Tuesday, October 14, 2025

Latest Posts

ತಾರಕಕ್ಕೆರಿದ ಕುಮಾರಣ್ಣ‌, ಚಲುವಣ್ಣ ಟಾಕ್‌ ಫೈಟ್ : ಜನರೆದುರು ಇಬ್ಬರೂ ಆದ್ರು ಜೋಕರ್..!‌

- Advertisement -

Political News: ಕೇಂದ್ರ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನಡುವಿನ ಟಾಕ್‌ ಫೈಟ್‌ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇನ್ನೂ ಮತ್ತೊಮ್ಮೆ ಕೈ ಸಚಿವರ ವಿರುದ್ಧ ಅಬ್ಬರಿಸಿರುವ ಕುಮಾರಸ್ವಾಮಿ, ಕಾಂಗ್ರೆಸ್‌ ಪಕ್ಷದಿಂದ ಜೋಕರ್‌ ಸಂಸ್ಕೃತಿ ಪ್ರಾರಂಭವಾಗಿದೆ ಎನ್ನುವುದನ್ನು ಸಚಿವ ಚಲುವರಾಯಸ್ವಾಮಿ ಮರೆಯಬಾರದು. ಇದಕ್ಕೂ ಮೊದಲು ಅವರು ಎಲ್ಲಿದ್ದರು..? ಅದರ ಬಳಿಕ ಎಲ್ಲೆಲ್ಲಿಗೆ ಹೋದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಲ್ಲದೆ ನೂರಕ್ಕೆ ನೂರರಷ್ಟು ಅವರೊಬ್ಬ ಜೋಕರ್‌ ಎಂದು ಲೇವಡಿ ಮಾಡಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಆತ ನನ್ನನ್ನು ಮುಖ್ಯಮಂತ್ರಿ ಮಾಡಿದ ಎನ್ನುವುದು ಇದೊಂದು ದೊಡ್ಡ ಜೋಕ್‌, ಬದಲಿಗೆ ನನ್ನ ಸಿಎಂ ಮಾಡಿದ್ದು ಶಾಸಕರು. ಅಲ್ಲದೆ ಚಲುವರಾಯಸ್ವಾಮಿಯನ್ನು ಸಚಿವರನ್ನಾಗಿ ಮಾಡಲು ಶ್ರಮ ಪಟ್ಟಿದ್ದಕ್ಕೆ ನನಗೆ ಪಶ್ಚಾತ್ತಾಪವಿದೆ. ಅಂದಹಾಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ಚಲುವರಾಯಸ್ವಾಮಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ.

ಮಂತ್ರಿಯಾಗುವುದಕ್ಕಾಗಿ ನನಗೆ ಬೆಳಗಿನ ಜಾವ ಮೂರು ಗಂಟೆವರೆಗೆ ನಿದ್ದೆ ಮಾಡಲು ಬಿಟ್ಟಿಲ್ಲ ಆ ಆಸಾಮಿ. ಆತನನ್ನು ಮಂತ್ರಿ ಮಾಡಲು 50 ಜನ ಶಾಸಕರನ್ನು ಸೇರಿಸಿದ್ದೆ. ನಾನು ಪಟ್ಟಿರುವ ಶ್ರಮವನ್ನು ಅವರು ಮರೆಯೋದು ಬೇಡ. ಈ ವಿಷಯವಾಗಿ ನಾನು ಎಲ್ಲಿ ಬೇಕಾದರೂ ಆಣೆ- ಪ್ರಮಾಣ ಮಾಡಲು ಸಿದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಚಲುವರಾಯಸ್ವಾಮಿಗೆ ಇರುವ ಚಟ ನನಗಿಲ್ಲ..!

