Hubli News: ಹುಬ್ಬಳ್ಳಿ: ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕರ್ನಾಟಕ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಶ್ರೀನಗರ ಕ್ರಾಸ್ ಬಳಿಯಲ್ಲಿ ಪಂಚಮಸಾಲಿ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಟೈರ್ ಗೆ ಬೆಂಕಿಗೆ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿದ್ದು ಖಂಡನೀಯ, ಪಂಚಮಸಾಲಿ ಮೀಸಲಾತಿ ಬೇಕೆ ಬೇಕು ಎಂದು ಪಟ್ಟು ಹಿಡಿದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಶಂಕರಪಾಟೀಲ್ ಮುನೇನಕೊಪ್ಪ ಅವರು, ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲೋಲ್ಲ. ಲಾಠಿ ಚಾರ್ಜ್ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಮುಗ್ಧ ಜನರ ಮೇಲೆ ಹಾಕಿದ ಪ್ರಕರಣಗಳನ್ನು ಅಮಾನತು ಮಾಡಿ, ಮುಗ್ಧ ಜನರ ಮೇಲಿನ ಪ್ರಕರಣಗಳನ್ನು ವಾಪಾಸ್ ಪಡೆಯಬೇಕು. ಲಾಠಿ ಚಾರ್ಜ್ ಮಾಡಿದ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮೊನ್ನೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ೨ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಹೋರಾಟಗಾರರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು ಇದನ್ನು ಖಂಡಿಸಿ ಬಸವಜಯಜಯಮೃತ್ಯುಂಜಯ ಸ್ವಾಮೀಜಿ ರಾಜ್ಯದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆ ಸೇರಿ ರಾಜ್ಯಾದ್ಯಂತ ಪ್ರತಿಭಟನೆ ಕಾವು ಕಂಡು ಬಂದಿತು.