Political News: ರೈತರ ಭೂಮಿಗಳಿಗೆ ಸಂಬಂಧಿಸಿದ್ದ ರಾಜ್ಯ ವಕ್ಫ್ ಬೋರ್ಡ್ ಹಗರಣ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಬಳಿಕ ಇದೀಗ ಖದ್ದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಇದರ ಬಗ್ಗೆ ಮಾತನಾಡಿರುವುದು ಮಹತ್ವ ಪಡೆದುಕೊಂಡಿದೆ. ಅಲ್ಲದೆ ಈ ವಿಚಾರ ಎಲ್ಲೆಡೆ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ.
ಪಾವಿತ್ರ್ಯತೆಗೆ ಧಕ್ಕೆಯಾಗುವುದಿಲ್ಲ..!
ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ದೇಶದಲ್ಲಿದ್ದಈ ಹಿಂದಿನ ವಕ್ಫ್ ಮಸೂದೆಯ ಕಾರಣದಿಂದ ಕರ್ನಾಟಕದಲ್ಲಿನ ವಕ್ಫ್ ಬೋರ್ಡ್ ರೈತರ ಜಮೀನು ಕಬಳಿಸಿತ್ತು. ಅಲ್ಲದೆ ಹರಿಯಾಣದಲ್ಲಿ ಗುರುದ್ವಾರ, ಕೇರಳದಲ್ಲಿ ಚರ್ಚ್‌ಗಳಿಗೆ ಸಂಬಂಧಿಸಿದ ಜಾಗವನ್ನೂ ಸಹ ಇದೇ ರೀತಿ ವಶಪಡಿಸಿಕೊಳ್ಳಲಾಗಿತ್ತು. ಅದರೆ ಈಗ ನೂತನ ಕಾಯ್ದೆಯಿಂದ ವಕ್ಫ್ ಮಂಡಳಿಯ ಘನತೆ ಹಾಗೂ ಪಾವಿತ್ರ್ಯತೆಗೆ ಯಾವುದೇ ಧಕ್ಕೆಯಾಗುವುದಿಲ್ಲ, ಅಲ್ಲದೆ ಮುಸ್ಲಿಮರಲ್ಲಿನ ಬಡವರ ಹಾಗೂ ಮಹಿಳೆಯರ ಏಳ್ಗೆಗೆ ಈ ತಿದ್ದುಪಡಿ ಮಸೂದೆಯು ಕಾರಣವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನಕ್ಕಿಂತ ಹೆಚ್ಚೆಂದು ಬಿಂಬಿಸಲಾಗಿತ್ತು..
ಇನ್ನೂ 2013ರ ತಿದ್ದುಪಡಿಯು ಕೇವಲ ಮುಸ್ಲಿಂ ಮೂಲಭೂತವಾದಿಗಳ ಹಾಗೂ ಭೂ ಮಾಫಿಯಾಗಳ ಲಾಭಕ್ಕಾಗಿ ಮಾಡಿಕೊಳ್ಳಲಾಗಿತ್ತು. ಅಲ್ಲದೆ ದೇಶದಲ್ಲಿ ಸಾಮಾಜಿಕ ನ್ಯಾಯ ಸ್ಥಾಪಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಬಹು ಮುಖ್ಯವಾದ ಹೆಜ್ಜೆಯಾಗಿದೆ. ತುಷ್ಟೀಕರಣದ ರಾಜಕೀಯಕ್ಕಾಗಿ ವಿರೋಧ ಪಕ್ಷಗಳು ಈ ಮಸೂದೆಗೆ ಅಡ್ಡಿ ಪಡಿಸಿದ್ದವು. ಅಲ್ಲದೆ ಈ ಮೊದಲಿನ ವಕ್ಫ್ ಕಾಯ್ದೆಯನ್ನು ಸಂವಿಧಾನಕ್ಕಿಂತಲೂ ಹೆಚ್ಚಾಗಿ ಬಿಂಬಿಸಲಾಗುತ್ತಿತ್ತು ಎಂದು ಟೀಕಿಸಿದ್ದಾರೆ.
ಲೋಕಸಭೆಯಲ್ಲಿ ಸದ್ದು ಮಾಡಿತ್ತು, ರಾಜ್ಯ ವಕ್ಫ್ ಹಗರಣ..
