ಹಾಸನ : ಬಗರ್ ಹುಕುಂ 2750 ಎಕರೆ ಭೂ ಹಗರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಆನಂದ್ ಆರೋಪಿಸಿದ್ದು, ಆದ್ರೆ ನನ್ನ ಅವಧಿಯಲ್ಲಿ ಯಾವುದೇ ಭೂ ಮಂಜೂರಾತಿ ಆಗಿರುವುದಿಲ್ಲ. ಸುಖಸುಮ್ಮನೆ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದ್ದು, ಕೂಡಲೇ ಈ ಬಗ್ಗೆ ಸಿಬಿಐ ತನಿಖೆ ಆಗಲಿ. ಏನಾದ್ರೂ ಆರೋಪ ಸತ್ಯವಾದ್ರೆ, ನಾನು ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್. ಲಿಂಗೇಶ್ ಬೇಸರದಲ್ಲಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ತಾಲೂಕು ಬಿಜೆಪಿ ಅಧ್ಯಕ್ಷರಾದ ಅಡಗೂರು ಆನಂದರವರು, ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ನಾನು ಬಗರ್ ಹುಕ್ಕುಂ ಸಮಿತಿಯ ಅಧ್ಯಕ್ಷನಾಗಿ ಜತೆಗೆ ಸಮಿತಿಯವರು ಭಾಗಿಯಾಗಿ 2750 ಎಕರೆ ಭೂ ಹಗರಣದಲ್ಲಿ ಭಾಗಿದ್ದೇನೆ ಎಂದು ತಾಲೂಕು ದಂಡಾಧಿಕಾರಿಗಳು ನನ್ನನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸೂಚಿಸಬೇಕೆಂದು ಆಗ್ರಹ ಪಡಿಸಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ತಾಲೂಕು ಸಮಿತಿ ಅಧ್ಯಕ್ಷರಾಗಿ ಕಾನೂನಿನ ಅರಿವಿಲ್ಲದ ಹೇಳಿಕೆ ನೀಡಿರುವುದಕ್ಕೆ ನನಗೆ ಆಯ್ಯೋ ಎನಿಸಿದೆ ಎಂದಿದ್ದಾರೆ.
ಅಲ್ಲದೇ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2750 ಎಕರೆ ಭೂಮಂಜುರಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ 15 ಜನರ ಮೇಲೆ ತನಿಖೆ ನಡೆಸಿ, 2023 ಜುಲೈ 7ರ ಒಳಗೆ ವರದಿ ದಾಖಲಿಸುವಂತೆ ಸೂಚಿಸಿದೆ ಎಂದರು. ನಾನೊಬ್ಬ ಜನಪ್ರತಿನಿಧಿಯಾಗಿ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ ಎಂದು ಕೆ.ಎಸ್.ಲಿಂಗೇಶ್ ಹೇಳಿದ್ದಾರೆ.
