ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಪಕ್ಷಗಳ ಉತ್ತರ ಪ್ರತಿಯುತ್ತರ, ಆರೋಪಗಳು ಜೋರಾಗೇ ನಡೆಯುತ್ತಿವೆ. ಈ ಮಧ್ಯೆ ಮತಗಳ್ಳತನ ಎಂದು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ದ ರಾಹುಲ್ ಗಾಂಧಿ ಮಾಡಿರುವ ಆರೋಪವು ಪರಮಸುಳ್ಳು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ರಮೇಶ್ ಗೌಡ ಮುಖ್ಯವಾಗಿ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ದಾಖಲೆಗಳ ಸಮೇತ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷವೇ ಮತಗಳ್ಳತನದಲ್ಲಿ ನಿರತವಾಗಿದೆ ಎಂದು ದೂರಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಿದೆವು. ಆದರೆ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲು ಆಗಲಿಲ್ಲ. ಆದರೂ ನಾವು ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣೆ ಆಯೋಗವನ್ನು ದೂರುವ ಕೆಲಸ ಮಾಡಲಿಲ್ಲ.
ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರು 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದರು. ಇಷ್ಟು ಕರಾರುವಕ್ಕಾಗಿ ಸಂಖ್ಯೆ ಹೇಳಬೇಕು ಎಂದರೆ ಅವರೇನು ಬ್ರಹ್ಮನೇ. ಅವರು ಹೇಳಿದ ಪ್ರಕಾರವೇ 136 ಸ್ಥಾನ ಗೆದ್ದಿದ್ದಾರೆ. ಹಾಗಾದರೆ ಇವರೂ ರಿಗ್ಗಿಂಗ್ ಮಾಡಿ, ಮತಗಳ್ಳತನ ಮಾಡಿ ಗೆದ್ದಿದ್ದಾರಾ ಎಂದು ರಮೇಶ್ ಗೌಡ ವಾಗ್ದಾಳಿ ನಡೆಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಹುಲ್ ಗಾಂಧಿ ಅವರು ಆಯೋಗಕ್ಕೆ ಐದು ಪ್ರಶ್ನೆ ಕೇಳಿದ್ದಾರೆ. ಜೆಡಿಎಸ್ ಕೂಡ ಅವರಿಗೆ ಐದು ಪ್ರಶ್ನೆ ಕೇಳುತ್ತದೆ. ನೈತಿಕತೆ ಇದ್ದರೆ ಅವರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ರಾಹುಲ್ ಗಾಂಧಿ ಗೆ ಕೇಳಿರುವ ಐದು ಪ್ರಶ್ನೆಗಳು:
1. ನೀವು ಚುನಾವಣಾ ಆಯೋಗಕ್ಕೆ ಉತ್ತರ ಕೊಡುವುದಕ್ಕೆ ಹೆದರುತ್ತಿರುವುದು ಯಾಕೆ?
2. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕುಣಿಗಲ್ ಸೇರಿ ಅನೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಗಿಫ್ಟ್ ಕೂಪನ್ ಹಂಚಿ ಗೆದ್ದಿದ್ದೀರಿ. ಇದು ಮತಗಳ್ಳತನ ಅಲ್ಲವೇ?
3. ಗೃಹಲಕ್ಷ್ಮೀ ಗ್ಯಾರಂಟಿಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತೀರಿ. ಚುನಾವಣೆ ಬಂದ ಕೂಡಲೇ ನಾಲ್ಕುಐದು ತಿಂಗಳ ಗೃಹಲಕ್ಷ್ಮೀ ಹಣ ಜಮೆ ಮಾಡುತ್ತೀರಿ. ನಿಯಮಿತವಾಗಿ ಪ್ರತೀ ತಿಂಗಳು ಜಮೆ ಮಾಡುತ್ತಿಲ್ಲ, ಯಾಕೆ? ಇದು ಚುನಾವಣಾ ಅಕ್ರಮ ಅಲ್ಲವೇ?
4. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9 ಲೋಕಸಭೆ ಕ್ಷೇತ್ರಗಳಲ್ಲಿ ಮತಗಳ್ಳತನ ಆಗಿಲ್ಲವೇ? ಆಗಿಲ್ಲದಿದ್ದರೆ ಮತಗಳ್ಳರಿಗೆ ನಿಮ್ಮ ಮೇಲೆ ವಿಶೇಷ ಪ್ರೀತಿ ಯಾಕೆ?
5. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಅತೀ ಕಡಿಮೆ ಅಂತರದಿಂದ ನಿಮ್ಮ ಶಾಸಕರು ಗೆದ್ದಿದ್ದಾರೆ. ಹಾಗಿದ್ದರೆ ಅವರೂ ಮತಗಳ್ಳತನ ಮಾಡಿಯೇ ಗೆಲುವು ಸಾಧಿಸಿದ್ದಾರೆಯೇ?
ನೀವು ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆ ಕೇಳಿದ್ದೀರಿ. ನಾನೂ ನಿಮ್ಮನ್ನು ಐದು ಪ್ರಶ್ನೆ ಕೇಳುತ್ತೇನೆ. ಉತ್ತರಿಸಿ. ಎಲೆಕ್ಷನ್ ಕಮಿಷನ್ ಉತ್ತರ ಕೊಡಿ ಎಂದರೆ ನಾನು ನಿಮ್ಮಂತೆಯೇ ಜಾರಿಕೊಳ್ಳುವುದಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ರಮೇಶ್ ಗೌಡರು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದರು.
ರಾಹುಲ್ ಗಾಂಧಿ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ಎಂಬುದನ್ನು ಮರೆತಿದ್ದಾರೆ. ಅವರು ಲೋಕಸಭೆಯಲ್ಲಿ ಈ ವಿಷಯವನ್ನು ಮಾತನಾಡಬೇಕೆ ಹೊರತು ಹಾದಿ ಬೀದಿಯಲ್ಲಿ ರಂಪ ಮಾಡಬಾರದು. ಬೆಂಗಳೂರಿಗೆ ಬಂದು ಅವರದೇ ಪಕ್ಷದ ಸರ್ಕಾರ ಇರುವ ರಾಜ್ಯದಲ್ಲಿ ಆಡಳಿತ ತಂತ್ರವನ್ನು ದುರುಪಯೋಗ ಮಾಡಿಕೊಂಡು ಪ್ರತಿಭಟನೆ ಪ್ರಹಸನ ನಡೆಸಿ ಹೋಗಿದ್ದಾರೆ ಎಂದು ರಮೇಶ್ ಗೌಡರು ಕಟುವಾಗಿ ಟೀಕಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