ಕೊಪ್ಪಳ: ರಾಜ್ಯದ ಜನರು ನೆರೆ, ಬರ ಇನ್ನಿತರೆ ಕಷರಗಲ್ಲಿ ಇದ್ದಾಗ ಬಾರದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ಬಂದು ರೋಡ್ ಶೋ ಮಾಡಿ ಕೈಬೀಸಿ ಹೋಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.
ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಚುನಾವಣೆ ಬಂದಿದೆ. ಬಿಜೆಪಿಯ ದೆಹಲಿ ನಾಯಕರು ರಾಜ್ಯಕ್ಕೆ ಲಗ್ಗೆ ಇಡ್ತಿದ್ದಾರೆ. ಇವರು ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಅವರು ಬರಬೇಕಾಗಿತ್ತು. ಇವಾಗ ಬಂದು ಮೋದಿಯವರು ರೋಡ್ ಶೋ ಮೂಲಕ ಜನರತ್ತ ಕೈ ಬೀಸುತ್ತಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ಕಲ್ಯಾಣಕ ಕರ್ನಾಟಕಕ್ಕೆ ಬಿಜೆಪಿಯ ಕೊಡುಗೆ ಏನು? ಕೃಷ್ಣಾ ನ್ಯಾಯಧಿಕರಣದ ತೀರ್ಪು ಬಂದು ಹತ್ತು ವರ್ಷ ಆಯಿತು. ಈ ಭಾಗಕ್ಕೆ, ಮುಖ್ಯವಾಗಿ ನೀರಾವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಏನು ಮಾಡಿವೆ? ಜೆಡಿಎಸ್, ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡಿವೆ ಅಂತಾರೆ ಮೋದಿ ಅವರು. ಹಾಗಾದರೆ, ಅವರು ರೈತರಿಗೆ ಎನ್ ಮಾಡಿದ್ದಾರೆ ಎಂದು ಹೇಳಬೇಕಲ್ಲವೆ? ಅವರ ಫಸಲ್ ಭಿಮಾ ಯೋಜನೆಯ ಪ್ರೀಮಿಯಂ ಹಣವನ್ನೆ ಕೊಡಲಿಲ್ಲ. ಆ ಯೋಜನೆ ಮೋಸದ ಬಗ್ಗೆ ಇಡೀ ದೇಶದ ಉದ್ದಗಲಕ್ಕೂ ಚರ್ಚೆ ಆಗ್ತಿದೆ. ಇದಕ್ಕೆ ಮೋದಿ ಉತ್ತರ ಏನು ಎಂದು ಅವರು ಕೇಳಿದರು.
ಇಷ್ಟು ದಿನ ಏನನ್ನೂ ಮಾಡದವರು ಈಗ ಬಂದು ನಲ್ಲಿಯಲ್ಲಿ ನೀರು ಕೊಡ್ತಿನಿ ಅಂತ ಮೋದಿ ಹೇಳ್ತಾ ಇದ್ದಾರೆ. ಯಾವ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯಶಸ್ವಿಯಾಗಿದೆ?
ಹಣ ಕೆಲವರ ಕಿಸಿಗೆ ಹರಿದಿದೆಯೇ ಹೊರತು ನೀರು ಹರಿದಿಲ್ಲ.
ಇದರಲ್ಲಿ ಸಂಬಂಧ ಪಟ್ಟ ಮಂತ್ರಿಗಳು ಸಂಪದ್ಭರತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಜರಂಗ ದಳ ಬ್ಯಾನ್ ಮಾಡಿ ಎನ್ ಮಾಡ್ತಾರೆ?:
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧ ಮಾಡಲಾಗುವುದು ಎಂದು ಘೋಷಣೆ ಮಾಡಿದೆ. ಬ್ಯಾನ್ ಮಾಡಿದ್ರೆ ಸಮಸ್ಯೆಗೆ ಪರಿಹಾರ ಆಗುತ್ತಾ? ಎರಡೂ ಪಕ್ಷಗಳು ಈ ಬಗ್ಗೆ ಯೋಚನೆ ಮಾಡಬೇಕು ಎಂದು ಅವರು ಟಾಂಗ್ ಕೊಟ್ಟರು.
ಬಜರಂಗದಳದಲ್ಲಿ ಅಮಯಾಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರ ಮನಸ್ಸು ಕೆಡಿಸಿ ಹಾಳು ಮಾಡಲಾಗುತ್ತಿದೆ. ಅವರ ತಲೆಯಲ್ಲಿ ಏನೆನೋ ತುಂಬಿ ಅವರನ್ನ ಹಾಳು ಮಾಡ್ತಿದ್ದಾರೆ. ಅಮಾಯಕರನ್ನು ಚಿತಾವಣೆ ಮಾಡೋರನ್ನು ಮೊದಲು ಮಟ್ಟಹಾಕಬೇಕು. ಅದು ಬಿಟ್ಟು ಬ್ಯಾನ್ ಮಾಡ್ತಿನಿ ಅಂದ್ರೆ ಉಪಯೋಗ ಏನು? ಕಾಂಗ್ರೆಸ್ ನವರು ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಇವರು ಯಾಕೆ ಬ್ಯಾನ್ ಮಾಡಲಿಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.
