Koppala News: ಕನಕಗಿರಿ ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಬೃಹತ್ ಪ್ರತಿಭಟನೆ

Koppala News: ಕನಕಗಿರಿ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಹಾಗೂ ಮಣ್ಣು ಸಾಗಣೆ, ಓಸಿ-ಮಟ್ಕಾ, ಇಸ್ಪೀಟ್ ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟದಂತಹ ಸಮಾಜಘಾತುಕ ಚಟುವಟಿಕೆಗಳನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಎಸ್. ಕಾದ್ರೊಳ್ಳಿ ಬಣ ಸಂಘಟನೆ ವತಿಯಿಂದ ಇಂದು ಕನಕಗಿರಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಜನಜಾಗೃತಿ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಅಕ್ರಮ ಚಟುವಟಿಕೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಪೊಲೀಸ್ ಇಲಾಖೆಯ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಸಹ ಪ್ರತಿಭಟನೆಯನ್ನು ವರದಿ ಮಾಡಿದರು.

ಪ್ರತಿಭಟನೆಯ ಆರಂಭದಲ್ಲಿ ಸಂಜುಮೂರ್ತಿ ಬೇನವನಿಗಿಡದ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕ್ರಾಂತಿಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಕನಕಪ್ಪ ಮ್ಯಾಗಡೆ ಅವರು ಮಾತನಾಡಿ, ಹೋರಾಟದ ಉದ್ದೇಶ ಹಾಗೂ ಗುರಿಗಳ ಕುರಿತು ವಿವರಿಸಿದರು. ಕನಕಗಿರಿ ತಾಲೂಕಿನಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದ ಸಮಾಜದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಗಮನ ಸೆಳೆದರು.

ನಂತರ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ನಿಂಗಪ್ಪ ಜಿ.ಎಸ್. ಬೆಣಕಲ್ ಅವರು ಮಾತನಾಡಿ, “ಕನಕಗಿರಿ ತಾಲೂಕಿನಲ್ಲಿನ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಬೇಕು. ಓಸಿ-ಮಟ್ಕಾ, ಇಸ್ಪೀಟ್ ಸೇರಿದಂತೆ ಅಕ್ರಮ ದಂಧೆಗಳಲ್ಲಿ ತೊಡಗಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದ ಶಾಂತಿ ಕದಡುವ ದಂಧೆಕೋರರನ್ನು ಗಡಿಪಾರು ಮಾಡುವ ಮೂಲಕ ಯುವಜನತೆಯನ್ನು ರಕ್ಷಿಸಬೇಕು” ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕರಿಯಪ್ಪ ಡಿ. ಮಣ್ಣಿನವರು ಮನವಿ ಪತ್ರವನ್ನು ವಾಚಿಸಿದರು.

ಪ್ರತಿಭಟನೆಯ ಕೊನೆಯಲ್ಲಿ ಮಾನ್ಯ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿ ಸಂಘಟನೆಯ ಮನವಿ ಪತ್ರವನ್ನು ಸ್ವೀಕರಿಸಿದರು. ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ವಿವಿಧ ಹಂತದ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಪತ್ರಿಕಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

About The Author