Hubli News: ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯನವರು ಈ ಬಾರಿ 16ನೇ ಬಜೆಟ್ ಮಂಡಿಸಿದ್ದು, ಹುಬ್ಬಳ್ಳಿಯಲ್ಲಿಂದು ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಈ ಬಗ್ಗೆ ಮಾತನಾಡಿದ್ದಾರೆ.
16 ನೇ ಬಜೆಟ್ ದಾಖಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು. ದೇವರು ಇಷ್ಟು ಅವಕಾಶವನ್ನು ಬೇರೆ ರಾಜಕಾರಣಿಗಳಿಗೆ ಕೊಟ್ಟಿಲ್ಲ. ಅತಿ ಹೆಚ್ಚು ಬಜೆಟ್ ಮಂಡಿಸಿದ ಪ್ರಖ್ಯಾತಿ, ಅತಿ ಹೆಚ್ಚು ಸಾಲ ಮಾಡಿದ ಕುಖ್ಯಾತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು ಎಂದು ರವಿ ಹೇಳಿದ್ದಾರೆ.
ಬಜೆಟ್ ನಲ್ಲಿ ಏನು ಹೇಳಿದ್ದಾರೋ ಅನುಷ್ಠಾನ ಎಷ್ಟು ಮಾಡ್ತಾರೆ ಅಂತ ಹಿಂದಿನ ಬಜೆಟ್ ನೋಡಿದ್ರೆ ಗೊತ್ತಾಗುತ್ತೆ. ಕಳೆದ ಬಾರಿ 3 ಲಕ್ಷ 22 ಸಾವಿರ ಕೋಟಿಯನ್ನ ವೆಚ್ಚ ಮಾಡ್ತೀನಿ ಅಂದಿದ್ರು. ಇದುವರೆಗೂ ಖರ್ಚು ಮಾಡಿರೋದು 1 ಲಕ್ಷ 75 ಸಾವಿರ ಕೋಟಿ. ಮಾರ್ಚ್ 31 ಕ್ಕೆ ಇನ್ನು 24 ದಿನ ಇದೆ, 24 ದಿನದಲ್ಲಿ ಉಳಿದ ಹಣ ಖರ್ಚು ಮಾಡಿ ಬಿಡ್ತಾರಾ..? ಬಜೆಟ್ ನ 27% ರಷ್ಟು ಸಾಲ ತೋರಿಸಿದ್ದಾರೆ. 1 ಲಕ್ಷ 8 ಸಾವಿರ ಕೋಟಿ ಸಾಲ ಮಾಡಲಾಗಿದೆ. ವೆಚ್ಚದಲ್ಲಿ 18% ಬಡ್ಡಿ ಕಟ್ಟೋದಕ್ಕೆ ಹೋಗುತ್ತೆ. ನೀವು ಸಾಲ ಮಾಡಿ ಮೂಲಭೂತ ಸೌಕರ್ಯಕ್ಕೆ ಖರ್ಚು ಮಾಡಿದ್ರೆ ಸಾಲ ತೀರಿಸೋದು ಸುಲಭ. ಯಾವುದಕ್ಕೆ ಉಪಯೋಗಿಸ್ತಾ ಇದೀವಿ, ಇದರಿಂದ ಒಳ್ಳೇದಾಗುತ್ತಾ.? ಎಂದು ರವಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಬದುಕು ಬದಲಾಯಿಸುವ ಯಾವ ಯೋಜನೆ ನಮಗೆ ಕೊಟ್ಟಿದ್ದಾರೆ. ರಾಜ್ಯದ ಆರ್ಥಿಕತೆ ಬದಲಾಯಿಸುವಂತ ಯಾವ ಯೋಜನೆ ಕೊಟ್ಟಿದ್ದಾರೆ…? ಅಂತಹ ಯೋಜನೆ ಕೊಟ್ಟರೆ ನಾಲ್ವಡಿ ಕೃಷ್ಣರಾಜ ಒಡೆಯರು, ವಿಶ್ವೇಶ್ವರಯ್ಯರನ್ನ ನೆನಪಿಸಿಕೊಳ್ಳುವಂತೆ ನೆನಪಿಸಿಕೊಳ್ತಾರೆ ಜನ. ಸಾಲ ಮಾಡಿ ತುಪ್ಪ ಯಾರು ತಿಂತಾ ಇರೋದು ನಮಗೆ ಬೆಲೆ ಏರಿಕೆ ಬರೆ, ಎಲ್ಲದರ ದರ ಏರಿಸಿದ್ದಾರೆ. ಅವರು ಸಾಲ ಅಂತೂ ಮಾಡ್ತಾ ಇದ್ದಾರೆ, ತುಪ್ಪ ಯಾರಿಗೆ. ಮಧ್ಯಮ ವರ್ಗದವರಿಗೆ ಹೊರೆ ಆಗ್ತಾ ಇದೆ ಎಂದು ರವಿ ಹೇಳಿದ್ದಾರೆ.
