Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, ಹತ್ತು ಸುಗ್ರೀವಾಜ್ಞೆ ಜಾರಿಗೆ ತಂದರೂ ಫೈನಾನ್ಸ್ ಕಿರುಕುಳ ತಪ್ಪಿಸೋಕೆ ಆಗಲ್ಲ. ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಅದರಿಂದಾಗಿಯೇ ಕಿರುಕುಳ ಮತ್ತಷ್ಟು ಹೆಚ್ಚಳವಾಗಿದೆ. ಸರ್ಕಾರ ಕಾನೂನು ಮಾಡೋದ್ರಿಂದ ಮೈಕ್ರೋ ಫೈನಾನ್ಸ್ ಮೇಲೆ ನಿಗಾ ಮಾಡಲು ಆಗಲ್ಲ. ಬಡ, ಮಧ್ಯಮ ವರ್ಗದವರಿಗೆ ಸುಲಭವಾಗಿ ಸಾಲ ಸಿಗುವ ವ್ಯವಸ್ಥೆ ಇದಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳನ್ನು ಪರಿಣಾಮಕಾರಿ ಜಾರಿಗೆ ತರಬೇಕು. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವಂತಾಗಬೇಕು. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಟ್ಟರೆ ಮೈಕ್ರೋ ಫೈನಾನ್ಸ್ ಮತ್ತು ಖಾಸಗಿ ಲೇವಾದೇವಿದಾರರ ಅಡ್ರೆಸ್ಸೇ ಇರಲ್ಲ. ಸರ್ಕಾರ ಕಠಿಣ ಕ್ರಮ ಕೈಗೊಂಡಷ್ಟು ಬಡವರಿಗೆ ಸಾಲ ಸಿಗದಂತಾಗುತ್ತದೆ. ಬಡವರು ಬೀದಿಗೆ ಬಿದ್ದು, ಆತ್ಮಹತ್ಯೆಗಳು ಮತ್ತೆ ಹೆಚ್ಚಾಗುತ್ತೆ. ಸಾಲ ಸುಲುಭವಾಗಿ ಸಿಗುವಂತಹ ಪರ್ಯಾಯ ವ್ಯವಸ್ಥೆ ತರಬೇಕು. ಇರೋ ಕಾನೂನನ್ನೇ ಜಾರಿಗೆ ತಂದರೆ ಸಾಕು. ಪೊಲೀಸ್ ವ್ಯವಸ್ಥೆ ಮತ್ತು ಖಾಸಗಿ ಲೇವಾದೇವಿದಾರರ ನಡುವೆ ಒಳ ಒಪ್ಪಂದವಿದೆ ಎಂದು ಶೆಟ್ಟರ್ ಆರೋಪಿಸಿದ್ದಾರೆ.
ಇದ್ದಂತಹ ಕಾನೂನಿನಲ್ಲಿ ಮನಿಲೆಂಡರ್ಸ್ ನ್ನು ಬಂಧಿಸಬಹುದು. ಹತ್ತು ಸುಗ್ರೀವಾಜ್ಞೆ ಜಾರಿಗೆ ತಂದರೂ ಪ್ರಯೋಜನವಿಲ್ಲ. ಹಲವೆಡೆ ಆತ್ಮಹತ್ಯೆಗಳು ಮುಂದುವರೆದಿದೆ. ಸರ್ಕಾರ ಯಾವ ಅಧಿಕಾರಿ ಮೇಲೆ ಕ್ರಮ ಕೈಗೊಂಡಿದೆ..? ಮುಖ್ಯಮಂತ್ರಿ ಹೇಳಿದರು ಕಾನೂನು ಜಾರಿಗೆ ಬರ್ತಿಲ್ಲ. ಕಾನೂನು ಜಾರಿಗಿ ತರದ ಅಧಿಕಾರಿಗಳನ್ನು ಹೊಣೆ ಮಾಡಿ. ಒಬ್ಬ ಅಧಿಕಾರಿಯನ್ನಾದರೂ ಹೊಣೆ ಮಾಡಿ. ಸಿಎಂ ಅವರದ್ದು ಖಡಕ್ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಜಗದೀಶ್ ಶೆಟ್ಟರ್ ಬೇಸರ ಹೊರಹಾಕಿದ್ದಾರೆ.
