ಸಚಿವ ಸ್ಥಾನ ಸಿಗದವರಿಗೆ ಸಿಹಿಸುದ್ದಿ – ಕಾಂಗ್ರೆಸ್‌ನಲ್ಲಿ ಬಿಗ್ ಸರ್ಜರಿ!

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಬದಲಾವಣೆಗಳಿಗೆ ವೇದಿಕೆ ಸಿದ್ಧವಾಗಿದೆ. ಹೌದು ‘ರಾಜ್ಯದ ವಿವಿಧ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಮಹತ್ವದ ಸೂಚನೆ ಹೊರಬಿದ್ದಿದೆ.

ಈಗಾಗಲೇ ಎರಡೂವರೆ ವರ್ಷಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಂದಾಜು ಮೂವತ್ತೈದು ಮಂದಿ ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರು ಈ ಸ್ಥಾನತ್ಯಾಗ ಮಾಡಬೇಕಿದೆ. ಸರ್ಕಾರದ ಉಳಿದ ಅವಧಿಯಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಳಿಬಂದಿದೆ.

ಸಚಿವ ಸ್ಥಾನ ಸಿಗದೆ ನಿರಾಶರಾಗಿದ್ದ ಸುಮಾರು ಎಂಟು ಮಂದಿ ಹಿರಿಯ ಶಾಸಕರು ಇತ್ತೀಚೆಗೆ ದೆಹಲಿಗೆ ತೆರಳಿ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ನಿಗಮ-ಮಂಡಳಿಗಳ ಪುನಾರಚನೆ ಮಾಡುವಂತೆ ಬಲವಾಗಿ ಮನವಿ ಮಾಡಿದ್ದರು. ಹಿರಿಯ ಶಾಸಕರ ಈ ಒತ್ತಡದ ಬೆನ್ನಲ್ಲೇ ಈಗ ಈ ಬೆಳವಣಿಗೆ ಸಂಭವಿಸಿದ್ದು, ಈ ಹಿನ್ನೆಲೆ ಡಿಕೆಶಿ ಪದತ್ಯಾಗಕ್ಕೆ ಸೂಚನೆ ನೀಡಿದ್ದಾರೆ.

ಇನ್ನು ಇದರ ಜೊತೆಗೆ ‘ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ನಿರ್ದೇಶನ ನೀಡಲಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಮೂಲಕ ಹಾಲಿ ಅಧ್ಯಕ್ಷರ ರಾಜೀನಾಮೆ ಪಡೆಯುವ ಪ್ರಕ್ರಿಯೆ ಚುರುಕುಗೊಂಡಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರ ಗದ್ದಲಕ್ಕೆ ಕಾರಣವಾಗಿತ್ತು. ದೆಹಲಿ ನಾಯಕರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದಂತೆ, ಈಗ ಆಡಳಿತ ಪಕ್ಷದಲ್ಲಿ ಮತ್ತೊಮ್ಮೆ ಅಧಿಕಾರ ಹಂಚಿಕೆಯ ಹೊಸ ಕಸರತ್ತು ಆರಂಭವಾಗಿದ್ದು, ಯಾರಿಗೆಲ್ಲಾ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

About The Author