ಬರಿದಾದ ಕೃಷ್ಣೆಯ ಒಡಲು..! ನೀರಿಗಾಗಿ ಜನರ ಆಹಾಕಾರ?

ಯಾದಗಿರಿ ಜನರ ಜೀವನಾಡಿಯಾಗಿದ್ದ ಕೃಷ್ಣಾ ನದಿ, ಬಿಸಿಲಿನ ಬೇಗೆಗೆ ಬತ್ತಿ ಹೋಗಿದೆ. ಜಿಲ್ಲೆಯಲ್ಲಿ ತುಂಬು ತುಳುಕುತ್ತಿದ್ದ ಕೃಷ್ಣಾ ನದಿಯಲ್ಲಿ ಕಣ್ಣೀರು ಬಿದ್ದರೂ ಬತ್ತುವಂತ ಸ್ಥಿತಿ ತಲುಪಿದೆ. ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಬಳಿಯಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾದ ಮೌನೇಶ್ವರ ದೇವಸ್ಥಾನ ಪ್ರತೀ ವರ್ಷ ಸಾವಿರಾರು ಭಕ್ತರು ಇಲ್ಲಿ ಬಂದು ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಬಳಿಕ ದೇವರ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ದೃಶ್ಯ ಸಂಪೂರ್ಣ ಬದಲಾಗಿದೆ.

ಒಂದು ಕಾಲದಲ್ಲಿ ಅಪಾಯದ ಮಟ್ಟ ಮೀರಿ ಹರಿದ ನದಿಯಲ್ಲಿ ಈಗ ಒಂದು ಹನಿಯೂ ಕಾಣದಂತಾಗಿದೆ. ನದಿ ತೀರ ಸಂಪೂರ್ಣ ಒಣಗಿ ಹೋಗಿರುವುದರಿಂದ ಭಕ್ತರು ಸ್ನಾನಕ್ಕೂ ನೀರು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆಯಿಂದ ಕೇವಲ ಜನರಷ್ಟೇ ಅಲ್ಲ, ಪ್ರಕೃತಿಯೂ ಸಂಕಷ್ಟಕ್ಕೆ ಸಿಲುಕಿದೆ. ಮೀನುಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಪಕ್ಷಿಗಳಿಗೆ ಆಹಾರ ಸಿಗುತ್ತಿಲ್ಲ. ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪ್ರವಾಹದ ಭೀತಿ ಕಂಡಿದ್ದ ಕೃಷ್ಣಾನದಿ ಬರಿದಾಗಿ ನಿಂತಿದೆ. ಎಂಬ ಮಾತು ಇದೀಗ ಸ್ಥಳೀಯರ ನೋವಿನ ಧ್ವನಿಯಾಗಿದೆ. ತಕ್ಷಣವೇ ನದಿಗೆ ನೀರು ಹರಿಸುವಂತೆ ಗ್ರಾಮಸ್ಥರು ಮತ್ತು ಭಕ್ತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

About The Author