ರೆಬಲ್ ಸ್ಟಾರ್ ಅಂಬರೀಷ್ (Rebel Star Ambarish), ಮಂಡ್ಯದ ಗಂಡು, ಕಲಿಯುಗದ ಕರ್ಣ ಎಂದು ಮನೆಮಾತಾಗಿರುವ ಡಾ. ಅಂಬರೀಷ್ ಅವರ ಸ್ಮಾರಕ ನಿರ್ಮಾಣಕ್ಕೆ ಇಂದು ಶ್ರೀ ಕಂಠೀರವ ಸ್ಟುಡಿಯೋ (Shree Kanthirawa Studio) ಆವರಣದಲ್ಲಿ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ಇಂದು ಮಧ್ಯಾಹ್ನ ನೆರವೇರಿತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM bommai), ಆರ್ ಅಶೋಕ್, ಅಶ್ವಥ್ ನಾರಾಯಣ್, ಎಸ್ ಟಿ ಸೋಮಶೇಖರ್, ಸಚಿವರಾದ ಕೆ ಗೋಪಾಲಯ್ಯ, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan), ಸುಮಲತಾ ಅಂಬರೀಶ್ (Sumalatha Ambarish),ಅಭಿಷೇಕ್ ಅಂಬರೀಶ್ (Abhishek Ambarish), ಇನ್ನು ಹಲವಾರು ಗಣ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ವೇಳೆ ಸುಮಲತಾ ಅಂಬರೀಷ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yeddyurappa) ನವರಿಗೆ ನಾನು ಧನ್ಯವಾದಗಳನ್ನು ತಿಳಿಸಲು ಇಷ್ಟಪಡುತ್ತೇನೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಕೇಳಿದ ಕೂಡಲೇ ಸ್ವಲ್ಪವೂ ಯೋಚನೆ ಮಾಡದೆ ಒಪ್ಪಿಗೆಯನ್ನು ನೀಡಿದ್ದಾರೆ. ಇಂದು ಅವರ ಹುಟ್ಟುಹಬ್ಬ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು (Birthday greetings) ತಿಳಿಸುತ್ತೇನೆ ಅಂಬರೀಶ್ ಅವರ ವ್ಯಕ್ತಿತ್ವ ಏನು ಎಂಬುದು ಎಲ್ಲರಿಗೂ ಗೊತ್ತಿದೆ, ಅವರ ಮಾತು ಒರಟು, ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ, ಅವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗೂ ಅವರು ಎಂದಿಗೂ ದುಡ್ಡು ಮಾಡಬೇಕೆಂದು ಅಂದು ಕೊಂಡವರಲ್ಲ. ಅವರ ಸಮಾಜಮುಖಿ ಕೆಲಸಗಳು, ಹಾಗೂ ಅವರ ವ್ಯಕ್ತಿತ್ವ, ಅವರು ಚಿತ್ರರಂಗಕ್ಕೆ ಕೊಟ್ಟಿರುವ ಅಪಾರ ಕೊಡುಗೆ ಮುಂದಿನ ಪೀಳಿಗೆಗೆ ಗೊತ್ತಾಗಬೇಕಿದೆ. ಆದ್ದರಿಂದ ಅವರ ಸ್ಮಾರಕ ಅವಶ್ಯಕತೆ ಇದೆ ಎಂದಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾನು