ನವಿಲುಗಳ ಸರಣಿ ಸಾವು: ಸನ್‌ ಸ್ಟ್ರೋಕಾ ? ಸೋಂಕಿನ ಹಾವಳಿನಾ?

ತುಮಕೂರು ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಆತಂಕಕಾರಿ ತಿರುವು ಪಡೆದುಕೊಂಡಿದೆ. ಜಿಲ್ಲೆಯ ಹೊರವಲಯದ ಗೂಳರಿವೆ ಸಮೀಪದ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಮತ್ತೆ ಎರಡು ನವಿಲುಗಳ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ನವಿಲುಗಳ ಸಾವಿನ ಸರಣಿ ನಿಲ್ಲದೇ ಮುಂದುವರಿದಿದೆ. ಈಗಾಗಲೇ ವಿವಿಧ ಗ್ರಾಮಗಳಲ್ಲಿ 40ಕ್ಕೂ ಹೆಚ್ಚು ನವಿಲುಗಳು ಸಾವನ್ನಪ್ಪಿದ್ದು, ಈ ಘಟನೆ ಅರಣ್ಯ ಮತ್ತು ಪಶುಸಂಗೋಪನಾ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಏಪ್ರಿಲ್ 16ರಿಂದ 21ರ ನಡುವೆ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಭಾಗಗಳಲ್ಲಿ ಡಜನ್‌ಗಟ್ಟಲೆ ನವಿಲುಗಳು ಮೃತಪಟ್ಟಿದ್ದವು. ಆರಂಭದಲ್ಲಿ ಭಾರೀ ಬಿಸಿಲು ಮತ್ತು ಹೀಟ್ ಸ್ಟ್ರೋಕ್ ಕಾರಣ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ಬಳಿಕ ಪರೀಕ್ಷೆಗೆ ಕಳುಹಿಸಿದ್ದ ಮಾದರಿಗಳಲ್ಲಿ H5N1 ವೈರಸ್, ಅಂದರೆ Bird Flu ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ ಎರಡು ನವಿಲುಗಳ ಸಾವನ್ನಪ್ಪಿವೆ. ಸದ್ಯ ಮೃತಪಟ್ಟ ನವಿಲುಗಳ ಅಂಗಾಂಶಗಳನ್ನು ಲ್ಯಾಬ್ ಪರೀಕ್ಷೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ತುಮಕೂರಿನಲ್ಲಿ ನವಿಲುಗಳ ಸಾವಿನ ಸರಣಿ ಈಗ ಸಾಮಾನ್ಯ ಘಟನೆ ಅಲ್ಲ, ಇದು ಪರಿಸರ ಮತ್ತು ವನ್ಯಜೀವಿ ವಲಯದಲ್ಲಿ ದೊಡ್ಡ ಎಚ್ಚರಿಕೆಯ ಗಂಟೆ ಎಂಬ ಚರ್ಚೆ ಶುರುವಾಗಿದೆ.

About The Author