Kannada Fact Check: ಮಹಾಕುಂಭ ಮೇಳ ಶುರುವಾದಾಗಿನಿಂದ ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿಯ ಸುದ್ದಿ ಹರಡುತ್ತಲೇ ಇದೆ. ಕೆಲವು ಸತ್ಯವಾದರೆ, ಹಲವು ಸುಳ್ಳು ಸುದ್ದಿಗಳು. ಅದರಲ್ಲೂ ಎಐ ಬಂದ ಮೇಲೆ ಸುಳ್ಳು ಸುದ್ದಿಗಳ ಕಾಟ ಹೆಚ್ಚಾಗಿದೆ.
ಮಹಾ ಕುಂಭ ಮೇಳದಲ್ಲಿ ಒಂದೆರಡು ಸಲ ಅಗ್ನಿ ಅವಘಡ, ಮೌನಿ ಅಮಾವಾಸ್ಯೆಯಂದು ಸಾವು ನೋವು ಸಂಬವಿಸಿದ ಬಳಿಕವಂತೂ, ಮಹಾಕುಂಭದ ಬಗ್ಗೆ ಹಲವು ಸುಳ್ಳು ಸುದ್ದಿ ಹರಡಲು ಶುರುವಾಯ್ತು. ಇದೀಗ ಅಗ್ನಿ ಅವಘಡದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ, ಮಹಾಕುಂಭ ಮೇಳದ ಬಸ್‌ಸ್ಟಾಂಡ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. 30ಕ್ಕೂ ಹೆಚ್ಚು ಗಾಡಿಗಳು ಸುಟ್ಟು ಭಸ್ಮವಾಗಿದೆ ಎಂದು ಸುದ್ದಿ ಹರಿಬಿಡಲಾಗಿದೆ.
ಆದರೆ ಇದು ಸುಳ್ಳು ಸುದ್ದಿ. ಈ ಘಟನೆ ನಡೆದಿದ್ದು ಈಜಿಪ್ಟ್‌ನಲ್ಲಿ. 2020ರಲ್ಲಿ ನಡೆದ ಈ ಘಟನೆಗೆ ಮಹಾಕುಂಭ ಮೇಳದ ಬಣ್ಣ ಹಚ್ಚಿ, ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಜುಲೈ 14, 2020ರಂದು ಈಜಿಪ್ಟ್‌ನ ಕೈರೋ ಇಸ್ಮಾಯಿಲಿಯಾ ಹೆದ್ದಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಚ್ಚಾ ತೈಲ ಪೈಪ್‌ಲೈನ್ ಒಡೆದ ಕಾರಣ, ಈ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 12 ಜನ ಉಸಿರಾಡುವ ಸಮಸ್ಯೆಯಿಂದ ಬಳಲಿ ಆಸ್ಪತ್ರೆ ಸೇರಿದ್ದರು.
Claim: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಬಸ್ ಸ್ಟ್ಯಾಂಡ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ಫೋಟೋ ವೈರಲ್ ಮಾಡಲಾಗಿದೆ.
Fact Check: ಜುಲೈ 14, 2020ರಲ್ಲಿ ಈಜಿಪ್ಟ್‌ನಲ್ಲಿ ಕಚ್ಚಾ ತೈಲ ಪೈಪ್ ಸೋರಿಕೆಯಾಗಿ, ಬೆಂಕಿ ಬಿದ್ದಿತ್ತು. ಅದರ ಫೋಟೋವನ್ನೇ ಮಹಾಕುಂಭ ಮೇಳದಲ್ಲಿ ಅಗ್ನಿ ಅವಘಡವೆಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ.
Fact Check by Logically Facts (Shakti Publishers)