ಅಲ್ಪ ಸಂಖ್ಯಾತರಿಗೆ ಬಜೆಟ್ ನಲ್ಲಿ ಮೀಸಲಿಟ್ಟ ವಿಚಾರದ ಬಗ್ಗೆ ಮಾತನಾಡಿರುವ ರವಿ, ಪಾಕಿಸ್ತಾನ ಮಾಡಿದಂತಹ ಜಿನ್ನಾ ಆತ್ಮಕ್ಕೆ ಬಹಳ ಖುಷಿ ಆಗಿದೆ. ಇಂಥವರೆಲ್ಲ ಇರ್ತಾರೆ ಅಂತ ಗೊತ್ತಾಗಿದ್ದರೆ ಅವನು ಪಾಕಿಸ್ತಾನ ಬೇಡ ಅಂತ ಇಲ್ಲೇ ಇರ್ತಿದ್ದ. ಜಿನ್ನಾ ಮಾತು ಕೇಳಿ ಪಾಕಿಸ್ತಾನಕ್ಕೆ ಹೋದವರೆಲ್ಲ ಬಡ್ಕೊಳ್ತಾ ಇದ್ದಾರೆ. ಜಿನ್ನಾ ಅಪ್ಪನಕಿಂತ ಹೆಚ್ಚಿನವರು ಇಲ್ಲೇ ಇದ್ದರೂ ಸುಮ್ಮನೆ ಪಾಕಿಸ್ತಾನಕ್ಕೆ ಹೋದ್ವಿ. ಎಷ್ಟೋ ಊರುಗಳಲ್ಲಿ ಹೆಣ ಹೂಳಲಿಕ್ಕು ಕೂಡ ಸ್ಥಳವಿಲ್ಲ. ಇನ್ನೊಂದು ಕಡೆ ಕಬರಸ್ಥಾನ ಸ್ಥಾನ ಕಾಂಪೌಂಡ್ ನಿರ್ಮಾಣಕ್ಕೆ 150 ಕೋಟಿ. ಅಂಬೇಡ್ಕರ್ ಮತೀಯ ಆಧಾರಿತ ಮೀಸಲಾತಿ ವಿರೋಧ ಮಾಡಿದ್ರು. ಇವರು ಗುತ್ತಿಗೆ ವಿಚಾರದಲ್ಲೂ ಸಾವ್ರ ಕೋಟಿ ಕೊಟ್ಟಿದ್ದಾರೆ. ಮಹಮ್ಮದ್ ಅಲಿ ಜಿನ್ನಾ ಆತ್ಮಕ್ಕೆ ಎಷ್ಟು ಖುಷಿಯಾಗಿರುತ್ತೆ, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಎಲ್ಲಿದೆ ಸಮಾನತೆ..? ಎಂದು ರವಿ ಪ್ರಶ್ನಿಸಿದ್ದಾರೆ.
