ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಈ 4 ಜಿಲ್ಲೆಗಳಲ್ಲಿ ಮೊದಲು ಆರಂಭ!

ಸರ್ಕಾರಿ ಶಾಲೆಗಳಲ್ಲಿ ಓದುವ ಮುದ್ದು ಮಕ್ಕಳ ಆರೋಗ್ಯಕ್ಕಾಗಿ ಸರ್ಕಾರ ಮತ್ತೊಂದು ಭರ್ಜರಿ ಹೆಜ್ಜೆ ಇಟ್ಟಿದೆ. ಹೌದು, ಇನ್ಮುಂದೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಸಂಜೆ ವೇಳೆಯೂ ಮಕ್ಕಳ ಹೊಟ್ಟೆಗೆ ಪೌಷ್ಟಿಕ ಆಹಾರ ಸೇರಲಿದೆ. ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗಾಗಿ ಸರ್ಕಾರ ಈ ಹೊಸ ಉಪಹಾರ ಯೋಜನೆಗೆ ಸಿದ್ಧತೆ ನಡೆಸಿದೆ ಅಂತ ಹೇಳಲಾಗ್ತಿದೆ. ಆದರೆ, ಇದು ಸದ್ಯಕ್ಕೆ ಎಲ್ಲರಿಗೂ ಅಲ್ಲ! ಮೊದಲ ಹಂತದಲ್ಲಿ ನಾಲ್ಕು ಆಯ್ದ ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆ ಶುರುವಾಗ್ತಿದೆ. ವಿಜಯನಗರ, ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಪ್ರಯೋಗ ನಡೆಯಲಿದೆ.

ವಿಶೇಷವಾಗಿ ಗಣಿ ನಾಡು ಹಾಗೂ ಆ ಅಕ್ಕಪಕ್ಕದ ಪ್ರದೇಶಗಳಲ್ಲಿ ಮಕ್ಕಳ ಅಪೌಷ್ಟಿಕತೆ ತಡೆಯುವುದು ಮತ್ತು ಅವರ ಆರೋಗ್ಯ ಸುಧಾರಿಸುವುದು ಇದರ ಮುಖ್ಯ ಉದ್ದೇಶ. ಈಗಾಗ್ಲೇ ಶಾಲೆಗಳಲ್ಲಿ ಬೆಳಿಗ್ಗೆ ಹಾಲು ಅಥವಾ ರಾಗಿ ಮಾಲ್ಟ್ ಹಾಗೂ ಮಧ್ಯಾಹ್ನ ಬಿಸಿಯೂಟ ಸಿಗ್ತಿದೆ. ಆದ್ರೆ ಸಂಜೆ ಆಗುವಷ್ಟರಲ್ಲಿ ಮಕ್ಕಳಿಗೆ ಸುಸ್ತಾಗಬಾರದು ಅಂತ ಈ ಹೊಸ ಲಘು ಉಪಹಾರದ ಪ್ಲ್ಯಾನ್ ಮಾಡಲಾಗಿದೆ.

ಹಾಗಾದ್ರೆ ಸಂಜೆ ಟೈಮ್‌ನಲ್ಲಿ ಮಕ್ಕಳಿಗೆ ತಿನ್ನೋಕೆ ಏನೇನು ಸಿಗಬಹುದು ಗೊತ್ತಾ? ಪೌಷ್ಟಿಕಾಂಶ ತಜ್ಞರ ಸಲಹೆಯಂತೆ ಕಡಲೆಕಾಯಿ ಚಿಕ್ಕಿ, ಸಿರಿಧಾನ್ಯದ ಲಘು ತಿಂಡಿಗಳು ಅಥವಾ ಹಣ್ಣುಗಳನ್ನು ಕೊಡಲು ಚಿಂತನೆ ನಡೆದಿದೆ. ಮಕ್ಕಳು ಶಾಲೆ ಬಿಟ್ಟು ಮನೆಗೆ ಹೋಗುವ ಮುಂಚೆ ಹೊಟ್ಟೆಗೆ ಸ್ವಲ್ಪ ಪೌಷ್ಟಿಕ ತಿಂಡಿ ಬಿದ್ದರೆ, ಸಂಜೆ ಹೊತ್ತು ಎನರ್ಜಿ ಡೌನ್ ಆಗಲ್ಲ. ಇನ್ನು ಶಾಲೆ ಬಿಟ್ಟ ಬಳಿಕ ವಿಶೇಷ ತರಗತಿಗಳಿರುವಾಗ ಮಕ್ಕಳ ಏಕಾಗ್ರತೆ ಹೆಚ್ಚಿಸಲು ಕೂಡ ಇದು ತುಂಬಾನೇ ಸಹಾಯ ಮಾಡಲಿದೆ ಎಂದು ಕೇಳಿ ಬಂದಿದೆ.

ಮೊದಲ ಹಂತದಲ್ಲಿ ಈ ನಾಲ್ಕು ಜಿಲ್ಲೆಗಳಲ್ಲಿ ಯೋಜನೆ ಹೇಗೆ ಕೆಲಸ ಮಾಡುತ್ತದೆ, ಮಕ್ಕಳ ಆರೋಗ್ಯದ ಮೇಲೆ ಇದರ ಪರಿಣಾಮ ಹೇಗಿದೆ ಅಂತ ಪರಿಶೀಲನೆ ನಡೆಸಲಾಗುತ್ತದೆ. ಇದು ಯಶಸ್ವಿಯಾದ್ರೆ ಮುಂದೆ ಇಡೀ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೂ ವಿಸ್ತರಿಸುವ ಬೃಹತ್ ಯೋಜನೆ ಸರ್ಕಾರದ ಮುಂದಿದೆ.

ಬೆಳಗ್ಗೆ ಹಾಲು, ಮಧ್ಯಾಹ್ನ ಊಟ, ಈಗ ಸಂಜೆ ಪೌಷ್ಟಿಕ ತಿಂಡಿ… ಒಟ್ಟಿನಲ್ಲಿ ಶಾಲಾ ಮಕ್ಕಳ ನಗುವಿಗೆ, ಆರೋಗ್ಯಕ್ಕೆ ಸಿಗುತ್ತಿರುವ ಈ ಕೊಡುಗೆ ನಿಜಕ್ಕೂ ಶ್ಲಾಘನೀಯ. ಈ ಪ್ರಾಯೋಗಿಕ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕು..

About The Author