ಇನ್ನೂ ಚಲುವರಾಯಸ್ವಾಮಿಗೆ ಇರುವ ಚಟಗಳು ನನಗಿಲ್ಲ. ಅವರಿಗಿರುವ ಚಟಗಳ ಬಗ್ಗೆ ಮಂಡ್ಯದಲ್ಲಿ ಕೇಳಿದರೆ ಹಾದಿ ಬೀದಿಯಲ್ಲಿ ಜನ ಹೇಳುತ್ತಾರೆ. ಚಲುವರಾಯಸ್ವಾಮಿಯಿಂದ ಎಷ್ಟು ಮನೆ ಹಾಳಾಗಿವೆ ಎನ್ನುವುದೂ ಗೊತ್ತಿದೆ. ಚಟಗಳ ಬಗ್ಗೆ ಚರ್ಚೆ ಮಾಡೋದು ಬೇಡ, ಅದು ಕೀಳುಮಟ್ಟದ ಅಭಿರುಚಿಯಾಗುತ್ತದೆ. ನಾನು ರಾಜಕೀಯದಲ್ಲಿ ದುಡ್ಡು ಮಾಡಬೇಕೆಂದು ಎಂದೂ ಆಸೆಪಟ್ಟವನಲ್ಲ. ಬದಲಿಗೆ ಜನರ ನಡುವೆ ಇದ್ದು 24 ಗಂಟೆ ಕೆಲಸ ಮಾಡಿದ್ದೇನೆ. ಜನತಾ ದರ್ಶನ, ಗ್ರಾಮ ವಾಸ್ತವ್ಯದಲ್ಲಿ ಬೆಳಗಿನ ಜಾವದವರೆಗೆ ಕೆಲಸ ಮಾಡಿದ್ದೇನೆ. ಇದು ನನ್ನ ವೈಯಕ್ತಿಕ ಸಮಸ್ಯೆ. ಎಲ್ಲವನ್ನೂ ದೇವರು ನೋಡುತ್ತಾನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇದೇ ವೇಳೆ ಸ್ವ ಚರಿತ್ರೆ ಬಗ್ಗೆ ಚಲುವರಾಯಸ್ವಾಮಿ ಬಹಿರಂಗ ಚರ್ಚೆಗೆ ಆಹ್ವಾನದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವ ಚರಿತ್ರೆ ಬಗ್ಗೆ ಚರ್ಚೆ ಮಾಡೋದು ಮುಖ್ಯವೋ? ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ಮುಖ್ಯವೋ? ಪ್ರತಿಯೊಬ್ಬ ಮನುಷ್ಯ ಕೆಲವರ ಜೊತೆ ಇದ್ದಾಗ ಹಲವಾರು ಸಮಸ್ಯೆಗಳನ್ನು ಮಾಡಿಕೊಳ್ಳುತ್ತೇವೆ. ಯಾವ ಮನುಷ್ಯನೂ ಪರಿಶುದ್ಧ ಅಲ್ಲ. ತಪ್ಪನ್ನು ಸರಿಪಡಿಸಿಕೊಳ್ಳಲು ಭಗವಂತ ಅವಕಾಶ ಕೊಡುತ್ತಾನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಹುಟ್ಟುತ್ತಲೇ ಶ್ರೀಮಂತರಾ..?

ಅಲ್ಲದೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರ ಆರೋಪಗಳಿಗೆ ಹಾಗೂ ಟೀಕೆಗಳಿಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಸಚಿವ ಚೆಲುವರಾಯಸ್ವಾಮಿ, ರಾತ್ರಿ ನನಗೆ ಮಾಂಸಾಹಾರ ತಿನ್ನುವ ಹೆಚ್ಚಿನ ಅಭ್ಯಾಸವಿಲ್ಲ. ಅಲ್ಲದೆ ಬೇರೆ ಅಭ್ಯಾಸ ಹೆಚ್ಚಾಗಿ ಯಾರಿಗಿದೆ ಎನ್ನುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ಒಬ್ಬರೇ ಇರುತ್ತಾರೆ ಎನ್ನುವ ಕಾರಣಕ್ಕೆ ಕೆಲವೊಂದು ಸಲ ನಾವು ಒಟ್ಟಿಗೆ ಇರುತ್ತಿದ್ದೆವು. ಇದಾದ ಬಳಿಕ ನಾವು ಹೆಂಡತಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಲು ಮನೆಗೆ 8 ಗಂಟೆಗೆ ಹೋಗ್ತಾ ಇದ್ವಿ.

ಆದರೆ ಕುಮಾರಸ್ವಾಮಿ ಅವರು ನಿದ್ದೆ ಮಾಡದೆ, ವೈಯಕ್ತಿಕ ಸಮಸ್ಯೆಗಳಿಂದ ಮನೆಗೆ 8 ಗಂಟೆಯಾದ್ರೂ ಹೋಗ್ತಾ ಇರ್ಲಿಲ್ಲ ಎಂದು ಕುಟುಕಿದ್ದಾರೆ. ಇನ್ನೂ ಈ ವೇಳೆ ಅವರೊಬ್ಬರೇ ಇರುತ್ತಾರಲ್ಲ ಎಂಬ ಕಾರಣಕ್ಕಾಗಿ ಅವರೊಟ್ಟಿಗೆ ಕುಳಿತುಕೊಳ್ಳುತ್ತಿದ್ದೇವು. ಅಲ್ಲದೆ ಅವರು ಮನೆಗೆ ಯಾಕೆ ಹೋಗುತ್ತಿರಲಿಲ್ಲ ನೀವೇ ಕೇಳಿ, ಈ ಬಗ್ಗೆ ಹೇಳುವುದಕ್ಕೆ ಬೇಕಾದಷ್ಟಿದೆ ಎಂದು ಚಲುವರಾಯಸ್ವಾಮಿ ದಳಪತಿ ವಿರುದ್ಧ ಕಿಡಿ ಕಾರಿದ್ದಾರೆ. ಇನ್ನೂ ಭೂಕಬಳಿಕೆ, ದುಡ್ಡು ಹೊಡೆದುಕೊಂಡಿದ್ದಾರೆ ಎನ್ನುವ ಕುಮಾರಸ್ವಾಮಿ ಅವರು ಹುಟ್ಟುತ್ತಲೇ ಶ್ರೀಮಂತರಾ..? ಅಲ್ಲದೆ 15 ಎಕರೆಯನ್ನು ಹೆಚ್ಚುವರಿ ಮಾಡಿಕೊಂಡಿದ್ದಾರಲ್ಲಾ ಅದಕ್ಕೆ ಯಾರು ಹೊಣೆ..? ಎಂದು ಚಲವರಾಯಸ್ವಾಮಿ ಕುಮಾರಸ್ವಾಮಿಯವರನ್ನು ಪ್ರಶ್ನಿ ಸಿದ್ದಾರೆ.

ಧರ್ಮಸ್ಥಳದಲ್ಲಿ ಆಣೆ ಮಾಡ್ತಾರಾ..?

ಇನ್ನೂ ರಮ್ಮಿ ಆಟದಲ್ಲಿ ಜೋಕರ್‌ ಅನ್ನು ಯಾವುದಕ್ಕಾದರೂ ಸೇರಿಸಬಹುದು, ಹಾಗೆಯೇ ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಹೋಗುವ ಕುಮಾರಸ್ವಾಮಿ ಜೋಕರಾ? ಅಥವಾ ನಾನು ಜೋಕರಾ? ಆದ್ದರಿಂದ ಆ ಪದಕ್ಕೆ ಅವರೇ ಸೂಕ್ತ ಎನ್ನುವ ಮೂಲಕ ಹೆಚ್.ಡಿ.ಕೆ ಜೋಕರ್‌ ಮಾತಿಗೆ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ಮಂಡ್ಯಕ್ಕೆ ಐಐಟಿ ತರಲು ಅವರು ಪತ್ರ ಬರೆದಿದ್ದಾರಾ? ಅವರ ತಂದೆ ಪ್ರಧಾನ ಮಂತ್ರಿಯಾಗಿದ್ದವರು, ನನ್ನ ತಂದೆ ರೈತ. ಅಲ್ಲದೆ ನಾನು ಜಿಲ್ಲಾ ಪಂಚಾಯತ್‌ ಸದಸ್ಯನಾಗಿದ್ದಾಗಿನಿಂದಲೂ ಜನರ ಸಂಕಷ್ಟ ಅರಿತಿದ್ದೇನೆ.

ಇನ್ನೂ ಅವರು ನನ್ನ ಮಂತ್ರಿ ಮಾಡಿದ್ದೇನೆ ಅಂತ ಹೇಳುವುದಾದರೆ, ನಾನು ಅವರನ್ನು ಸಿಎಂ ಮಾಡಿದ್ದೇನೆ ಎನ್ನುವುದರಲ್ಲಿ ತಪ್ಪಿಲ್ಲ ಎಂದು ಟಾಂಗ್‌ ನೀಡಿದ್ದಾರೆ. ಅಲ್ಲದೆ ಕುಮಾರಸ್ವಾಮಿಯಿಂದ ರಾಜಕಾರಣ ಕಲಿಯುವ ಅವಶ್ಯಕತೆ ನನಗೆ ಇಲ್ಲ, ಅವರನ್ನು ನಾಯಕರನ್ನಾಗಿ ಮಾಡಲು ನಾವು ಸಾಥ್‌ ಕೊಟ್ಟಾ..? ಇಲ್ವಾ ಎನ್ನುವುದಕ್ಕೆ ಧರ್ಮಸ್ಥಳದಲ್ಲಿ ಬಂದು ಆಣೆ ಪ್ರಮಾಣ ಮಾಡುತ್ತಾರಾ ಎಂದು ಸವಾಲು ಹಾಕಿದ್ದಾರೆ.

- Advertisement -

Latest Posts

Don't Miss