ಇನ್ನು ಸಂತೋಷ್ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರ ವಿರುದ್ಧವಾಗಿ ಶೆಟ್ಟರ್ ವಾಗ್ದಾಳಿ ನಡೆಸಿದ್ದು, ಲಾಡ್ ಅವರೇ ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ನಂತರ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿ ಎಂದಿದ್ದಾರೆ. ನಿನ್ನೆ ಸಂತೋಷ್ ಲಾಡ್, ಮೋದಿಯವರನ್ನು ಬದಲಾಯಿಸುವ ಚರ್ಚೆ ನಡೆದಿದೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಶೆಟ್ಟರ್,
ಪ್ರಧಾನಿ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ. ಕಾಂಗ್ರೆಸ್ ನವರಿಗೆ ಮುಸ್ಲಿಂ, ಅಲ್ಪಸಂಖ್ಯಾತರನ್ನು ಬಿಟ್ರೆ ಬೇರೆ ಗೊತ್ತಿಲ್ಲ. ದೆಹಲಿಯ ಎಕ್ಸಿಟ್ ಪೋಲ್ ಏನಾಗಿದೆ ಅಂತ ಎಲ್ಲರಿಗೂ ಗೊತ್ತು. ದೆಹಲಿಯಲ್ಲಿ ಕಾಂಗ್ರೆಸ್ ಗೆ ಒಂದು ಅಥವಾ ಎರಡು ಸೀಟು ಬಂದರೆ ದೊಡ್ಡ ಮಾತು. ಮೋದಿ ಬದಲಾವಣೆಯ ಬಗ್ಗೆ ನೀವು. ಮಾತನಾಡುತ್ತಿದ್ದೀರಿ ನೀವು ಮೊದಲು ರಾಹುಲ್ ಗಾಂಧಿಯನ್ನು ಬದಲಾಯಿಸಿ. ಆಗಲಾದರೂ ಕಾಂಗ್ರೆಸ್ ಸುಧಾರಿಸುತ್ತೆ. ಮೋದಿ ಯಂತಹ ದೊಡ್ಡ ವ್ಯಕ್ತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುವುದು ಸರಿಯಲ್ಲ. ಮೋದಿ ಬದಲಾವಣೆ ಬಗ್ಗೆ ಯಾರು ಮಾತನಾಡಿದ್ದಾರೆ ಅಂತ ಬಹಿರಂಗಪಡಿಸಲಿ. ಎಲ್ಲಿ ಚರ್ಚೆ ನಡೆದಿದೆ ಅಂತ ಬಹಿರಂಗವಾಗಿ ಹೇಳಲಿ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರವಾಗಿ ಲಿಂಗಾಯತರು ಪ್ರತ್ಯೇಕ ಸಭೆ ಮಾಡಿಲ್ಲ. ವೈಯಕ್ತಿಕ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಯತ್ನಾಳ್ ಮತ್ತಿತರರು ನೀಡಿರೋ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಈಗಾಗಲೇ ರಾಜ್ಯಧ್ಯಕ್ಷ ಸ್ಥಾನದಲ್ಲಿ ಒಬ್ಬರು ಇದ್ದಾರೆ. ಈಗ ಚುನಾವಣೆಯೂ ಬಂದಿದೆ. ಯಾರನ್ನು ನೇಮಕ ಮಾಡಬೇಕು. ಯಾರನ್ನು ಬೇಡ ಅನ್ನೋದರ ಬಗ್ಗೆ ಹೈಕಮಾಂಡ್ ಸರ್ವಾನುಮತದ ನಿರ್ಣಯ ಕೈಗೊಳ್ಳುತ್ತಾರೆ. ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮದ ಮುಂದೆ ಚರ್ಚಿಸಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ರಾಜ್ಯಾಧ್ಯಕ್ಷರಾಗ್ತಾರಾ ಅನ್ನೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕೊಡುವ ಜವಾಬ್ದಾರಿಯನ್ನು ಅಷ್ಟೇ ನಿರ್ವಹಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.