ಕರ್ನಾಟಕ ರಾಜಕೀಯದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆ ವಿಚಾರವೇ ಅತ್ಯಂತ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದ ಈ ವಿಚಾರದಲ್ಲಿ ಈಗ ದೊಡ್ಡ ಅಪ್ಡೇಟ್ ಬಂದಿದ್ದು, ಸಂಭಾವ್ಯ ಸಚಿವರ ಪಟ್ಟಿ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದೂವರೆ ತಿಂಗಳು ಕಳೆದಿದ್ದರೂ, ಬಾಕಿ ಇರೋ ಸಚಿವ ಸ್ಥಾನಗಳ ಭರ್ತಿ ಇನ್ನೂ ಹಾಗೆಯೇ ಉಳಿದಿತ್ತು. ರಾಜ್ಯಸಭೆ ಚುನಾವಣೆ, ರಾಹುಲ್ ಗಾಂಧಿ ವಿದೇಶಿ ಪ್ರವಾಸ ಹಾಗೂ ದೆಹಲಿ ಪ್ರತಿಭಟನೆಗಳ ಕಾರಣದಿಂದ ಸಚಿವ ಸಂಪುಟ ವಿಸ್ತರಣೆ ಸ್ವಲ್ಪ ವಿಳಂಬವಾಗಿತ್ತು.
ಆದರೆ, ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಸಿಎಂ ಹಾಗೂ ಹಿರಿಯ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಹೈಕಮಾಂಡ್ ಸೂಚಿಸಿರುವ ಕಟ್ಟುನಿಟ್ಟಿನ ಮಾನದಂಡಗಳ ಆಧಾರದ ಮೇಲೆ ಸಂಭಾವ್ಯರ ಪಟ್ಟಿ ಈಗ ಅಂತಿಮ ಹಂತಕ್ಕೆ ಬಂದು ನಿಂತಿದೆ ಎನ್ನಲಾಗುತ್ತಿದೆ. ಈ ಸಂಪುಟದಲ್ಲಿ ಯಾರಿಗೆಲ್ಲ ಮಂತ್ರಿಗಿರಿ ಸಿಗಲಿದೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
ಸಂಭಾವ್ಯರ ಪಟ್ಟಿಯಲ್ಲಿ ಆರ್.ವಿ. ದೇಶಪಾಂಡೆ, ಹೆಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ ಮುಂತಾದ ಹಿರಿಯ ನಾಯಕರ ಹೆಸರುಗಳು ಮುಂಚೂಣಿಯಲ್ಲಿವೆ. ಅದರಲ್ಲೂ ಒಕ್ಕಲಿಗ ಕೋಟಾದಲ್ಲಿ ಹೆಚ್.ಸಿ. ಬಾಲಕೃಷ್ಣ, ಚಲುವರಾಯಸ್ವಾಮಿ, ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇವರೊಂದಿಗೆ ಅಪ್ಪಾಜಿ ನಾಡಗೌಡ, ಎನ್.ಎ. ಹ್ಯಾರೀಸ್, ಸಂತೋಷ್ ಲಾಡ್, ಬಿ. ನಾಗೇಂದ್ರ, ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ಮೊದಲ ಬಾರಿ ಗೆದ್ದಿರುವ ಎ.ಎಸ್. ಪೊನ್ನಣ್ಣ ಮತ್ತು ಪ್ರದೀಪ್ ಈಶ್ವರ್ ಹೆಸರುಗಳು ಕೂಡ ರೇಸ್ನಲ್ಲಿ ಕೇಳಿಬರುತ್ತಿವೆ.
ಮುಂದಿನ ವಾರ ದೆಹಲಿ ವರಿಷ್ಠರ ಅಂತಿಮ ಅನುಮೋದನೆ ಸಿಕ್ಕ ತಕ್ಷಣ ಸಂಪುಟ ವಿಸ್ತರಣೆಯಾಗುವುದು ಖಚಿತವಾಗಿದೆ. ಸಂಪುಟ ವಿಸ್ತರಣೆ ತಡವಾಗಿರುವುದರಿಂದ ಆಗಸ್ಟ್ ಮೊದಲ ವಾರದಲ್ಲಿ ನಡೆಯಬೇಕಿದ್ದ ವಿಧಾನಮಂಡಲ ಅಧಿವೇಶನ ಕೂಡ ಎರಡು ಅಥವಾ ಮೂರನೇ ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿರುವ ಈ ನಾಯಕರಲ್ಲಿ ಅಂತಿಮವಾಗಿ ಯಾರ್ಯಾರಿಗೆ ಅದೃಷ್ಟ ಒಲಿದು ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.




