International News: ಕದನ ವಿರಾಮದ ಕರಾರನ್ನು ಗಮನಿಸದೆಯೇ ಇಸ್ರೇಲ್‌ನ ರಕ್ಷಣಾ ಪಡೆಗಳು ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿವೆ. ಅಲ್ಲದೆ ಭೀಕರವಾಗಿ ನಡೆದ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 420ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಈ ಯುದ್ಧದ ವಿಚಾರದಲ್ಲಿ ಒತ್ತೆಯಾಳುಗಳ ಬಿಡುಗಡೆ, ಪರಸ್ಪರ ಕೈದಿಗಳ ಹಸ್ತಾಂತರದ ಕುರಿತು ಹಮಾಸ್ ಬಂಡುಕೋರರು ಹಾಗೂ ಇಸ್ರೇಲ್ ನಡುವೆ ಇತ್ತೀಚಿಗಷ್ಟೇ ಮಹತ್ವದ ಒಪ್ಪಂದವೂ ಆಗಿತ್ತು. ಇನ್ನೂ ಇದರ ಆಧಾರದ ಮೇಲೆಯೇ ಹಮಾಸ್ ಇಸ್ರೇಲ್‌ನ 33 ಹಾಗೂ ಥಾಯ್ಲೆಂಡ್‌ಗೆ ಸೇರಿದ 5 ಜನ ಒತ್ತೆಯಾಳುಗಳನ್ನು ಬಿಡುಗಡೆಮಾಡಿತ್ತು.
ಮುಖ್ಯವಾಗಿ ಕದನ ವಿರಾಮದ ಒಪ್ಪಂದದಂತೆ 59 ಒತ್ತೆಯಾಳುಗಳನ್ನು ಬಿಡುಗಡೆ ಮಾಡದ ಹಮಾಸ್ ಬಂಡುಕೋರರು ತಾಳಿರುವ ವಚನ ಭ್ರಷ್ಟ ನೀತಿಯು ಈಗ ಮತ್ತೆ ಯುದ್ಧಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಮಾಸ್ ವಿರುದ್ಧ ರಣ ಕಹಳೆ ಮೊಳಗಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ ಪ್ರತ್ಯೇಕತಾವಾದಿಗಳ ವಿರುದ್ಧ ಏರ್ ಸ್ಟ್ರೈಕ್‌ಗೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ನಗರ, ಖಾನ್ ಯೂನಿಸ್, ದೀರ್ ಅಲ್ ಬಲಾಹ್ ಹಾಗೂ ರಾಫಾ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ಕಾರ್ಯಾಚರಣೆ ನಡೆಸಿವೆ. ಅಲ್ಲದೆ ಈ ಎಲ್ಲ ಸ್ಥಳಗಳ ಮೇಲೆ ಇಸ್ರೇಲ್ ಯುದ್ಧ ವಿಮಾನಗಳ ಮೂಲಕ ಬಾಂಬ್‌ನ ಸುರಿ ಮಳೆಗೈದಿದೆ. ಅಲ್ಲದೆ ಇಸ್ರೇಲ್‌ನ ಈ ದಾಳಿಯಿಂದ ಗಾಜಾ ಆಡಳಿತದ ಪ್ರಮುಖ ಇಸ್ಲಾಮ್ ಅಲ್ ಡಾಲೀಸ್, ಆಂತರಿಕ ಸಚಿವಾಲಯದ ಮಹಾ ನಿರ್ದೇಶಕ ಬಹ್ಜತ್ ಅಬು ಸುಲ್ತಾನ್ ಹಾಗೂ ಆತನ ಕುಟುಂಬಸ್ಥರು ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಹಮಾಸ್ ಹೊರಗೆಡವಿದೆ.
