Political News: ಮುಡಾ ತನಿಖೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಮುಡಾ ಅಕ್ರಮದಲ್ಲಿ ಮುಖ್ಯಮಂತ್ರಿಗಳ ಕುಟುಂಬಕ್ಕೆ ದೊರೆತಿದ್ದ 14 ನಿವೇಶನಗಳು ಹಾಗೂ ಸಾವಿರಾರು ನಿವೇಶನಗಳ ಲೂಟಿಕೋರತನದ ಹಗರಣದ ಹಿನ್ನಲೆ ಈ ಹಿಂದೆಯೂ ದಾಖಲೆಗಳ ಆಧಾರದ ಮೇಲೆ ಸಿದ್ದರಾಮಯ್ಯನವರ ಪಾತ್ರವನ್ನು ಸಾಕ್ಷಿಕರಿಸುತ್ತಿತ್ತು. ಇದರ ಆಧಾರದ ಮೇಲೆ ಉಚ್ಛ ನ್ಯಾಯಾಲಯ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯ ನಿರ್ಧಾರವನ್ನು ಎತ್ತಿ ಹಿಡಿದು ತನಿಖೆಗೆ ಮುಕ್ತ ಅವಕಾಶ ಕಲ್ಪಿಸಿ ಕೊಟ್ಟಿತ್ತು.
ಮುಡಾಗೆ ಸಾವಿರಾರು ಕೋಟಿ ರೂ ನಷ್ಟವಾಗಿರುವುದನ್ನು ಅಂದಿನ ಜಿಲ್ಲಾಧಿಕಾರಿಗಳೇ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದ್ದರು, ಈ ಹಿನ್ನೆಲೆಯಲ್ಲಿ ದಾಖಲಾದ ದೂರನ್ನು ಆಧರಿಸಿ ಜಾರಿ ನಿರ್ದೇಶನಾಲಯವು (ED)ನಡೆಸುತ್ತಿರುವ ತನಿಖೆ ವಾಸ್ತವ ಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತಿದೆ. ಇದರ ವಾಸನೆಯನ್ನು ಅರಿತೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಹೈಕಮಾಂಡ್ ಬೆದರಿಸಲು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲು ಹೊರಟಿದ್ದರು. ಕಾಂಗ್ರೆಸ್ ವರಿಷ್ಠರಿಗೂ ಮುಖ್ಯಮಂತ್ರಿಗಳು ಭಂಡತನದಿಂದ ಅಧಿಕಾರದಲ್ಲಿ ಮುಂದುವರೆಯುವುದು ಬೇಕಿಲ್ಲ. ಈ ಕಾರಣಕ್ಕಾಗಿಯೇ ಹಾಸನದ ಸಿದ್ದರಾಮಯ್ಯನವರ ಸ್ವಪ್ರತಿಷ್ಠೆಯ ಸ್ವಾಭಿಮಾನಿ ಸಮಾವೇಶಕ್ಕೆ ಕಡಿವಾಣ ಹಾಕಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಲೋಕಾಯುಕ್ತದ ತನಿಖೆಯ ದಿಕ್ಕು ಅನುಮಾನ ಮೂಡಿಸಿರುವ ನಡುವೆ ಜಾರಿ ನಿರ್ದೇಶನಾಲಯದಿಂದ ಹೊರಬಂದಿರುವ ವರದಿ ಮುಖ್ಯಮಂತ್ರಿಗಳ ಮುಖವಾಡ ಬಯಲು ಮಾಡಿದೆ. ಇಷ್ಟಾಗಿಯೂ ತಮ್ಮ ಭಂಡತನ ಮುಂದುವರಿಸಲು ನಿರ್ಧರಿಸಿರುವ ಸಿದ್ದರಾಮಯ್ಯನವರು ದೆಹಲಿಯ ಹಿಂದಿನ ಮುಖ್ಯಮಂತ್ರಿ ಕೇಜ್ರಿವಾಲರಂತೆ ‘ಜೈಲಿಗೆ ಹೋದರೂ ಮುಖ್ಯಮಂತ್ರಿ ಗಾದಿ ಬಿಡುವುದಿಲ್ಲ’ ಎಂಬ ಶಪಥ ಕೈಗೊಂಡಂತಿದೆ. ನಿಶಕ್ತ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ಮುಂದೆ ಮಂಡಿಯೂರಿ ಕುಳಿತಿರುವುದು ಕರ್ನಾಟಕದ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ ಎಂದು ವಿಜಯೇಂದ್ರ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.