ಸಿದ್ದಾಂತ ಎಂದ ಮೋದಿಗೆ ಟಾಂಗ್:
ಮೋದಿಯವರು ನಮ್ಮನ್ನು ಟೀಕೆ ಮಾಡ್ತಿದ್ದಾರೆ. ನಮಗೆ ಸಿದ್ದಾಂತ ಇಲ್ಲ ಎನ್ನುತ್ತಿದ್ದಾರೆ. ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಸಿದ್ದಾಂತ ಸರಿಯಾಗುತ್ತದಾ? ಕಾಂಗ್ರೆಸ್ ಜತೆ ಹೊದರೆ ಸೈದ್ದಾಂತಿಕತೆ ಸರಿ ಇರಲ್ವಾ? ಎಂದು ಪ್ರಧಾನಿಗೆ ತಿರುಗೇಟು ಕೊಟ್ಟರು ಮಾಜಿ ಮುಖ್ಯಮಂತ್ರಿ ಅವರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಅತೀ ಹೆಚ್ಚು ಕೊಡುಗೆ ಕೊಟ್ಟವನು ನಾನು. ಸಾಲ ಮನ್ನಾ ಮಾಡಿ ರೈತರ ಜೀವ ಉಳಿಸಿದ್ದು ನಾನು. ಅದನ್ನು ಮೋದಿ ಮಾಡಿದ್ರಾ? ಮೋದಿಯವರ ವರ್ಚಸ್ಸು ಕಡಿಮೆಯಾಗಿದೆ. ಅವರ ಪ್ರಚಾರ ಈ ಸಲ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. 9 ವರ್ಷ ಆಯಿತಲ್ಲಾ, ಅವರ ವರ್ಚಸ್ಸು ಕೂಡ ಕಡಿಮೆಯಾಗಿದೆ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ರಾಜ್ಯದಲ್ಲಿ ಮೋದಿ ಪ್ರಚಾರದಿಂದ ನಮಗೆ ಜೋಶ್ ಬಂದಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಅವರು ಹಾಗೇ ಹೇಳಲೇಬೇಕು. ಅವರಿಗೆ ಬೇರ ಗತಿಯಲ್ಲ, ಮೋದಿ ಮುಖ ತೊರಿಸಿ ವೋಟ್ ಕೇಳ್ತಿದ್ದಾರೆ. ಬೊಮ್ಮಾಯಿ ಮುಖ ತೊರಿಸಿ ವೋಟ್ ಕೇಳಗಾಗುತ್ತಾ? ಅವರು ಏನ್ ಶ್ರಮ ಹಾಕಿದರೂ ಹಳೆ ಮೈಸೂರು ಭಾಗದಲ್ಲಿ 10 ಸೀಟ್ ಗೆಲ್ಲಲ್ಲ. ಹೋದ ಬಾರಿ ಗೆದ್ದ ಕ್ಷೇತ್ರಗಳು ಕೂಡಾ ಬಿಜೆಪಿ ಕಳೆದುಕೊಳ್ಳುತ್ತೆ. ಶಿವಮೊಗ್ಗದವರೆಗೂ ಬಿಜೆಪಿ ಎಷ್ಟು ಗಳಿಸುತ್ತೆ ಎನ್ನುವುದನ್ನು ನೋಡಿ. ಈ ಭಾರಿ ನಂಜನಗೂಡು, ಗುಂಡ್ಲಪೇಟೆ, ಮಡಿಕೇರಿಯಲ್ಲಿ ಕೂಡ ಬಿಜೆಪಿ ಗೆಲ್ಲಲ್ಲ ಎಂದು ಹೇಳಿದರು ಕುಮಾರಸ್ವಾಮಿ ಅವರು.
ಚನ್ನಪಟ್ಟಣದಲ್ಲಿ ಮೋದಿ ಪ್ರಚಾರ ಮಾಡಿದ್ದಾರೆ. ಅದರಿಂದ ಏನಾಯ್ತು? ಅವರು ಬಂದರು ಹೋದರು. ನಾನು ಇನ್ನು ಚನ್ನಪಟ್ಟಣಕ್ಕೆ ಹೋಗಿಲ್ಲ. ಅಲ್ಲಿನ ಜನ ಮಕ್ಕಳಂತೆ ನಮ್ಮನ್ನು ಸಲಹಿದ್ದಾರೆ. ಇವರು ಬಂದು ದೂರದ ಬೆಟ್ಟ ತೋರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು ಅವರು.
ಸಿದ್ದರಾಮಯ್ಯಗೆ ತಿರುಗೇಟು:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಬಗ್ಗೆ ಮಾತನಾಡುತ್ತಲೇ ಇದ್ದರೆ. ನಾವು ಗೆದ್ದೆತ್ತಿನ ಬಾಲ ಹಿಡಿತಿವಿ ಅಂತಾರೆ ಅವರು. ಸಿದ್ದರಾಮಯ್ಯ ಯಾಕೆ ಸೋತೆತ್ತಿನ ಬಾಲ ಹಿಡಿದುಕೊಂಡು ಬರ್ತಾರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
‘ರಾಜ್ಯದಲ್ಲಿ ಶಾಂತಿಯನ್ನು ಕದಡಿಸುತ್ತಿದ್ದಾರೆ. ನಾವು ಶಾಂತಿ ಮೂಡಿಸಬೇಕಾಗಿದೆ’
‘ಅಯೋಧ್ಯೆಯಲ್ಲಿ ರಾಮ ಮಂದಿರ, ಅಂಜನಾದ್ರಿಯಲ್ಲಿ ಹನುಮ ಮಂದಿರ ನಿರ್ಮಾಣ ನಮ್ಮ ಧ್ಯೇಯ’