ಕಳೆದ ಲೋಕಸಭೆ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ರಾಜ್ಯದ ವಕ್ಫ್ ಹಗರಣ ಸದ್ದು ಮಾಡಿತ್ತು. ರಾಜ್ಯದಲ್ಲಿನ ವಕ್ಫ್ ಬೋರ್ಡ್, ಆಸ್ತಿಗಳ ದುರುಪಯೋಗದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಪ್ರಸ್ತಾಪಿಸಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇನ್ನೂ ಪ್ರಮುಖವಾಗಿ 2012ರಲ್ಲಿನ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಭೂ ಹಗರಣ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ವಕ್ಫ್ ಮಂಡಳಿಗಳು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು, ಇದರಿಂದ ಭೂ ಕಬಳಿಕೆ ಮಾಡುತ್ತಿವೆ. ಇದಕ್ಕೆ ಕಡಿವಾಣ ತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆದಿದೆ. ಕರ್ನಾಟಕದ ಅನ್ವರ್ ಮಾನಪ್ಪಾಡಿ ಸಮಿತಿಯು ಸುಮಾರು 29,000 ಎಕರೆಗಳಷ್ಟು ವಕ್ಫ್ ಭೂಮಿಯನ್ನು ವಿದೇಶ ಮೂಲದ ಸಂಸ್ಥೆಗಳಿಗೆ ಗುತ್ತಿಗೆ ನೀಡಿದ್ದನ್ನು ಬಯಲಿಗೆ ತಂದಿತ್ತು. ಅಲ್ಲದೆ ಇದರಿಂದ ಬೊಕ್ಕಸಕ್ಕೆ ಹೆಚ್ಚಿನ ರೀತಿಯಲ್ಲಿ ಹಾನಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದರು.
ಅಲ್ಲದೆ ವಕ್ಫ್ ಬೋರ್ಡ್ ಒಡೆತನದ 500 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಪೈವ್ ಸ್ಟಾರ್ ಹೋಟೆಲ್‌ಗೆ ಮಾಸಿಕ12,000 ರೂಪಾಯಿಗಳಿಗೆ ಬಾಡಿಗೆಗೆ ನೀಡಲಾಗಿತ್ತು. ಇದೂ ಕೂಡ ವಕ್ಫ್ ಆಸ್ತಿಯ ದುರುಪಯೋಗಕ್ಕೆ ಕಾರಣವಾಗಿದೆ. ಇನ್ನೂ 2001 ಮತ್ತು 2012ರ ವೇಳೆಗೆ 2 ಲಕ್ಷ ಕೋಟಿ ರೂಪಾಯಿ ಬೆಲೆಯ ಆಸ್ತಿಗಳನ್ನು100 ವರ್ಷದ ಅವಧಿಗೆ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಅಲ್ಲದೆ ದೀರ್ಘಾವಧಿಯ ಕಂಟ್ರೋಲ್ ಹಾಗೂ ಈ ಆಸ್ತಿಗಳ ನ್ಯಾಯಸಮ್ಮತ ಬಳಕೆಯ ಕುರಿತು ಆ ಸಮಿತಿಯು ಕಳವಳವನ್ನು ವ್ಯಕ್ತಪಡಿಸಿತ್ತು ಎಂದು ಹೊಸ ಬಾಂಬ್ ಸ್ಪೋಟಿಸಿದ್ದರು
ಗ್ರಾಮಗಳನ್ನೇ ವಕ್ಫ್ ನುಂಗಿತ್ತು..
ಅಂದಹಾಗೆ 602 ಎಕರೆ ವಕ್ಫ್ ಭೂಮಿಯ ಅತಿಕ್ರಮಣ ತಡೆಯಲು ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆದಿದೆ. ಇನ್ನೂ ವಿಜಯಪುರ ಜಿಲ್ಲೆಯ ಹೊನವಾಡ, ಕೋಲ್ಹಾರ ಗ್ರಾಮಗಳಲ್ಲಿ ವಕ್ಫ್ ಮಂಡಳಿಯು ತನ್ನದೆಂದು ಹಕ್ಕನ್ನು ಮಂಡಿಸಿದ ನಂತರ 1,500 ಎಕರೆ ಭೂಪ್ರದೇಶವು ವಿವಾದಕ್ಕೆ ಒಳಗಾಗಿತು. ಬಳಿಕ ಇದು ಆ ಜನರ ಕಾನೂನು ಹಾಗೂ ಆಡಳಿತಾತ್ಮಕ ಘರ್ಷಣೆಗೆ ಕಾರಣವಾಗಿತ್ತು ಎಂದು ರಾಜ್ಯದ ವಕ್ಫ್ ವಿಚಾರವನ್ನು ಸದನದಲ್ಲಿ ಅಮಿತ್ ಶಾ ಬಯಲಿಗೆ ತಂದಿದ್ದರು. ಇನ್ನೂ ಚಿಕ್ಕಮಗಳೂರಿನ ದತ್ತಪೀಠಕ್ಕೆ ಸೇರಿದ ಜಮೀನಿನ ಮೇಲೆ ಕರ್ನಾಟಕ ವಕ್ಫ್ ಬೋರ್ಡ್ ಹಕ್ಕು ಮಂಡಿಸಿದ್ದರಿಂದ ಬಳಿಕ ಅದು ಕಾನೂನು ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿತ್ತು ಎಂದು ಹೇಳುವ ಮೂಲಕ ಗೃಹ ಸಚಿವ ಅಮಿತ್ ಶಾ ರಾಜ್ಯದ ವಕ್ಫ್ ಭೂ ಹಗರಣವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದರು.