಕಾಂಗ್ರೆಸ್‌ನ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಸ್ವಾತಂತ್ರ್ಯ ಹೋರಾಟದ ಬೆಂಕಿಯಲ್ಲಿ ಬೆಂದು ರೂಪುಗೊಂಡ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಬೆದರಿಕೆಗಳು ಹೊಸದೇನಲ್ಲ. ಬ್ರಿಟಿಷರ ದಬ್ಬಾಳಿಕೆಗೆ ಮಣಿಯದ ಕಾಂಗ್ರೆಸ್, ಬಿಜೆಪಿಯ ನಾಯಕರ ನಾಲಿಗೆಯ ಅಬ್ಬರಕ್ಕೆ ಹೆದರುತ್ತದೆ ಎಂದು ಭಾವಿಸಿದ್ದರೆ ಅದು ಅವರ ರಾಜಕೀಯ ಅಜ್ಞಾನ ಎಂದು ಬಿಜೆಪಿ ನಾಯಕರ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳ ನಡೆಸಿದ್ದಾರೆ.




