ನವರಸ ನಾಯಕ ಜಗ್ಗೇಶ್ (Jaggesh) ನಟನೆಯ ‘ತೋತಾಪುರಿ’ (Totapuri) ಎಲ್ಲೆಡೆ ಮಿಂಚು ಹರಿಸುತ್ತಿದೆ. ಕರ್ನಾಟಕ (Karnataka) ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಈ ಚಿತ್ರದ ಹಾಡಿನದ್ದೇ ಹವಾ. ಇತ್ತೀಚೆಗೆ ಬಿಡುಗಡೆಯಾದ ‘ಬಾಗ್ಲು ತೆಗಿ ಮೇರಿ ಜಾನ್’ (Takei Mary John) ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡು ಮಾಡುತ್ತಿದೆ. ಕನ್ನಡಿಗರು ಮಾತ್ರವಲ್ಲದೇ ಬೇರೆ ಭಾಷೆಯವರೂ ಈ ಹಾಡನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ ಎಂಬುದಕ್ಕೆ ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿರುವುದೇ ಸಾಕ್ಷಿ. ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಇದರ ಸಂಭ್ರಮವನ್ನು ಜಗ್ಗೇಶ್ ಅವರೊಂದಿಗೆ ಗ್ಲೋಬಲ್ ವರ್ಚುವಲ್ ಮೀಟ್ ಮೂಲಕ ಹೆಚ್ಚಿಸಿದ್ದು ‘ತೋತಾಪುರಿ’ ತಂಡಕ್ಕೆ ಹುರುಪು ತುಂಬಿದೆ. ಅದರ ಬೆನ್ನಲ್ಲೇ ಇದೀಗ ದುಬೈನಲ್ಲೂ ಗ್ಲೋಬಲ್ ಮೀಟ್ ಸಂಭ್ರಮಕ್ಕೆ ‘ತೋತಾಪುರಿ’ ಸಾಕ್ಷಿಯಾಗಲಿದೆ. ಹೌದು ಫೆಬ್ರವರಿ 25ರ ಶುಕ್ರವಾರ ಭಾರತೀಯ ಕಾಲಮಾನ ರಾತ್ರಿ 7.30ರಿಂದ ಗಲ್ಫ್ ಕನ್ನಡಿಗರೊಂದಿಗೆ ಜಗ್ಗೇಶ್ ಮಾತುಕತೆ ನಡೆಸಲಿದ್ದಾರೆ. ಒಮನ್, ಬಹ್ರೇನ್, ಕತಾರ್, ಕುವೈತ್ ಸೇರಿದಂತೆ ನೆರೆಹೊರೆಯ ಕನ್ನಡಿಗರು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಓವರ್’ಸೀಸ್ ಕನ್ನಡ ಮೂವೀಸ್ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಚಿತ್ರತಂಡ ಅದ್ದೂರಿಯಾಗಿ ನಡೆಸಲು ಯೋಜನೆ ರೂಪಿಸಿಕೊಂಡಿದೆ. ‘ಮೋನಿಫ್ಲಿಕ್ಸ್ ಆಡಿಯೋಸ್’ (‘Moniflix Audios’) ಯೂ ಟ್ಯೂಬ್ ಚಾನಲ್’ನಲ್ಲಿ (You Tube Channel) ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರಕ್ಕೆ ಕೆ.ಎ.ಸುರೇಶ್ ನಿರ್ಮಾಣವಿದೆ. ‘ಡಾಲಿ’ ಧನಂಜಯ್ (Dhananjay), ಅದಿತಿ ಪ್ರಭುದೇವ, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ನಿರಂಜನ್ ಬಾಬು (Niranjan Babu) ಛಾಯಾಗ್ರಹಣವಿದೆ.