ಆನಂದರವರ ಹೇಳಿಕೆಯಿಂದ ನನ್ನ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಬಾರದು. ನಾನು ಬೇಲೂರು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಮೇಲೆ ಮೊದಲ ಸಭೆ ನಡೆಸಿದ್ದು, ದಿನಾಂಕ 28/೦3/2023 ರಂದು ನಡೆಸಿದ ಸಭೆಯನ್ನು ಸೇರಿದಂತೆ ಒಟ್ಟು 15 ಸಭೆಗಳನ್ನು ನಡೆಸಲಾಗಿದ್ದು, 562 ಕಡತಗಳನ್ನು ಅನುಮೋದಿಸಿದ್ದು, ಒಟ್ಟು 720 ಎಕರಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಈ ಹಿಂದಿನ ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಗಳಲ್ಲಿ ಅನುಮೋದನೆಗೊಂಡು ಪಹಣಿಯಲ್ಲಿಯ ಹೆಸರು ದಾಖಲಾಗಿದ್ದು, ಹಕ್ಕು ದಾಖಲಾಗದೆ ಇರುವ ಫಲಾನುಭವಿಗಳ ಹಕ್ಕನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಬೇಲೂರು ಪುರಸಭೆಯಿಂದ 3 ಕಿಲೋಮೀಟರ್ ವ್ಯಾಪ್ತಿಗೆ ಬರುವ ಗ್ರಾಮಗಳಾದ ಚೆನ್ನಾಪುರ, ರಾಯಪುರ, ಕರಲೂರು, ಮಾವಿನಕೆರೆ, ಉತ್ಪತ್ತನಹಳ್ಳಿ, ಮುದಿಗೆರೆ, ಸೋಂಪುರ ಹಾಗು ಬಂಟಿನಹಳ್ಳಿ ಈ ಗ್ರಾಮಗಳ ಸುಮಾರು 38 ಕಡತಗಳನ್ನು ವಜಾ ಗೊಳಿಸಲಾಗಿದೆ. ಜೊತೆಗೆ ಆ ಗ್ರಾಮಗಳಿಗೆ ಸಂಬಂಧಿಸಿದಂತೆ ಯಾವುದೇ ಭೂ ಮಂಜೂರಾತಿ ಆಗಿರುವುದಿಲ್ಲ, ಅಲ್ಲದೇ ಹೇಮಾವತಿ ಯಗಚಿ ಮುಳುಗಡೆ ರೈತರ ಮಂಜುರಾತಿಗಾಗಿ ಗುರುತಿಸಿರುವ ಜಮೀನುಗಳನ್ನು ಸಹ ಮಂಜೂರು ಮಾಡಿದುವುದಿಲ್ಲ.
ಕೆಲವೊಂದು ಸಂದರ್ಭಗಳಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯ ಅಭಿಪ್ರಾಯ ಪಡೆಯಲು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯದ ಅಧಿಕೃತ ಪ್ರತಿಯನ್ನು ಪಡೆದು ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳೊಂದಿಗೆ ಮನವರಿಕೆ ಮಾಡಿಕೊಡಲು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು. ಬೇಲೂರಿನಲ್ಲಿ ಇದುವರೆಗೂ ಶಾಂತಿಯುತವಾಗಿ, ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡಿದ್ದು, ರಾಜಕೀಯ ಪಕ್ಷದವರು ಈ ಹುನ್ನಾರ ನಡೆಸಿ, ಇಲ್ಲಿಯವರೆಗೆ ಯಾವ ಆಪಾದನೆ ಮಾಡದವರು ಚುನಾವಣೆಯ ಸಂದರ್ಭದಲ್ಲಿ ಪೂರ್ವ ಯೋಜಿತವಾಗಿ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ ಎಂದು ದೂರಿದರು.
ನಾನು ನನ್ನ ಶಾಸಕ ಅವಧಿಯಲ್ಲಿ ಯಾವೊಂದು ಅಕ್ರಮ ಎಸಗಿರುವುದಿಲ್ಲ. ಬೇಕಾದ್ರೆ ಸಿಬಿಐ, ಸೇರಿದಂತೆ ಯಾವ ತನಿಖೆಗೆ ಸಿದ್ದನಿದ್ದು, ಏನಾದರೂ ಸಾಬೀತಾದರೆ ಅಂದೇ ನಾನು ನೇಣಿಗೆ ಶರಣಾಗುತ್ತೇನೆ ಎಂದು ಸವಾಲು ಎಸಗಿದರು. ಇನ್ನು ಮಂಗಳವಾರ ನಡೆಯುವ ಬೇಲೂರು ರಥೋತ್ಸವವು ಹಿಂದಿನಿಂದ ನಡೆದುಕೊಂಡು ಬಂದತೆ ಕುರಾನ್ ಪಠಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೇಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ತೋ.ಚ. ಅನಂತ ಸುಬ್ಬರಾಯ್, ಮುಖಂಡ ಮಲ್ಲೇಶ್ ಇತರರು ಉಪಸ್ಥಿತರಿದ್ದರು.