ಅಂಬರೀಶ್ ಆತ್ಮೀಯ ಸ್ನೇಹಿತರು. ನಾನು ಅವರನ್ನು ಅಂಬರೀಶ್ ಎಂದೇ ಕರೆಯುತ್ತಿದ್ದೆ, ಈಗಲೂ ಸಹ ಅವರನ್ನು ಅಂಬರೀಶ್ ಎಂದೇ ಕರೆಯುತ್ತೇನೆ. ಅವರೊಂದಿಗೆ 40 ವರ್ಷಗಳ ಸ್ನೇಹವಿತ್ತು. ಅವರು ತಮ್ಮ ಆತ್ಮಸಾಕ್ಷಿಯಂತೆ ಬದುಕಿದ್ದರು. ಅವರು ಹುಟ್ಟಿನಿಂದಲೂ ನಾಯಕರಾಗಿದ್ದರು. ಅವರಿಗೆ ಸ್ನೇಹಿತರೆಂದರೆ ಅಪಾರ ಪ್ರೀತಿ, ಸ್ನೇಹಿತರು ಬಂದಿದ್ದಾರೆ ಎಂದರೆ ಯಾವುದೇ ಕೆಲಸವಿದ್ದರೂ ಸಹ ಅಲ್ಲಿಯೇ ಬಿಟ್ಟು ಬಂದು ಬಿಡುತ್ತಿದ್ದರು. ಕಾವೇರಿಗಾಗಿ ಅನೇಕರು ಹೋರಾಟ ಮಾಡಿದ್ದಾರೆ, ಆದರೆ ಕಾವೇರಿಗಾಗಿ ಅಧಿಕಾರ ತ್ಯಾಗ ಮಾಡಿದ ಏಕೈಕ ವ್ಯಕ್ತಿ ಅಂಬರೀಶ್, ಅಂಬರೀಶ್ ಅವರಿಗೆ ಮಂಡ್ಯ ಎಂದರೆ ಪಂಚಪ್ರಾಣ. ಮಂಡ್ಯದಿಂದ ಯಾರಾದರೂ ನೋಡಲು ಬಂದಿದ್ದಾರೆ ಎಂದರೆ ಅವರಿಗೆ ಬಯ್ಯುತ್ತಿದ್ದರು, ಅಲ್ಲಿಂದ ನೀವು ಏಕೆ ಬಂದಿರಿ ಎಂದು ಕೇಳಿ ನಂತರ ಅವರೊಂದಿಗೆ ಖುಷಿಯಿಂದ ಮಾತನಾಡುತ್ತಿದ್ದರು. ಉತ್ತರ ಕರ್ನಾಟಕದ ಜನರೆಂದರೆ ಅವರಿಗೆ ಬಹಳ ಪ್ರೀತಿ. ಅವರು ಒಂದು ಬಾರಿ ಬಿಜಾಪುರಕ್ಕೆ ಬಂದಿದ್ದಾಗ ಅವರನ್ನು ನೋಡಲು 5 ಲಕ್ಷ ಜನ ಬಂದಿದ್ದರು ಎಂದರು. ಸುಮಲತಾ ಅಂಬರೀಶ್ ಅವರು ಅವರಲ್ಲಿರುವ ಗುಣಧರ್ಮಗಳನ್ನು ಅಳವಡಿಸಿಕೊಂಡು ಏನಾದರೂ ಸಾಧನೆಯನ್ನು ಮಾಡಬೇಕೆಂದು ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ. ಅಂಬರೀಶ್ ಹಾಗೂ ದರ್ಶನ್ ಅವರ ಗುಣಧರ್ಮಗಳು ಒಂದೇ, ಅದೇ ರೀತಿ ಅಭಿಷೇಕ್ ಅಂಬರೀಶ್ ಅವರು ಸಹ ಅವರ ಗುಣಧರ್ಮಗಳನ್ನು ಅಳವಡಿಸಿಕೊಂಡು ಬೇಗನೆ ಮಂಡ್ಯದ ಗಂಡಾಗಲಿ ಎಂದು ಹೇಳಿದರು. ಈ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೆನೆಸಿಕೊಂಡು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ದಿನವನ್ನು ಆದಷ್ಟು ಬೇಗನೆ ಪ್ರಕಟಿಸಲಾಗುವುದು ಎಂದು ಹೇಳಿದರು. ಹಾಗೆಯೇ ಅವರ ಸ್ಮಾರಕ ನಿರ್ಮಾಣ ಕೂಡ ಆದಷ್ಟು ಬೇಗ ಆರಂಭಿಸುತ್ತೇವೆ ಎಂದು ಹೇಳಿದ ಅವರು ಈ ಸಮಯದಲ್ಲಿ ಮಾತನಾಡಲು ಆಗುತ್ತಿಲ್ಲ ಹಳೆಯ ನೆನಪುಗಳು ಮರುಕಳಿಸುತ್ತಿವೆ ಎಂದು ಭಾವನಾತ್ಮಕ ನುಡಿಯ ಮೂಲಕ ಅವರ ಮಾತುಗಳನ್ನು ಮುಕ್ತಾಯಗೊಳಿಸಿದರು.