ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಸೇರಿದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಮೈಸೂರು, ಹಾಸನ ಸೇರಿದಂತೆ ರಾಜ್ಯದ ಒಟ್ಟು 17 ಜಿಲ್ಲೆಗಳ 80 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳು ಎಂದು ರಾಜ್ಯ ಘೋಷಿಸಿದೆ. ಒಂದು ಕಡೆ ಆಗಸ್ಟ್ 1 ರಿಂದ 9ರವರೆಗೆ ಕರ್ನಾಟಕ ರಾಜ್ಯದಲ್ಲಿ ಮಹಾ ಮಳೆ. ಮತ್ತೊಂದು ಕಡೆ ಮಹಾರಾಷ್ಟ್ರದಲ್ಲಿನ ಕೃಷ್ಣಾ ಕಣಿವೆ ಜಲಾಶಯಗಳು ತುಂಬಿ ಹರಿದ ಕಾರಣ ರಾಜ್ಯಕ್ಕೆ ಸಂಕಷ್ಟ ಎದುರಾಯ್ತು.
ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿ ನದಿಯ ಅಕ್ಕಪಕ್ಕದ ಪ್ರದೇಶಗಳಿಗೆ ನೀರು ನುಗ್ಗಿತು. ಪರಿಣಾಮ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದ್ದಲ್ಲದೆ, ಜೀವಹಾನಿಗೂ ಕಾರಣವಾಯ್ತು. ಇದೇ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆ, ರಾಜ್ಯದಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ಕಾರಣವಾಯಿತು. ಪರಿಣಾಮವಾಗಿ ಈ ಜಿಲ್ಲೆಗಳಲ್ಲೂ ಅಪಾರ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ಪರಿಣಾಮವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಭಾರಿ ಮಳೆ ಮತ್ತು ಪ್ರವಾಹಕ್ಕೆ ಒಳಗಾದ ಪ್ರದೇಶಗಳನ್ನು ಗುರುತಿಸಲಾಗಿದೆ. ಪರಿಣಾಮವಾಗಿ ರಾಜ್ಯದ 17 ಜಿಲ್ಲೆಯ 80 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳು ಎಂದು ಸರ್ಕಾರ ಘೋಷಣೆ ಹೊರಡಿಸಿದೆ.