ಅವರಿಗೆ ದೆಹಲಿ ಚುನಾವಣೆ ನಂತರ ಶೂನ್ಯದ ಮೇಲೆ ಬಹಳ ನಂಬಿಕೆ. ಹರಕೆ ತೀರಿಸೋದಿತ್ತು ಹಾಗಾಗಿ ಸವದತ್ತಿಗೆ ಹೊರಟ್ಟಿದ್ದೇನೆ ಎಂದ ರವಿ. ದಿನನಿತ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಅಪಮಾನ ಮಾಡಬೇಡಿ. ಸಿದ್ದರಾಮಯ್ಯ ಅಂತ ಹಿರಿಯರಿಗೆ ಅಪಮಾನ ಮಾಡಬೇಡಿ. ಸಿಎಂ ಸ್ಥಾನದಿಂದ ಇಳಿಸುವುದಾದರೆ ಒಂದೇ ದಿನಕ್ಕೆ ಇಳಿಸಿಬಿಡಿ. ಆದರೆ ಪ್ರತಿ ದಿನ ಅಪಮಾನ ಮಾಡಬೇಡಿ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದಂತಹ ಬಾಂಧವರ ಕೇಸ್ ಗಳನ್ನು ಹಿಂಪಡೆಯಲು ಶಿಫಾರಸ್ಸು ಮಾಡಿ ಕೋರ್ಟಿಗೆ ಕಳಿಸಿದ್ದಾರೆ. ನಾಳೆ ನಿಮ್ಮ ರಕ್ಷಣೆ ನೀವೇ ಮಾಡಿಕೊಳ್ಳಬೇಕು. ಆ ರೀತಿ ಸಂದೇಶವನ್ನು ಕಾಂಗ್ರೆಸ್ನವರು ಕೊಟ್ಟಿದ್ದಾರೆ. ಶಾಂತಿ ದೂತರೇ ಸ್ಟೇಷನ್ಗಾದ್ರೂ ಬೆಂಕಿ ಹಾಕಿ, ಊರಿಗಾದರೂ ಬೆಂಕಿ ಹಾಕಿ ನಾವು ನಿಮ್ಮ ಜೊತೆಗಿದ್ದೇವೆ. ನೀವೆಲ್ಲರೂ ನನ್ನ ಸಹೋದರರು ಏನಾದ್ರೂ ಮಾಡಿ ನಮಗೆ ಮತ ಹಾಕಿ. ನಿಮ್ಮ ಜೊತೆ ನಾವಿದ್ದೇವೆ ಎಂಬ ಕೆಟ್ಟ ಸಂದೇಶವನ್ನು ಕೊಟ್ಟಿದ್ದಾರೆ. ಹಳೆ ಹುಬ್ಬಳ್ಳಿಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಮೈಸೂರಿನಲ್ಲಿನ ಘಟನೆ ಆಗ್ತಾ ಇರ್ಲಿಲ್ಲ ಎಂದು ರವಿ ಹೇಳಿದ್ದಾರೆ.
ಈ ರೀತಿ ಕುಮ್ಮಕ್ಕು ಕೊಡೋದ್ರಿಂದಲೇ ನಾವೇನ್ ಮಾಡಿದ್ರು ನಡೆಯುತ್ತೆ ಅಂತ ಅವರಿಗೆ ಅನಿಸಿದೆ. ನಿಮ್ಮಪ್ಪನ ಆಸ್ತಿಯಲ್ಲೂ ನಮ್ಮಪ್ಪನ ಆಸ್ತಿಯಲ್ಲೂ ಅವರಿಗೆ ಪಾಲು ಕೊಡಬೇಕಾಗುತ್ತೆ. ಈಗಾಗಲೇ ದೇಶ ಒಂದು ಪಾಲು ಕೊಟ್ಟಾಯಿತು, ಅದನ್ನು ಎದುರಿಸಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ರಾಜಿ ಸಂಧಾನದ ಬಗ್ಗೆ ಪ್ರತಿಕ್ರಿಯೆಗೆ ಸಿಟಿ ರವಿ ನಿರಾಕರಿಸಿದ್ದು, ಸಿಎಂ ಬದಲಾವಣೆ ವಿಚಾರ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಅವರನ್ನ ಏರಿಸುವುದು ಇಳಿಸೋದು ನಮಗೆ ಸಂಬಂಧಪಟ್ಟದ್ದಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜನ 138 ಸೀಟ್ ಕೊಟ್ಟಿದ್ದಾರೆ. ಇಳಿಸೋದು ಇರಿಸೋದು ಅವರ ಪಕ್ಷಕ್ಕೆ ಸಂಬಂಧಪಟ್ಟದ್ದು ಎಂದು ಸಿ.ಟಿ.ರವಿ ಹೇಳಿದ್ದಾರೆ.




