ನೀಟ್ ಪೇಪರ್ ಲೀಕ್ ಹೊಡೆತ – ಮಂತ್ರಿ ಪದವಿ ಬಿಟ್ಟ ಧರ್ಮೇಂದ್ರ ಪ್ರಧಾನ್!

ರಾಷ್ಟ್ರೀಯ ರಾಜಕೀಯದಲ್ಲಿ ಈಗ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಂದಿದ್ದು, ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ NEET ಪೇಪರ್ ಲೀಕ್ ವಿವಾದದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ರೀತಿಯ ಧಕ್ಕೆಯಾಗಬಾರದು ಮತ್ತು ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಯಾವುದೇ ‘ರಾಷ್ಟ್ರವಿರೋಧಿ ಶಕ್ತಿಗಳು’ ದುರುಪಯೋಗಪಡಿಸಿಕೊಳ್ಳಬಾರದು ಎಂಬ ಕಾರಣಕ್ಕೆ ತಾವು ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಧಾನ್ ತಮ್ಮ ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೇ 3ರಂದು ನಡೆದಿದ್ದ NEET-UG ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದ ತಕ್ಷಣವೇ ಎಚ್ಚೆತ್ತ ಕೇಂದ್ರ ಸರ್ಕಾರ, ಕೂಡಲೇ ಸಿಬಿಐ ತನಿಖೆಗೆ ಆದೇಶಿಸಿತ್ತು. ನಂತರ ಪರೀಕ್ಷೆಯನ್ನು ರದ್ದುಗೊಳಿಸಿ ಜೂನ್ 21ರಂದು ಯಶಸ್ವಿಯಾಗಿ ಮರುಪರೀಕ್ಷೆಯನ್ನು ನಡೆಸಲಾಗಿತ್ತು. ಸುಮಾರು 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತಗಳ ಸಹಕಾರದೊಂದಿಗೆ ಈ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಪರೀಕ್ಷಾ ಮಾಫಿಯಾದಿಂದ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಾರದು ಎನ್ನುವುದೇ ತಮ್ಮ ಮೊದಲ ಆದ್ಯತೆಯಾಗಿತ್ತು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ, ಜುಲೈ 16ರಂದು ನೀಟ್ ಮರುಪರೀಕ್ಷೆಯ ಫಲಿತಾಂಶ ಬಂದ ನಂತರ, ಕೆಲವರು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು. ಇದು ತಮಗೆ ತೀವ್ರ ನೋವುಂಟು ಮಾಡಿದೆ ಎಂದು ಪ್ರಧಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ನಡೆದ ಘಟನೆಗಳು ತನ್ನನ್ನು ತೀವ್ರವಾಗಿ ಕಲಕಿವೆ ಎಂದಿರುವ ಅವರು, ಇದು ತನ್ನ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಲ್ಲ ಎಂದಿದ್ದಾರೆ. ಜಂತರ್ ಮಂತರ್ ಹಾಗೂ ದೇಶದ ಇತರೆಡೆಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಯಾವುದೇ ರಾಷ್ಟ್ರವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಬಾರದು, ದೇಶದ ಐಕ್ಯತೆ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ತಾವು ಈ ರಾಜೀನಾಮೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸುಧಾರಣೆಗಾಗಿ ಶ್ರಮಿಸಿರುವುದಾಗಿ ಹೇಳಿಕೊಂಡಿರುವ ಧರ್ಮೇಂದ್ರ ಪ್ರಧಾನ್, ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಒಟ್ಟಿನಲ್ಲಿ, ದೇಶದ ರಾಜಕೀಯದಲ್ಲಿ ಈಗ ಈ ರಾಜೀನಾಮೆ ದೊಡ್ಡ ಸಂಚಲನ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

About The Author