‘ನನ್ನ ಕ್ಷೇತ್ರ ಕನಕಪುರದಲ್ಲೂ ಇದೆ’ – ಬರ ಘೋಷಣೆಗೆ ಡಿಕೆಶಿ ಬ್ರೇಕ್!

ಬರ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೀಗ ಕಷ್ಟದ ಪರಿಸ್ಥಿತಿ ಎದುರಾಗಿದೆ. ‘ಇಡೀ ರಾಜ್ಯವನ್ನೇ ಬರಪೀಡಿತ ಅಂತಾ ಒಟ್ಟಿಗೆ ಘೋಷಿಸಿಬಿಡಿ ಅನ್ನೋ ಭಾರೀ ಒತ್ತಾಯಗಳು ಕೇಳಿಬರ್ತಿರೋದಕ್ಕೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಡ್ಡಿಮುರಿದಂತೆ ಉತ್ತರ ಕೊಟ್ಟಿದ್ದಾರೆ.

ಹೌದು, ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮನಸ್ಸಿಗೆ ಬಂದ ಹಾಗೆ ಎಲ್ಲೆಂದರಲ್ಲಿ ಬರ ಘೋಷಣೆ ಮಾಡೋಕೆ ಬರೋದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಖರವಾದ ಮಾರ್ಗಸೂಚಿಗಳಿವೆ, ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿದ ಮೇಲಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ ಅಂತಾ ತಿಳಿಸಿದ್ದಾರೆ.

ಕೇವಲ 101 ತಾಲ್ಲೂಕುಗಳನ್ನು ಮಾತ್ರ ಬರ ಪೀಡಿತ ಅಂತಾ ಘೋಷಣೆ ಮಾಡಿರುವುದಕ್ಕೆ ರೈತರು ಹಾಗೂ ಶಾಸಕರಲ್ಲಿ ಅಸಮಾಧಾನ ಇರೋದು ಸುಳ್ಳಲ್ಲ. ಸ್ವತಃ ತಮ್ಮ ಕ್ಷೇತ್ರವಾದ ಕನಕಪುರದಲ್ಲೂ ಬರದ ಪರಿಸ್ಥಿತಿ ಇದೆ, ಆದರೂ ನಿಯಮ ಮೀರಲು ಸಾಧ್ಯವಿಲ್ಲ ಅಂತಾ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ತಂಡ ಬಂದು ಪರಿಶೀಲನೆ ನಡೆಸಿದಾಗ ತಪ್ಪು ವರದಿ ಅಂತಾ ಸಾಬೀತಾದ್ರೆ ಜವಾಬ್ದಾರಿ ಯಾರು ತಗೋತಾರೆ ಅಂತಾ ಪ್ರಶ್ನಿಸಿರುವ ಅವರು, ಅಲ್ಲಿಯವರೆಗೆ ರೈತರು ತುಸು ತಾಳ್ಮೆಯಿಂದಿರಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿಯವರ ಪಾದಯಾತ್ರೆ ಹಾಗೂ ವಿಪಕ್ಷಗಳ ವಿರುದ್ಧ ಹರಿಹಾಯ್ದಿರುವ ಡಿ.ಕೆ. ಶಿವಕುಮಾರ್, ಅವರಿಗೆ ರೈತರ ಹಿತ ಮುಖ್ಯವಲ್ಲ, ಕೇವಲ ರಾಜಕಾರಣವೇ ಅಜೆಂಡಾ ಆಗಿದೆ ಎಂದು ವಾಗ್ದಾಳಿ ನಡೆಸಿದರು. ವಾಲ್ಮೀಕಿ ನಿಗಮದ ಹಗರಣದ ನೈತಿಕ ಹೊಣೆ ಹೊತ್ತು ಬಿ. ನಾಗೇಂದ್ರ ಅವರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿರುವ ವಿಚಾರದ ಬಗ್ಗೆಯೂ ಮುಕ್ತವಾಗಿ ಮಾತನಾಡಿದರು.

ಅದಲ್ಲದೆ, ರಾಹುಲ್ ಗಾಂಧಿ ಮೇಲಿನ ಪ್ರಕರಣಗಳ ಬಗ್ಗೆ ಮಾತನಾಡಿ, ಅವರು ನೀಟ್ ಅಥವಾ ಕೆಪಿಎಸ್‌ಸಿ ಹಗರಣದ ತರಹ ಯಾವುದೇ ತಪ್ಪು ಮಾಡಿಲ್ಲ, ಆ ಕೇಸ್‌ಗಳೆಲ್ಲಾ ಅವರಿಗೆ ಒಂದು ರೀತಿಯ ಬ್ಯಾಡ್ಜ್ ಇದ್ದಂತೆ ಎಂದು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ, ಯುವಕರಲ್ಲಿ ನಶೆ ಹೋಗಲಾಡಿಸಿ ಕ್ರೀಡಾ ಸ್ಫೂರ್ತಿ ತುಂಬಲು ‘ಭಾರತ್ ಜೋಡೊ ಸಂಘ’ಗಳನ್ನು ರಚಿಸಲಾಗುತ್ತಿದ್ದು, ನೋಂದಣಿಗೆ ಯಾವುದೇ ಬಲವಂತ ಇಲ್ಲ. ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಕೊಳ್ಳಲು ಲಕ್ಷಾಂತರ ಯುವಕರು ಉತ್ಸುಕರಾಗಿದ್ಧಾರೆ ಎಂದು ಹೇಳಿದರು.

About The Author