ಅಲ್ಲದೆ ಪ್ರಮುಖವಾಗಿ ಉಗ್ರರ ತಾಣಗಳು, ಬಂಡುಕೋರರ ಕೇಂದ್ರ ಸ್ಥಾನಗಳು, ಭಯೋತ್ಪಾದಕರ ರಹಸ್ಯ ಜಾಗಗಳು ಸೇರಿದಂತೆ ಅವರ ವೈದ್ಯಕೀಯ ಕಾರ್ಯ ಚಟುವಟಿಕೆ ಕೇಂದ್ರಗಳ ಮೇಲೆಯೂ ಇಸ್ರೇಲ್ ಪಡೆಗಳು ಅಟ್ಯಾಕ್ ಮಾಡಿ ಇಡೀ ಪ್ರದೇಶಗಳನ್ನೇ ಧೂಳಿಪಟ ಮಾಡಿವೆ. ಅಲ್ಲದೆ ಗಾಜಾ ಪಟ್ಟಿಯಲ್ಲಿ ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ. ಆದರೆ ಈ ದಾಳಿ ಕೇವಲ ಸಾಂಕೇತಿಕವಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಅಲ್ಲದೆ ಕದನ ವಿರಾಮ ಹಾಗೂ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮಾತುಕತೆಯ ಒಪ್ಪಂದ ವಿಫಲವಾದ ಬಳಿಕ ಅನಿವಾರ್ಯವಾಗಿ ಇಸ್ರೇಲ್ ಈ ಹೆಜ್ಜೆ ಇಟ್ಟಿದೆ.
ಪ್ಯಾಲೆಸ್ತಿನ್ ಬೆಂಬಲಕ್ಕೆ ಯೆಮನ್..
ಈ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯನ್ನು ಯೆಮನ್ ಖಂಡಿಸಿದೆ. ಅಲ್ಲದೆ ಪ್ಯಾಲೆಸ್ತಿನ್ ಬೆಂಬಲಿಸಿ ನಾವು ಹಾರಿಸಿದ್ದ ಖಂಡಾಂತರ ಕ್ಷಿಪಣಿಗೆ ಇಸ್ರೇಲ್‌ನ 400ಕ್ಕೂ ಹೆಚ್ಚು ಜನ ಹತರಾಗಿದ್ದಾರೆ ಎಂದು ಯೆಮನ್ ಸೇನಾ ಪಡೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಕಳೆದ ಜನವರಿ 19ರ ಬಳಿಕ ಗಾಜಾದಲ್ಲಿ ಕದನ ವಿರಾಮ ಜಾರಿಯಾದಾಗಿನಿಂದ ಯೆಮನ್ ಸೇನಾ ಪಡೆಗಳು ನಡೆಸಿರುವ ಮೊದಲ ಅಟ್ಯಾಕ್ ಇದಾಗಿದೆ. ಇನ್ನೂ ಯೆಮನ್ ಬೆಂಬಲದ ಹೌತಿ ಪ್ರತ್ಯೇಕತಾವಾದಿಗಳು ಇಸ್ರೇಲ್ ಮೇಲೆ ಅನೇಕ ಬಾರಿ ದಾಳಿ ನಡೆಸಿದ್ದಾರೆ.
ಇಸ್ರೇಲ್ ಅಮಾನುಷ ನಡೆ ಅನುಸರಿಸುತ್ತಿದೆ..
ಇನ್ನೂ ತನ್ನ ಮೇಲೆ ದಾಳಿ ಮಾಡಿರುವ ಇಸ್ರೇಲ್ ನಡೆಗೆ ಹಮಾಸ್ ಖಂಡನೆ ವ್ಯಕ್ತಪಡಿಸಿದ್ದು, ನಮ್ಮಲ್ಲಿ ಕದನ ವಿರಾಮ ಮುಂದುರೆದಿದ್ದರೂ ಸಹ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಿರುವ ಇಸ್ರೇಲ್ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಅಲ್ಲದೆ ಏರ್ ಸ್ಟ್ರೈಕ್ ನಿಂದ ಸೆರೆಯಾಳುಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಈ ಇಸ್ರೇಲಿಗರ ನಂಬಿಕೆ ಹಾಗೂ ದ್ರೋಹಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹಮಾಸ್ ಸಂಘಟನೆ ಎಚ್ಚರಿಸಿದೆ.